ನಿನ್ನನ್ನ ಮುಂದೆ ಕೂರಿಸಿಕೊಂಡು ಬದುಕಿನ ಒಂದೊಂದು ಪುಟಗಳನ್ನ ತಿರಿವಿಹಾಕಿದ ಆ ಘಳಿಗೆ ಇನ್ನೂ ಮನಸ್ಸಿನಲ್ಲಿ ಹಸಿ ಹಸಿಯಾಗಿದೆ ಕಣೇ. ಒಂದು ಸ್ವಲ್ಪ ನಾಚಿಕೆ, ಸ್ವಲ್ಪ ಸಂಕೋಚ, ನೀನು ನಕ್ಕು ನಗದಹಾಗೆ ನಟಿಸುತ್ತಿದ್ದ ಪರಿ ನನಗೆ ಒಳಗೋಳಗೆ ಸಂತೋಷ ತರ್ತಿತ್ತು. ಆದರು ಸಂಪ್ರದಾಯಸ್ತ ಮನೆಯ ಹೆಣ್ಣು ಮಗಳಾಗಿ ಅಷ್ಟು ಮಿನಿಮಮ್ ಸಾಚಿಕೆ ಇಲ್ಲ ಅಂದರೆ ಹ್ಯಾಗೆ ….ಅದು ನನ್ನಂತ ಮೂರು ಬಿಟ್ಟವನ ಮುಂದೆ….
ಮಂದ ಬೆಳಕಿನ ಕೆಂಪು ಸಂಜೆ ನಮ್ಮಿಬ್ಬರನ್ನ ಆವರಿಸುತ್ತಿತ್ತು….. ಸುತ್ತಲು ಪ್ರಶಾಂತ ತಂಪು ಆವರಿಸಿತ್ತಾದರು, ನಾವಿಬ್ಬರು ಆಗತಾನೆ ಸ್ಪೋಟಿಸಿದ ಜ್ವಾಲಮುಖಿಯಂತಾಗಿದ್ದೆವು. ಸರಕ್ ಅಂತ ಒಮ್ಮೆ ನೋಡಿ ಮತ್ತೆ ತಲೆ ತಗ್ಗಿಸಿ ಕುತಾಗ, ಈ ಹುಡುಗಿ ಹಿಗ್ಯಾಕೆ ಆಡ್ತಾಳೆ ಅನ್ಸೊದು. ಮೆಲ್ಲನೆ ಬೀಸುವ ಗಾಳಿಗೆ ತೆಲಾಡುತ್ತಿದ್ದ ಮುಂಗುರುಳು ಮತ್ತೆ ಮತ್ತೆ ಛೆಡಿಸುತ್ತಿತ್ತು. ಒಂದು ಕ್ಷಣ ಹತ್ತಿರ ಬರೋಣ ಅಂತ ನನ್ನೆಲ್ಲ ಶಕ್ತಿಯನ್ನ ಒಂದು ಗೂಡಿಸಿಕೊಳ್ಳೊ ಹೊತ್ತಿಗೆ ….. ಎಲ್ಲೊ ಸಣ್ಣಗೆ ಹೆದರಿ, ನೀನೆಲ್ಲಿ ಎದ್ದು ಓಡಿಹೋಗ್ತಿಯೊ ಅಂತ ನಾನೆ ಸಾಮಾಧಾನ ಮಾಡಿಕೊಳ್ಳೊದು. ಆದರು ಮನಸ್ಸು ನನ್ನನ್ನ ಪುಸಲಾಯಿಸಿ …. ನಿನ್ನ ಹುಡುಗಿನೊ ಇವಳು, ಹಾಗ್ಯಾಕೊ ಅಂದ್ಕೊತ್ತಿಯಾ ….. ಅವಳಿಗೂ ನಿನ್ನ ಜೋತೆ ತಾಗಿಸಿಕೊಂಡು ಕೂರೊಕ್ಕೆ ಇಷ್ಟ ಕಣೋ ಅಂತ ಬೆನ್ನು ತಟ್ಟುತ್ತಿತ್ತು.
ಅಬ್ಬ!!! ಸಾಕು ಕಣೇ ಈ ಮೌನ, ನನ್ನ ಇನ್ನಷ್ಟೂ ಸತ್ತಾಯಿಸ ಬೇಡ. ನಿನ್ನ ಮೌದದಲ್ಲೆ ನನ್ನನ್ನ ನುಂಗ್ತಿದ್ದಿಯ, ನಾಲ್ಕು ಚಂದದ ಮಾತಾಡು. ಮುತ್ತೆನಾದರು ಉದುರಿದರೆ ಜೊಪಾನ ಮಾಡೊದು ನನಗಿರಲಿ. ಕತ್ತು ಎತ್ತಿ ಒಂದು ಸಾರಿ ಸರಿಯಾಗಿ ನನ್ನ ಗಮನಿಸು ….. ಕಣ್ಣಲ್ಲಿ ಕಣ್ಣಿಟ್ಟು ನೋಡು . ಆಮೇಲೆ ಪಶ್ಚಾತಾಪ ಪಡಬೇಡ. ಅಯ್ಯೊ ಇವ್ನ ಮೂತಿ ನಮ್ಮನೆ ನಾಯಿ ಮೂತಿತರ ಇದೆ ಅಂತ. ನಾಯಿ ಮರಿ ಆದರು ಪರವಾಗಿಲ್ಲ ನಿನ್ನ ಮಡಿಲಲ್ಲಿ ಮಲಗಿ, ಬೊಗಸೆ ಕೈಗಳಿಂದ ನೆವರಿಸಿಕೊಳ್ಳೊ ಸುಖಃವಾದರು ಸಿಗುತ್ತೆ.
ಅದೆಷ್ಟು ಚಂದಕ್ಕೆ ಒಗ್ಗೂತ್ತೊ ಕಡು ನೀಲಿ ನಿನ್ನ ಮೈಗೆ, ಅದರ್ ಮಹೀಮೆನೆ ಇರಬೇಕು ನಿನ್ನ ಇವತ್ತುನನ್ನ ಮುಂದೆ ಕೂರ್ಸಿರೊದು. ಹದವಾಗಿ ಎಣ್ಣೆ ಹಚ್ಚಿ ನವಿರಾಗಿ ಬಾಚಿಕೊ. ಅ ಕಡು ನೀಲಿ ಸೀರೆ ಉಟ್ಕೊ, ಹೆರಳ ತುಂಬ ಮಲ್ಲಿಗೆಯ ದಂಡೆ ಇರಲಿ, ಹಣೆಯ ತುಂಬ ಕುಂಕುಮ ರಾರಾಜಿಸಲಿ, ಚಿಕ್ಕ ಚುಕ್ಕೆ ದೃಷ್ಟಿಗಾಗಿ, ಕಣ್ಣಂಚಿನಲ್ಲಿ ನಾಚಿಕೆ ಇರಲಿ . ಬತ್ತಿನಿ ನಿಮ್ಮ ಮನೆಗೆ ನಿಮ್ಮಪ್ಪನ್ನ ಕೇಳಕ್ಕೆ, ಒಂದೆ ಮಾತು ….. ಇಲ್ಲ ಅಂದ್ರೆ ರೆಡಿಯಾಗಿರೂ ಹಾರಿಸ್ಕಂಡು ಹೋಗೊದಂತು ಗ್ಯಾರಂಟಿ.
