07
ಡಿಸೆ
10

‘ಪ್ರಕೃತಿ ನಿಯಮ ಮತ್ತು ಮನುಷ್ಯ ಜೀವನ’

 

ಸಾಹಿತ್ಯ, ಸಂಸ್ಕೃತಿ, ಪ್ರಕೃತಿ -ಅಂಶಗಳನ್ನು ಧ್ಯೇಯವಾಗಿಸಿಕೊಂಡಿರುವ ನಮ್ಮ ಸಂಸ್ಥೆ ‘ಪ್ರಣತಿ’ಯಿಂದ, ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ ಏರ್ಪಡಿಸಿದ್ದೇವೆ. ವಿದ್ಯಾರ್ಥಿಗಳು ‘ಪ್ರಕೃತಿ ನಿಯಮ ಮತ್ತು ಮನುಷ್ಯ ಜೀವನ’ ಎಂಬ ವಿಷಯದ ಮೇಲೆ ೨೦೦೦ ಪದಗಳಿಗೆ ಮೀರದಂತೆ ಪ್ರಬಂಧವನ್ನು ಸ್ಫುಟವಾದ ಕೈಬರಹದಲ್ಲಿ ಅಥವಾ ಡಿ.ಟಿ.ಪಿ. ಮಾಡಿ ಕಳುಹಿಸಬಹುದು. ಪ್ರಬಂಧದ ಜೊತೆ ನಿಮ್ಮ ಕಾಲೇಜ್ ಐಡೆಂಟಿಟಿ ಕಾರ್ಡ್‌ನ ಪ್ರತಿ ಇರಿಸುವುದು ಕಡ್ಡಾಯ. ಸಂಪಾದಕ ಮಂಡಲಿ ಮತ್ತು ವಿಷಯ ತಜ್ಞರು ಆಯ್ದ ಪ್ರಬಂಧಕ್ಕೆ ಸೂಕ್ತ ಬಹುಮಾನ ನೀಡಲಾಗುತ್ತದೆ. ಪ್ರಬಂಧವನ್ನು ಈ ವಿಳಾಸಕ್ಕೆ ಕಳುಹಿಸಬಹುದು ಅಥವಾ ಇ-ಮೇಲ್ ಮಾಡಬಹುದು. ಕೊನೆಯ ದಿನಾಂಕ: 30 ಡಿಸೆಂಬರ್ 2010.

ವಿಳಾಸ: ಪ್ರಣತಿ, ನಂ. ೪೪೮/ಎ, ೮ನೇ ಮೇನ್, ೭ನೇ ಕ್ರಾಸ್, ತ.ರಾ.ಸು. ರಸ್ತೆ, ಹನುಮಂತನಗರ, ಬೆಂಗಳೂರು – ೫೬೦ ೦೧೯.

ಇ-ಮೇಲ್: prabandha@pranati.in

ಯಾವುದೇ ಮಾಹಿತಿಗೆ: ೯೬೧೧೪೫೮೬೯೮ / ೯೯೮೦೦೨೨೫೪೮.

04
ಆಗಸ್ಟ್
09

ಹೂವ ಹೆಕ್ಕುವ ಸಮಯ ಮತ್ತು ಹೊಳೆಬಾಗಿಲು.

ಶ್ರೀನಿಧಿಯ ’ಹೂವು ಹೆಕ್ಕುವ ಸಮಯ’ ಕವನ ಸಂಕಲನ ಮತ್ತು  ಸುಶ್ರುತನ ’ಹೊಳೆಬಾಗಿಲು’ ಲಲಿತ ಪ್ರಬಂಧ ಸಂಕಲನ ಈ ಎರಡು ಪುಸ್ತಕಗಳ ಬಿಡುಗಡೆ ಸಮಾರಂಭವನ್ನು  ಮುಂದಿನ ಭಾನುವಾರ ಬೆಳಿಗ್ಗೆ ೧೦.೩೦ಕ್ಕೆ ಸುಚಿತ್ರ ಫಿಲ್ಮ್ ಸೊಸೈಟಿಯಲ್ಲಿ ಪ್ರಣತಿ ಆಯೋಜಿಸಿದೆ. ಅಂದು ನಮ್ಮ ಜೊತೆ ಹಿರಿಯ ಕವಿ ಎಚ್.ಎಸ್.ವೆಂಕಟೇಶಮೂರ್ತಿ ಮತ್ತು ನಾಗತಿಹಳ್ಳಿ ಚಂದ್ರಶೇಖರ್ ಇರುತ್ತಾರೆ.  ನಿಮ್ಮೆಲ್ಲರ ಬರುವಿಕೆಗಾಗಿ ನಾವೆಲ್ಲರು ಕಾಯುತ್ತಿರುತ್ತೇವೆ.

book release_invitation_final

13
ಜುಲೈ
09

ಗಮಕ ಸುಧಾ ಧಾರೆ

’ಪ್ರಣತಿ’ ಬೆಳಗಲು ಪ್ರಾರಂಭವಾಗಿ ಸುಮಾರು ಹದಿನೆಂಟು ತಿಂಗಳು ಕಳೆದಿವೆ, ಈ ಅವಧಿಯಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನ ಸಾಹಿತ್ಯ ಮತ್ತು ಸಂಸ್ಕೃತಿಯ ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಆಯೋಜಿಸಿದ ನಾವು ಮತ್ತೊಂದು ಹೊಸ ಕಾರ್ಯಕ್ರಮಕ್ಕೆ ಅಣಿಯಾಗಿ ಬಂದಿದ್ದೇವೆ. ಗಮಕ ಕಲೆಯನ್ನ ಇಂದಿನ ಪೀಳಿಗೆಗೆ ಪರಿಚಯಿಸುವ ಒಂದು ಪುಟ್ಟ ಪ್ರಯತ್ನವೆ ’ಗಮಕ ಸುಧಾ ಧಾರೆ’. ರಾಷ್ಟ್ರಕವಿ ಕುವೆಂಪು ವಿರಚಿತ “ಶ್ರೀ ರಾಮಯಣ ದರ್ಶನಂ” ಕಾವ್ಯದ ಶಬರಿಗಾದನು ಅಥಿತಿ ದಾಶರಥಿಯ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮ ಇದೆ ಶನಿವಾರ ಸಂಜೆ ೫ ಕ್ಕೆ ಬಸವನಗುಡಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ನಡೆಯಲಿದೆ. ನಿಮ್ಮೆಲ್ಲರಿಗೂ ಪ್ರಣತಿಯ ವತಿಯಿಂದ ನಲ್ಮೆಯ ಸ್ವಾಗತ…. ತಪ್ಪದೆ ಬನ್ನಿ.

inv_gamaka_005

ಗಮಕದ ಬಗ್ಗೆ ಹೆಚ್ಚಿನ ಮಾಹಿತಿಗೆ…

http://en.wikipedia.org/wiki/Gamak

http://www.itcsra.org/alankar/gamak/gamak_index.html

http://www.gswift.com/article-2.html

http://www.gswift.com/article.pdf

http://www.karnatik.com/gamakas.shtml

http://en.wikipedia.org/wiki/Gamaka_(storytelling)

31
ಡಿಸೆ
08

ನೆನಪುಗಳಿಂದ ಕನಸುಗಳೆಡೆಗೆ.

shubhashya01

ಬದುಕೆಂಬ ಪಯಣದಲ್ಲಿ ಕಳೆದು ಹೋಗಿದ್ದವರು ಮತ್ತೆ ಸಿಕ್ಕಿದ್ದಾರೆ, ಸಿಕ್ಕಿದ್ದವರು ಕಳೆದು ಹೋಗಿದ್ದಾರೆ ಆದರು ಬದುಕು ಸಾಗುತ್ತಿದೆ. ಮತ್ತೊಂದು ನವ ವರುಷದ ಹೊಸ್ತಿಲಲ್ಲಿ ಮತ್ತೆ ಮತ್ತೆ ಕಾಡುವ ನೆನಪುಗಳ ಅಮಲಿನಿಂದ ಹೊರ ಬಂದು ಹೊಸ ಕನಸುಗಳತ್ತ ಸಾಗುತ್ತಿದೆ ಬದುಕು. ಕಳೆದ ದಿನಗಳು ಸಾಕಷ್ಟು ಸುಖದ ಘಳಿಗೆಗಳನ್ನ, ಮಡುಗಟ್ಟುವ ದು:ಖವನ್ನ ತಂದಿವೆ. ಇದೆಲ್ಲದರ ಹೊರತಾಗಿ ಸುಖದಲ್ಲಿ ಹಿಗ್ಗಿಸದೆ ದು:ಖದಲ್ಲಿ ಕುಗ್ಗಿಸದೆ ಬದುಕಿನ ಪ್ರತಿ ಕ್ಷಣಗಳಲ್ಲೂ ಹೊಸ ಹೊಸ ಅನುಭವಗಳನ್ನ ತಂದ ಕಳೆದ ವರುಷಕ್ಕೆ ನನ್ನದೊಂದು “ಥ್ಯಾಂಕ್ಸ್” ಇರಲಿ.

ಪುಟ್ಟ ಸಂಬಳದ ಚಾಲಕ ವೃತ್ತಿಯಲ್ಲಿದ್ದೂ, ಸಮಯ ಸಿಕ್ಕಾಗಲೆಲ್ಲ ಪುಸ್ತಕಗಳನ್ನ ಓದಿಕೊಳ್ಳುತಾ ಹತ್ತು ಹಲವು ವಿಚಾರಗಳನ್ನ ನನ್ನೊಡನೆ ಹಂಚಿಕೊಂಡಿದ್ದ ಗೆಳೆಯ ಹಿಂತಿರುಗಿ ಬಾರದಂತೆ ಹೋರಟು ಹೋದ. ಅವನ ನಂ. ಇನ್ನು ನನ್ನ ಮೋಬೈಲ್ ನಲ್ಲೆ ಇದೆ. ಕರೆ ಮಾಡಬಹುದು?? “ಅಮರಣ್ಣ ಈ ಪುಸ್ತಕ ಓದಿದ್ಯಾ” ಕೇಳಬಹುದು?? ಒಮ್ಮೊಮ್ಮೆ ಅನ್ನಿಸುತ್ತೆ. “ಗಿರಿ”ಯನ್ನ ಕಳೆದುಕೊಂಡ ಎಲ್ಲರಿಗೂ ಅವನ ಅಗಲಿಕೆಯ ದು:ಖವನ್ನ ಬರಿಸುವ ಶಕ್ತಿ ಹೊಸ ವರುಷ ತರಲಿ.

ಕಳೆದ ನಾಲ್ಕೈದು ತಿಂಗಳುಗಳಿಂದ “ಮಾತಿಲ್ಲದ ಮೌನರಾಗಗಳು” ಮೌನವಾಗಿದಕ್ಕೆ ಕ್ಷಮೆ ಇರಲಿ. “ಸುಮ್ಮನೆ” ಫೋಟೊ ಬ್ಲಾಗು ಮತ್ತು ಚಿತ್ರ ಕವನಕ್ಕೆ ಹತ್ತಾರು ಚಿತ್ರಗಳನ್ನ ಹಾಕಿದ್ದೆ ನನ್ನ ದೊಡ್ಡ ಸಾಧನೆ :p . ಆದರೆ ಮತ್ತೊಂದೆಡೆ ಸಾಕಷ್ಟು ಪುಸ್ತಕಗಳನ್ನ ಓದಿಕೊಂಡೆ ಅನ್ನೋದು ಪ್ಲಸ್ ಪಾಯಿಂಟ್, ಈ ವರುಷದಲ್ಲಿ ಹೆಚ್ಚಿಗೆ ಓದಿದ್ದು ತೇಜಸ್ವಿಯವರ ಪುಸ್ತಗಳನ್ನ ಅನ್ನೋದು ಮತ್ತೂ ಖುಷಿಯ ವಿಷಯ. ಪುಸ್ತಕ ಓದುವುದ ಹೊರತಾಗಿ ನನ್ನ ಹಳೆಯ ಚಾಳಿಯಾದ ಸಿನಿಮಾ ಮತ್ತು ಡಾಕ್ಯೂಮೆಂಟರಿ ಸಿನಿಮಾಗಳ ಸಂಗ್ರಹ ಅವ್ಯಾಹತವಾಗಿ ಸಾಗಿದೆ. ಭಾಷೆಗಳ ಎಲ್ಲೆ ಮೀರಿ ಹಲವಾರು ಸಿನಿಮಾಗಳನ್ನ ಸಂಗ್ರಹಿಸಿದ್ದೇನೆ, ಹಲವನ್ನ ನೋಡಿಯಾಗಿದೆ. ೫೦ಕ್ಕೂ ಹೆಚ್ಚಿನ ಡಾಕ್ಯೂಮೆಂಟರಿ ಸಿನಿಮಾಗಳು ನನ್ನ ಸಂಗ್ರಹದ ಭಾಗವಾದವು. ಇಷ್ಟಾದರೂ ನನ್ನ ಸಂಗ್ರಹದ ದಾಹ ಇಂಗಿಲ್ಲ. ಇವನ್ನೆಲ್ಲ ಸಂಗ್ರಸಿದಕ್ಕಿಂತ ಗೆಳೆಯರೋಡನೆ ಹಂಚಿಕೊಂಡಾಗಿನ ತೃಪ್ತಿಯೆ ಬೇರೆ….. ಈ ಅವಕಾಶ ದೊರೆತ ನಾನು ಧನ್ಯ.

ಕಳೆದ ವರುಷದ ಅಮಲಿನಿಂದ ಕಳಚಿಕೊಂಡು ಹೊಸ ವರುಷದಲ್ಲಿ ಮಾಡಬೇಕಾದ/ಮಾಡಿಸಬೇಕಾದ ಕಾರ್ಯಕ್ರಮ/ಕೆಲಸಗಳು ಸಾಕಷ್ಟಿವೆ.

* ನಮ್ಮ ಭಾವಗೀತೆಗಳ ಸಂಗ್ರಹ ಹೊಸ ವರುಷದಲ್ಲಿ ಶತಕ ಕಾಣಲಿದೆ (ಸದ್ಯ ನನ್ನ ಬಳಿ ೯೬ ಭಾವಗೀತೆಗಳ  ಸಂಗ್ರಹಗಳಿವೆ).
* ಗೆಳೆಯ ಶೀನಿಧಿ ಡಾ.ಹೆಚ್ ಎಸ್ ವೆಂಕಟೇಶಮೂರ್ತಿಯವರ ಸಮಗ್ರ ಕಾವ್ಯ ಕೊಡಿಸುತ್ತಾನೆ(೨೦೦೮ ರಲ್ಲೆ ತಲುಪಬೇಕಿತ್ತು ಪರವಾಗಿಲ್ಲ ಕಾಯ್ತೇನೆ 🙂 )
* ನಮ್ಮ ಸಿನಿಮಾ ಮತ್ತು ಡಾಕ್ಯೂಮೆಂಟರಿ ಸಿನಿಮಾ ಸಂಗ್ರಹಕ್ಕೆ ಮತ್ತೊಂದಷ್ಟು ಆಹಾರ ಸಿಗಲಿ (ನೀವು ಪ್ರಾರ್ಥಿಸಿಕೊಳ್ಳಿ ನನಗೆ ಸಿಕ್ಕರೆ ನಿಮಗೂ ಸಿಕ್ಕಹಾಗೆ ತಾನೆ).
* ೨೦೦೮ರಲ್ಲಿ ಶುರುಮಾಡಿದ ಚಿತ್ರಸ್ಪಂದನ ಮತ್ತು ನಾಗರೀಕ ಅಂತರ್ಜಾಲ ತಾಣಗಳ ಕೆಲಸ ಕಾರಣಾಂತರಗಳಿಂದ “ಸರಕಾರಿ ಕೆಲಸದ” ಹಾಗೆ ಕುಂಟುತ್ತ ಸಾಗಿದೆ, ಹೊಸ ವರುಷದಲ್ಲಿ ಚುರುಕಾಗಲಿ.
* ನಮ್ಮ ಕವನ ಸಂಗ್ರಹಕ್ಕೆ ಇನ್ನೂ ಹೆಚ್ಚಿನ ಕವನಗಳನ್ನ ಸೇರಿಸಲು ಸಮಯ ಸಿಗಲಿ.
* ೨೦೦೮ರಲ್ಲಿ ಮೂರು ಯಶಸ್ವಿ ಕಾರ್ಯಕ್ರಮಗಳನ್ನ ಕೊಟ್ಟ ಕನಸಿನ ಕೂಸು “ಪ್ರಣತಿ” ೨೦೦೯ರಲ್ಲಿ ಹೊಸ ಹೊಸ ಕಾರ್ಯಕ್ರಮಗಳನ್ನ ಮಾಡುವಂತಾಗಬೇಕು.
* ಹೊಸ ವರುಷದಲ್ಲಿ ಹತ್ತಾರು ಚಾರಣಗಳನ್ನ ಮಾಡುವಂತಾಗಲಿ.

ಸದ್ಯಕ್ಕೆ ಈ ಲಿಸ್ಟನ್ನ ಇಲ್ಲಿಗೆ ನಿಲ್ಲಿಸೋಣ ಅಂತ! ನಾನು ಒಬ್ಬ ಸಾಮಾನ್ಯ ಮನುಷ್ಯ ಅಲ್ವ ಆಸೆಗಳ ಬುತ್ತಿ ಮುಗಿಯೋದೆ ಇಲ್ಲ… ಕನಸುಗಳಿಗೆ ಎಲ್ಲೆ ಅನ್ನೊದೆ ಇರೋಲ್ಲ 🙂

ನಿಮ್ಮೆಲ್ಲರ ಕನಸುಗಳ ನನಸಾಗಿಸುವ ಘಳಿಗೆಗಳನ್ನ ಹೊಸ ವರುಷ ಹೊತ್ತು ತರಲಿ ….
ಶುಭ ಹಾರೈಕೆಗಳೊಂದಿಗೆ.
-ಅಮರ

03
ಜುಲೈ
08

ಬಾಗಿಲಿಗೆ ಜೋತುಬಿದ್ದ ಭಾರದ ಬೀಗ ಮಾತಾಡದೆ ಮೌನವಾಗಿದೆ.

ನಂಜರಾಜ ಬಹದ್ದೂರ್ ಛತ್ರದ ಮುಂದೆ ಸಾಗುವ ರಸ್ತೆ ಶಿವರಾಮ ಪೇಟೆಯ ಮುಖ್ಯ ರಸ್ತೆಗಳಲೊಂದು, ಮೈಸೂರಿನ ಹಳೆ ತಲೆಮಾರಿನ ಅಂಗಡಿ ಮುಂಗಟ್ಟುಗಳು ರಸ್ತೆಯುದ್ದಕ್ಕೂ ಚಿಕ್ಕಗಡಿಯಾರ ವೃತ್ತದವರೆಗೆ ಪೊಣಿಸಿದಂತೆ ಎರಡು ಬದಿಯಲ್ಲಿ ಸಾಲುಗಟ್ಟಿವೆ. ಮೊದಲು ಬಲಕ್ಕೆ ಸಿಗುವ ಶೃಂಗಾರ್ ಹೋಟೆಲು, ಅದೇ ಸಾಲಿನಲ್ಲಿ ನಾಲ್ಕೈದು ಮಳಿಗೆಗಳನ್ನು ದಾಟಿ ಸಾಗಿದರೆ ಎದಿರಾಗುವುದು ಚಂದ್ರು ಸೌಂಡ್ ಸಿಸ್ಟಮ್. ಸುಮಾರು ೧೦೦-೧೫೦ ವರ್ಷಗಳಷ್ಟು ಹಳೆಯದಾದ ಮಂಗಳೂರು ಹೆಂಚಿನ ಚಾವಣಿಯ ಕಟ್ಟಡ, ಒಳಗೆ ಪ್ರವೇಶಿಸುತ್ತಿದ್ದಂತೆ ಎಡಭಾಗದಲ್ಲಿ ಟೆಲಿಪೋನ್ ಭೂತಿನ ಎರಡು ಡಬ್ಬಗಳು, ಬಲಭಾಗದಲ್ಲಿ ಕೂರಲು ಹಾಕಿದ್ದ ಬೆಂಚು. ಒಳಕೋಣೆಯಲ್ಲಿ ದಡೂತಿ ಮರದ ಪೆಟ್ಟಿಗೆಗಳ ಹಾಗೆ ಕಾಣುತ್ತಿದ್ದ ಧ್ವನಿವರ್ಧಕಗಳು, ಮೂಲೆಗೆ ಆತುಕೊಂಡಿದ್ದ ಮರದ ಕಪಾಟಿನ ತುಂಬಾ ಸಾಲು ಸಾಲಾಗಿ ಜೋಡಿಸಿದ್ದ ಗ್ರಾಮೊಫೋನು ತಟ್ಟೆಗಳು, ಟೇಪ್ ರೇಕಾರ್ಡ್ ಮಾಡಲು ಬಳಸುತ್ತಿದ್ದ ಬೆಳ್ಳಿ ಬಣ್ಣದ ಹೊಳೆವ ಫಿಲಿಫ್ಸ್ ರೇಕಾರ್ಡರ್, ವಿವಿಧ ಬಣ್ಣ ಗಾತ್ರದ ಮೂರ್ನಾಲ್ಕು ಗ್ರಾಮೊಫೋನ್ ಪ್ಲೇಯರುಗಳು. ಪಕ್ಕದ ಕೋಣೆಯಿಂದ ಆಗಾಗ ಸದ್ದುಮಾಡುತ್ತಾ ಮೌನವಾಗುತ್ತಾ ಕುಟ್ಟುವ ಬೆರಳುಗಳಿಗಾಗಿ ಹಪಹಪಿಸುವ ಬೆರಳಚ್ಚು ಯಂತ್ರಗಳು. ಆ ಹೊತ್ತಿಗಾಗಲೆ ಕಂಪ್ಯೂಟರ್ ಡಿಟಿಪಿ ಸೆಂಟರುಗಳ ಭರಾಟೆಯಿಂದ ತಮ್ಮ ಅಸ್ಥಿತ್ವ ಕಳೆದುಕೊಳ್ಳುತ್ತ ಅವಸಾನದ ಅಂಚಿನಲ್ಲಿದ್ದ ಬೆರಳಚ್ಚು ಯಂತ್ರಗಳು ಮತ್ತು ಅವಲಂಬಿತರು.

ಸಾವಿರಾರು ಗ್ರಾಮೊಫೋನು ತಟ್ಟೆಗಳ ಸವಿವರವಾದ ಮಾಹಿತಿಯನ್ನ ಸುಮಾರು ೫೦೦ ಪುಟಗಳ ಪುಸ್ತಕದಲ್ಲಿ ಕನ್ನಡ, ಹಿಂದಿ, ಇತರೆ ಹೀಗೆ ವರ್ಗಿಕರಿಸಿ ಚಿತ್ರ ಬಿಡುಗಡೆಯಾದ ಇಸವಿಯ ಅನುಕ್ರಮವಾಗಿ ಬರೆದಿಟ್ಟಿದ್ದರು. ನಾವು ಭೇಟಿ ನೀಡಿದಾಗಲೆಲ್ಲ ಪುಸ್ತಕದ ಪ್ರತಿ ಹಾಳೆಯನ್ನ ತನ್ಮಯತೆಯಿಂದ ತಿರುವಿ, ನಮಗಿಷ್ಟವಾದ ಪಟ್ಟಿ ತಯಾರಿಸಿ ಕ್ಯಾಸೆಟ್ ನೊಂದಿದೆ ಮಾದೇವನಿಗೆ ಕೊಟ್ಟರೆ ಅರ್ಧ ಕೆಲಸ ಮುಗಿದ ಹಾಗೆ. ಅವನಿಗೆ ಆಗಾಗ ಕಾಫಿ ಸಿಗರೇಟು ಕೊಡಿಸಿ ನಮ್ಮ ಕೆಲಸಕ್ಕೆ ವಿಶೇಷ ಗಮನ ಕೊಡುವಂತೆ ನೋಡಿಕೊಳ್ಳುತ್ತಾ, ಒಂದೊಂದು ಕ್ಯಾಸೆಟ್ ರೆಕಾರ್ಡ್ ಮಾಡಿಸುವಾಗಲು ಅದೆಷ್ಟು ಬಾರಿ ಅವನ ಅಂಗಡಿಗೆ ಅಲೆದಿದ್ದೆವೊ ದೇವರೆ ಬಲ್ಲ. ಮತ್ತೆಲ್ಲು ಸಿಗದ ಸಂಗ್ರಹ ಅವನ ಬಳಿ ಇದ್ದುದ್ದರಿಂದ ನಮಗೂ ಅನ್ಯ ಮಾರ್ಗವಿರಲಿಲ್ಲ. ಕ್ಯಾಸೆಟ್ಟು ಕೊಳ್ಳಲು ೩೦ ರೂ, ಮಾದೇವನಿಗೆ ೨೫ ರೂ, ನಾಲ್ಕೈದು ಬಾರಿ ಅಲೆದಾಡಿದ್ದಕ್ಕೆ ಪೆಟ್ರೊಲ್ ಖರ್ಚು ೩೦ ರಿಂದ ೪೦ ರೂ ಹೀಗೆ ೧೦೦ ರೂಗಳ ಗಡಿ ತಲುಪುತ್ತಿತ್ತು ನಮ್ಮ ಹಾಡುಗಳ ಖಯಾಲಿ. ಒಮ್ಮೆ ಹಾಡುಗಳನ್ನ ಕೇಳಿದರೆ ಅಷ್ಟೆಲ್ಲ ಪರಿಶ್ರಮ ವ್ಯರ್ಥವಾಗಿಲ್ಲ ಅನ್ನೊ ಸಮಾಧಾನ. ಚೀಟಿಯಲ್ಲಿ ಬರೆದ ಹಾಡಿನೆಡೆಗೆ ಕಣ್ಣಾಡಿಸಿ ಕಪಾಟಿನ ಸಾಲುಗಳಲ್ಲಿ ಅಡಗಿದ್ದ ಸಾವಿರಾರು ಕರಿಯ ತಟ್ಟೆಗಳಲ್ಲಿ ನಿಖರವಾದುದನ್ನು ಒಮ್ಮೆಲೆ ತೆಗೆಯಬಲ್ಲ ಅವನ ಪರಿಣತಿಯನ್ನ ಮೆಚ್ಚಲೆ ಬೇಕು, ಅಷ್ಟಲ್ಲದೆ ತಿರುಗುತ್ತಿರುವ ಗ್ರಾಮೊಫೋನಿನ ಮೇಲೆ ತಟ್ಟೆ ಇರಿಸಿ ಒಂದೆ ಕ್ಷಣದಲ್ಲಿ ನಮಗೆ ಬೇಕಾದ ಹಾಡಿನ ಪ್ರಾರಂಭಕ್ಕೆ ಮುಳ್ಳನ್ನು ಇರುಸಿ ರೆಕಾರ್ಡಿಂಗ್ ಚಾಲು ಮಾಡುವಾಗ ಅವನ ಆತ್ಮವಿಶ್ವಾಸ ಮತ್ತು ಅನುಭವ ಎದ್ದುಕಾಣುತ್ತಿದ್ದವು. ಇವತ್ತಿಗೂ ಅವನು ಮಾಡಿಕೊಟ್ಟ ಕ್ಯಾಸೆಟ್ಟುಗಳ ಸಾಲುಗಳು ಮನೆಯ ಕಪಾಟಿನಲ್ಲಿ ಕೇಳುವವರಿಗಾಗಿ ಕಾದಿವೆ. ನಂತರದ  ಎಂಪಿತ್ರಿ ಕ್ರಾಂತಿಯ ಭರಾಟೆಯಲ್ಲಿ ತನ್ನ ಅಳಿದುಳಿದ ಕರಿಯ ತಟ್ಟೆಗಳಲ್ಲಿ ಮಾದೇವ ಎಲ್ಲಿ ಕಳೆದು ಹೋದನೊ ಗೊತ್ತಿಲ್ಲ. ಅವನ ಅಂಗಡಿಯ ಬಾಗಿಲಿಗೆ ಜೋತುಬಿದ್ದ ಭಾರದ ಬೀಗ ಮಾತಾಡದೆ ಮೌನವಾಗಿದೆ.

02
ಜೂನ್
08

ಒಂದಷ್ಟು ಕವನಗಳ ಜೇನುಮಳೆ.

ಕವನಗಳ ಭಾವ ಜಗತ್ತಿನಲ್ಲಿ ನನಗೆ ಮೊದಲು ಪರಿಚಿತರಾದವರು ಕೆ ಎಸ್ ನರಸಿಂಹಸ್ವಾಮಿಯವರು ಅದಕ್ಕೆ ಹಲವಾರು ಕಾರಣಗಳಿವೆ ಸರಳ ಭಾಷಾ ಪ್ರಯೋಗ ಇರಬಹುದು, ಕವನಗಳ ವಸ್ತುಗಳ ನಮ್ಮ ದೈನಂದಿನ ಬದುಕಿನಲ್ಲಿ ಹಾಸುಹೊಕ್ಕಾಗಿ ಇದದ್ದು ಇರಬಹುದು, ಭಾವಗೀತೆಗಳಾಗಿ ಎಲ್ಲರ ಮನವನ್ನ ಆವರಿದ್ದು ಇರಬಹುದು ಹೀಗೆ ಪಟ್ಟಿ ಬೆಳೆಯುತ್ತಾ ಸಾಗುತ್ತೆ. ನಂತರದ ದಿನಗಳಲ್ಲಿ ಬೇಂದ್ರೆ, ನಿಸಾರ್ ಅಹಮದ್, ಬಿ ಅರ್ ಲಕ್ಷ್ಮಣರಾಯರು, ಹೆಚ್ ಎಸ್ ವೆಂಕಟೇಶಮೂರ್ತಿ ಮತ್ತು ಲಕ್ಷ್ಮೀನಾರಾಯಣ ಭಟ್ಟರ ಹಲವಾರು ಕವನಗಳು ನನಗೆ ಮುದ ನೀಡಿವೆ. ಹೀಗೆ ನನಗಿಷ್ಟವಾದ ಕವನಗಳನ್ನ ಸಾಹಿತ್ಯಾಸಕ್ತರಲ್ಲಿ ಹಂಚಿಕೊಳ್ಳುವ ವೇದಿಯನ್ನ ಮೊದಲು ಕಲ್ಪಿಸಿದ್ದು ಆರ್ಕೂಟ್ ಪೊರ್ಟಲ್. ದಿನ ಒಂದರಂತೆ ಸರಿ ಸುಮಾರು ಒಂದು ವರ್ಷಗಳ ಅವಧಿಯಲ್ಲಿ ೨೫೦ಕ್ಕೊ ಹೆಚ್ಚು ಕವನಗಳನ್ನ ಬರಹ ತಂತ್ರಾಂಶ ದಲ್ಲಿ ಟೈಪ್ ಮಾಡಿ ಪಿಡಿಎಫ್ ಫೈಲ್ಗಳಾಗಿ ಮಾಡಿ ಮೇಲ್ ಕೂಡ ಮಾಡುತ್ತಿದ್ದೆ. ಕೆಲಸದ ಒತ್ತಡದಿಂದ ಕಳೆದ ೨- ೩ ತಿಂಗಳಿದ ಕವನಗಳನ್ನ ಹಂಚಿಕೊಳ್ಳೊದನ್ನ ನಿಲ್ಲಿಸಬೇಕಾಯಿತು. ಒಂದಷ್ಟು ಕವನಗಳನ್ನ ಕನ್ನಡ ಲಿರಿಕ್ಸ್ ವೆಬ್ ಸೈಟ್ ನಲ್ಲಿ ಹಾಕಿದ್ದೆ ನಂತರದ ದಿನಗಳಲ್ಲಿ ಅದೂ ಆಗಲಿಲ್ಲ. ಈಗ ನನ್ನಲ್ಲಿದ ಎಲ್ಲ ಕವನಗಳನ್ನ ಒಟ್ಟಿಗೆ ಸಾಹಿತ್ಯಾಸಕ್ತರಿಗೆ ಲಭ್ಯವಾಗುವಂತೆ ಗೂಗಲ್ ಪೇಜ್ (ಕವನ ಸಂಗ್ರಹ) ಮತ್ತು ಗೂಗಲ್ ಸೈಟ್ ನಲ್ಲಿ ಹಾಕಿದ್ದೇನೆ. ಮತ್ತೆ ಬಿಡುವು ಮಾಡಿಕೊಂಡು ಹೊಸ ಹೊಸ ಕವನಗಳನ್ನ ಇಲ್ಲಿ ಸೇರಿಸುವ ಭರವಸೆಯೊಂದಿಗೆ ನಿಮಗಿದೊ ಅರ್ಪಣೆ. ನಿಮಗೆ ಈ ಕವನಗಳ ಪಿಡಿಎಫ್ ಆವೃತ್ತಿ ಬೇಕಿದ್ದಲ್ಲಿ ನಿಮ್ಮ ಮೈಲ್ ವಿಳಾಸ ಕಳುಹಿಸಿ.

*********************************************

ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟರ ಹಲವಾರು ಕವನಗಳು ನನಗೆ ಇಷ್ಟ, ಅದರಲ್ಲೂ ನನ್ನನ್ನ ತುಂಬಾ ಕಾಡಿದ ಒಂದು ಕವನವನ್ನ ಇಲ್ಲಿ ಬರೆದಿರುವೆ. ಕವನ ಸಂಕಲನ – ವೃತ್ತ  ಕವನದ ಶಿರ್ಶಿಕೆ “ಸೀಮಂತಿನಿ”, ನಿಮಗೂ ಕೂಡ ಹಿಡಿಸ ಬಹುದು.

ಸೀಮಂತಿನಿ.

ಯಾರಿವಳು?

ಇದ್ದಕ್ಕಿದ್ದಂತೆ ಪಕ್ಕದಲೆ ಬದಲಾದವಳು?

ಗಂಡನೆಂಬವನನ್ನ ಕಂಡ ಕಂಡಂತೆಯೇ

ಕಂದ ಎಂಬಂತೆ ಮಮತೆಯಲಿ ಮಾತಾಡುವಳು!

ಅಪ್ಪ ಬಂದವನನ್ನು ತಪ್ಪು ಮಾಡಿದ ಎಳೆಯನಂತೆ

ಉಡಿಯಲ್ಲಿ ಹಾಕಿ ಶಮಿಸಿದವಳು

ಗುಟುರು ಮದವನು ಮೆಟ್ಟಿ ಎದ್ದ ಹೆಡೆಯನು ತಟ್ಟಿ

ಹೊಲೆಗಸದ ತೊಟ್ಟಿಯನು ಹೀಗೆ ತೊಳೆದವಳು?

ಇವಳೆ

ಬೆನ್ನ ಬಳಿ ಬಂದು ಕೊರಳಿಗೆ ತೂಗುತಿದ್ದವಳು?

ಕೈಯ ಪುಸ್ತಕವನ್ನು ಕಿತ್ತು ಗೂಡೊಳಗೆಸೆದು

ಸಾಕು ಬಿಡಿ ಸನ್ಯಾಸ ಎಂದು ತೋಳೆಳೆದವಳು!

ಕೆನ್ನೆಯಲಿ ಬೆರಳಿಟ್ಟು

ಕೊರಳ ಸರ ತುಟಿಗಿಟ್ಟು

ಏನೊ ಕಕಮಕ ಹಿಡಿಸಿ ಗೆದ್ದು ನಕ್ಕವಳು?

ಈಗ ಅದೆ ಹುಡುಗಿ

ಬೇಸಿಗೆಯ ಉರಿಗಣ್ಣ

ಬೆಳುದಿಂಗಳಲಿ ತೊಳೆದು

ಗರ್ಭಗುಡಿ ಹಣತೆಯನು ಹಚ್ಚಿರುವಳು;

ಮೊನ್ನೆ ಸೀಮಂತದಲಿ ಹಸೆಯೇರಿದಾಗಿಂದ

ಜಗದಂಬೆ ಭಾವಕ್ಕೆ ಸಂದಿರುವಳು!

ಒಲೆ ಮೇಲೆ ಅನ್ನ ಸೀಯುತ್ತಲಿದೆ ಮೊನ್ನೆ;

ಎದುರಿಗೇ ಕುಳಿತು

ಹಾಲಪಾತ್ರೆಗೆ ಬಿದ್ದ ಇರುವೆಗಳ ಮೇಲೆತ್ತಿ

ನೆಲಕಿಳಿಸಿ ಹರಿಯಬಿಡುತಿದ್ದಾಳೆ, ಒಂದೊಂದೆ!

ಪೊರಕೆ ತುದಿಯಲಿ ಹಿಂದೆ

ಜಿರಲೆಗಳ ಬಡಿದವಳು ಇವಳೆ?

‘ಪಾಪ’ ಎಂದರೆ – ‘ಅಹ! ಶುದ್ದ ಕನ್ನಡಿಗ’

ಎಂದು ಛೇಡಿಸಿದವಳು!

ಈಗ ಹೊರಳಿದೆ ಕರಳು,

ಮೊದಲ ಬಾರಿಗೆ ಬಸಿರ ಸವರಿದೆ ಯಶೋದೆಯ

ಬೆಣ್ಣೆ ಬೆರಳು.

ಎಲ್ಲಿ ತರೆಮರೆಸಿಕೊಂಡುವೊ ಏನೊ ಈಗಿವಳ

ಸಿನಿಮ ಹೋಟೆಲುಗಳಿಗೆ ಅಲೆವ ಚಪಲ,

ಆಗೀಗ(ನನ್ನನೂ ಜೊತೆಗೆಳೆದುಕೊಂಡು!)

ದೇವಸ್ಥಾನ ಯಾತ್ರೆಯಷ್ಟೇ ಈಗ ಎಲ್ಲ!

ಮುಡಿತುಂಬ ಹಣೆತುಂಬ ಕೈತುಂಬ ತನ್ನೆಲ್ಲ

ಮಾಂಗಲ್ಯ ಸೌಭಾಗ್ಯ ಮೆರೆಸಿ,

ಶಾಂತಮುಖದೊಳಗೊಂದು ಮರುಳುನಗೆ ನಿಲಿಸಿ,

ಇವಳೀಗ ಕಾರ್ತೀಕದಾಗಸದ ಹಾಡು,

ಕಣ್ಣೊ, ಹುಣ್ಣಿಮೆಯಿರುಳ ಕಡಲ ಬೀಡು!

ಜೊತೆಗೆ ನಡೆವಾಗ

ನನ್ನ ಹೆಜ್ಜೆಗು ಹೆಜ್ಜೆ ಮುಂದೆಯಿಟ್ಟು,

ಈಗ? ಎಂಬಂತೆ ಹುಬ್ಬೆತ್ತರಿಸಿ ನಕ್ಕು ಸ್ಪರ್ಧಿಸಿದ್ದವಳು

ಈಗೆಲ್ಲ ಅಬ್ಬರ ಬಿಟ್ಟು

ಕಾಲೆಳೆಯುವಳು ಏಕೊ ತೀರ.

ಕನಸುಗಣ್ಣೆಗೆ ದಾರಿಯಲ್ಲು ಏನೋ ಧ್ಯಾನ,

ಮೈ ಮಾತ್ರ ಇಲ್ಲಿ, ಮನಸೆಲ್ಲೊ ಹೊರಟಿದೆ ಯಾನ,

ಅಡಿಗಡಿಗು ಒಂದೊಂದು ಗುಡಿಕಟ್ಟಿ ಬಾಗಿಲಲಿ

ಹೊರಳಿ ಬೇಡಿದೆ ಮಗುವಿಗಭಯದಾನ.

ಎಲ್ಲ ಬಾಳಲಿ ಎಂಬ ಭಾವ

ಚೆಲ್ಲುತಿದೆ ಕಣ್ಣು ಅಲುಗಿದೆ ಹೊಟ್ಟೆಯೊಳಗಿರಿವ ಪುಟ್ಟ ಜೀವ;

ಗಟ್ಟಿ ಸ್ವಾರ್ಥಕೆ ಈಗ ಮಳೆ ಬಿದ್ದು ಮೈಯೊಡೆದು

ಉಸಿರಾಡುತಿದೆ ಮಣ್ಣ ತೇವ!

-ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ.

http://sites.google.com/site/kavanasangraha/

http://kavana.sangraha.googlepages.com/home

26
ಮೇ
08

ಬೊಗಸೆಯಲ್ಲಿ ಹಿಡಿದಷ್ಟು.

ನವಕರ್ನಾಟಕ ಪ್ರಕಾಶನ ಪುಸ್ತಕ ಮಳಿಗೆಗಳಿಗೆ ಹೋಗುವುದೆಂದರೆ ನನಗೆಲ್ಲಿಲ್ಲದ ಖುಷಿ, ಸಪ್ನದಲ್ಲಿರುವ ಹಾಗೆ ಹೆಜ್ಜೆ ಹೆಜ್ಜೆಗೂ ಸೆಕ್ಯೂರಿಟಿ ಗಾರ್ಡುಗಳು, ತಣ್ಣನೆ ಕೊರೆಯುವ ಎಸಿಗಳು, ಸಾಲು ಸಾಲಾಗಿ ವರ್ಗೀಕರಿಸಿದ ಕಪಾಟುಗಳಲ್ಲಿ ಪೇರಿಸಿಟ್ಟ ಪುಸ್ತಕಗಳು, ಕೊಳ್ಳುವವರೆಡೆಗಿನ ಉದಾಸೀನ ಇದ್ಯಾವುದು ನವಕರ್ನಾಟಕದಲ್ಲಿ ಇಲ್ಲದಿದ್ದರು ಕೊಳ್ಳುವವರೊಂದಿಗೆ ಆಪ್ತವಾಗಿ ವ್ಯವಹರಿಸುವ ವಾತಾವರಣ ನನ್ನನ್ನ ಸೆಳೆಯುತ್ತದೆ ಎನ್ನಬಹುದು. ಮತ್ತೊಂದು ಆಕರ್ಷಕ ಸಂಗತಿಯೆಂದರೆ ಪ್ರತಿ ಪುಸ್ತಕ ಖರೀದಿಗೂ ೧೦% ರಿಯಾಯಿತಿ ವರ್ಷದ ೩೬೫ ದಿನವೂ ದೊರೆಯುತ್ತದೆ(ಯಾವುದೆ ಕನಿಷ್ಟ ಮಿತಿ ಇಲ್ಲದೆ). ಇಂಥ ವಾತವರಣ ಇನ್ನು ಹೆಚ್ಚು ಪುಸ್ತಕಗಳನ್ನ ಕೊಳ್ಳಲು ಓದುಗನನ್ನ ಪ್ರೇರೇಪಿಸೊದಂತು ನಿಜ. ಸದ್ಯಕ್ಕೆ ಪ್ರಕಟಣೆಯಲ್ಲಿಲ್ಲದ ಹಲವಾರು ಹಳೆಯ ಪುಸ್ತಕಗಳು, ಕಪಾಟಿನ ಸಾಲು ಸಾಲುಗಳಲ್ಲಿ ಎಲೆಮರೆಯ ಕಾಯಿಗಳಂತೆ ಅಡಗಿರುತ್ತವೆ ಅನ್ನೊದು ಮತ್ತೊಂದು ಕುತೂಹದ ಸಂಗತಿ ಇಲ್ಲಿಯದು. ಸ್ವಲ್ಪ ಸಮಯ ಹುಡುಕಿದರು ಒಂದೆರಡು ಅಂತಹ ಪುಸ್ತಕಗಳು ಸಿಗುವುದಂತು ಗ್ಯಾರಂಟಿ. ಹಾಗೆ ಕಳೆದ ಬಾರಿಯ ಭೇಟಿಯಲ್ಲಿ “ನಮ್ಮನೆ ಪುಸ್ತಕ”ಕ್ಕೆ ಸೇರಿದ ಎರಡು ಪುಸ್ತಕಗಳು “ನೀಲಿ ಮಳೆ” ಜಯಂತ ಕಾಯ್ಕಿಣಿಯವರ ಕವನ ಸಂಕಲನ ಮತ್ತು “ನಾತಲೀಲೆ” ಎಸ್ ಸುರೇಂದ್ರನಾಥ್ ಅವರ ಸಣ್ಣ ಕಥೆಗಳು.

ನೀಲಿ ಮಳೆ ಕವನ ಸಂಕಲನ.

ನೀಲಿ ಮಳೆ ಕವನ ಸಂಕಲನದಲ್ಲಿ ಒಟ್ಟು ೫೦ ಕವನಗಳಿದ್ದು ಪಿ ಲಂಕೇಷರ “ಪತ್ರಿಕೆ ಪ್ರಕಾಶನ” ದಿಂದ ೧೯೯೭ ರಲ್ಲಿ ಪ್ರಕಟವಾಗಿತ್ತು. ಜಯಂತ ಕಾಯ್ಕಿಣಿವರ ಸಣ್ಣ ಕಥೆಗಳನ್ನ ಗಮನಿಸಿದಾಗ ಅವುಗಳಲ್ಲಿ ಮುಂಬೈ ಬದುಕಿನ ಪ್ರಭಾವ ಅಗಾಧವಾಗಿದೆ ಅನ್ನ ಬಹುದು, ಹಾಗೆ ನೀಲಿ ಮಳೆ ಕವನಗಳಲ್ಲಿ ಮುಂಬೈ ಬದುಕಿನ ಸೂಕ್ಷ್ಮ ಸಂವೇದನೆಗಳನ್ನ ಹಿಡಿದಿಟ್ಟಿದ್ದಾರೆ. ನೀಲಿ ಮಳೆಯ ಅರಿಕೆಯ ಸಾಲುಗಳಲ್ಲಿ ಜಯಂತ ಕಾಯ್ಕಿಣಿ ಹೀಗೆ ಬರೆಯುತ್ತಾರೆ…

ಅರಿಕೆ.

ಸಂತೆಯಲ್ಲಿ ಕವೀ ಎಂಬ ಬೈಗುಳ ಕೂಗಿ ಕುಟ್ಟಿ
ಕಾಲರು ಹಿಡಿದು ಮಾಯವಾಗುವ ಅದೃಶ್ಯ ವ್ಯಕ್ತಿಗಳು

ಜನರಲ್ ವಾರ್ಡಿನ ಅನಾಮಿಕರಿಗೆ ಹಾಲು ಅನ್ನ
ಉಣಿಸಿ ಜೋಗುಳ ಹಾಡುವ ರಾತ್ರಿ ಪಕ್ಷಿಗಳು

ರಿಮಾಂಡ್ ಹೋಮಿನ ಕತ್ತಲಲ್ಲಿ ಹೊಳೆವ ಕಣ್ಣುಗಳು

ಶ್ರಾವಣ ಮಧ್ಯಾಹ್ನದ ಹತ್ತು ವರ್ಷಗಳ ನಂತರ
ತುಂತುರು ತುಂತುರು ನೀಲಿ ಮಳೆ.

ಪ್ರಕಟಿಸುತ್ತಿರುವ ಲಂಕೇಶರಿಗೆ ನಷ್ಟವಾಗದಿರಲಿ.

                                       -ಜಯಂತ
                                       ೨೨.೧.೧೯೯೭

ಜಾಗರದ ಕೊನೆಗೆ.

ರಾತ್ರಿ ಪಾಳಿ ಮುಗಿಸಿದ ದಾದಿ
ಬಸ್ಟಾಪಿನಲ್ಲಿದ್ದಾಳೆ. ಆಗಷ್ಟೆ ಊದಿನ ಕಡ್ಡಿ
ಹಚ್ಚಿಕೊಂಡ ರಿಕ್ಷಾ ಹಾಲಿನವ್ಯಾನು ಹಾದಿವೆ
ಎಮರ್ಕನ್ಸಿಗೆಂದು ಪಜಾಮದಲ್ಲೆ ಬಂದಿದ್ದ ಡಾಕ್ಟ್ರು
ಗೇಟಿನ ಬಳಿ ಹಾರ್ನು ಬಾರಿಸಿ ಹೊರಟಿದ್ದಾರೆ
ಕನಸಿನ ಸುರಂಗಗಳಲ್ಲೂ ಓಡಿ ಓಡಿ ದಣಿದವರು
ರಸ್ತೆ ಬದಿ ಮೆಲ್ಲಗೆ ವಿಗ್ರಹಗಳಂತೆ ಏಳುತ್ತಿದ್ದಾರೆ

ಟಿಫಿನ್ ಕ್ಯಾರಿಯರ್ಗಳು ಹೂವಿನ ಅಂಗಡಿಗಳನ್ನು
ಹಲೋ ಅಂದಿವೆ. ಸೈಕಲ್ ಬೆಲ್ ಗಳು ಕೊಳದೊಳಗಿನ
ಪ್ಲಾಸ್ಟಿಕ್ ಕಮಲಗಳನ್ನ ಕರೀತಿವೆ.
ಸಿಪ್ಪೆಯನ್ನು ಕಿತ್ತಳೆಯೆಂದು ತಿಳಿದು
ಮೋಸ ಹೋಗಿದ್ದಾನೆ ಊದ್ದ ಕಸಬರಿಕೆಯ ವಾರ್ಡ್ ಬಾಯ್.
ಮಚ್ಚರದಾನಿಗೆಂದು ಯಾರೋ ರಾತ್ರಿ
ಆಕಾಶಕ್ಕೆ ಹೊಡೆದ ಮೊಳೆಗಳು ಹಾಗೆ ಇವೆ

ರೆಕ್ಕೆಗಳ ಫಡಫಡಿಸಿ ಮರ
ಕತ್ತಲ ಕೊಡವಿಕೊಳ್ಳುತ್ತಿದೆ
ಎಲ್ಲ ಆಸ್ಪತ್ರೆಗಳ ಬಾಗಿಲು ತೆರೆಯಲಿ
ಜ್ವರದ ಕಣ್ಣಿನ ಮಕ್ಕಳು ನನ್ನ ಮಡಿಲಿಗೆ ಬರಲಿ
ಕಿರಣ ಸೋಕಿದರೆ ಸಾಕು ಮಾಯಲಿ ಗಾಯ
ಒಡೆಯದಿರಲಿ ಕಂಬನಿಗೆ ಎದೆಯ ಹಾಲು.

 

ದೀಪೊತ್ಸವ.

ಬಿರಿಯುತ್ತ ತಿಂಗಳ ಹಣ್ಣು ಕಾರ್ತಿಕ ಹುಣ್ಣಿಮೆಗೆ
ರಥಬೀದಿಯುದ್ದಕ್ಕೂ ಪಣತಿ ಸಾಲು
ರಂಗೋಲಿ ತುಳಿದಾಡುವ ಪರಿಷೆ

ಹೊಸ್ತಿಲ ಕದ ಹಿಡಿದು ಕಾಯುತಿರುವಳು ಪೋರಿ
ಬೀದಿಯಲ್ಲೀಗ ಪಲ್ಲಕ್ಕಿಯ ಮುಂದೆ
ಚಾಮರ ಬೀಸುತ್ತ ಹಾಯುವಳು ತಾಯಿ

ಉಂಡು ಹೋಗಿಲ್ಲ ರಾತ್ರಿಯಿಡೀ ಎದ್ದ ಮದ್ದಲೆಯ
ಸದ್ದಿಗೆ ನಿದ್ದೆ ಮಾಡಿಲ್ಲ ಸಪುರ ಆಯಿ
ಮಾಸಿದ ಬಳೆಗಳ ಎಳೆದೆಳೆದು ಮೊಣಕೈಗೆ

ಕೆಂಡದಂಥ ಪಲ್ಲಕಿಗೆ ಬೀಸುವಳು ಚವರಿ
ಜ್ವರ ಏರಿತೆ ಬಸವಳಿದಳೆ
ಹಿಲಾಲಿಗೆ ಎಣ್ಣೆ ಹಿಂಡುವ ಒಕ್ಕಲ ಬದಿಗೆ

ಉಂಡಳೆ ಬೇಬಿ ಮುಗಿಸಿದಳೆ ಓದು ಕಸಮುಸುರೆ
ಒಬ್ಬಳೇ ಮನೆಯೊಳಗೆ
ಬೀದಿಯಲಿ ನಡೆದಾಡುವ ಕತ್ತಲು ಮನೆ ಹೊಕ್ಕರೆ

ಹಾಯುತಿವೆ ವಾದ್ಯಗಳು ನಿಲ್ಲುತ್ತ ಆರತಿಗೆ
ಬಂತೀಗ ಉತ್ಸವ ಮನೆಯ ಎದುರು
ಆರತಿಯ ಮೊಗದಲ್ಲಿ ನೀಲಾಂಜನ ಎರ್‍ಅಡು

ಹೂವುಗಳು ಸುಡುತಿರಲು ಪಲ್ಲಯೊಳಗೆ
ಕಣ್ಣಲ್ಲೆ ಹಾಲೆರೆದಿದೆ ಕರುಳು
ಊರಿಡೀ ಸದ್ದಿರದ ಬೆಳದಿಂಗಳು.

-ಜಯಂತ ಕಾಯ್ಕಿಣಿ.

12
ಮೇ
08

ನನ್ನಮ್ಮ.

ಮೊನ್ನೆ ಚುಣಾವಣೆಯಂದು ಸೊಂಟದ ಮೇಲೆ ಕೈ ಹಾಕೊಂಡು ಮತ ಹಾಕಲು ಸಾಲುಗಟ್ಟಿ ನಿಂತಿದ್ದೆ, ನನ್ನ ಮುಂದಿನ ಸರದಿಯಲ್ಲಿ ಅಮ್ಮ. ಹೆಸರು ಗುರುತಿನ ಚೀಟಿ ಪರೀಕ್ಷಿಸಿದ ಅಧಿಕಾರಿ ಕೆಂಪು ಬಣ್ಣದ ಹಾಳೆಯ ಮೇಲೆ ಚೌಕದಲ್ಲಿ ಅಡಗಿದ್ದ ಸಂಖ್ಯೆಯೊಂದಕ್ಕೆ ಸೊನ್ನೆ ಸುತ್ತಿ ಗುರುತಿಸಿಕೊಳ್ಳುತ್ತ ಅಮ್ಮನನ್ನ ಮುಂದಿನ ಅಧಿಕಾರಿಯತ್ತ ಕಳುಹಿಸಿದ. ಅಮ್ಮನ ಹೆಸರಿದ್ದ ಹಾಳೆಯನ್ನ ಹುಡುಕಿದ ಅವನು ಸಹಿಮಾಡುವ ಜಾಗವನ್ನ ತೋರಿಸುತ್ತಿದ್ದ, ಹಿಂದೆ ನಿಂತ ನಾನು ಗುರುತಿನ ಚೀಟಿಯನ್ನ ತೋರಿಸುತ್ತಿದ್ದೆ, ಸೌಟು ಹಿಡಿದು ತನ್ನ ಅಡುಗೆಯ ಮನೆಯನ್ನ ಆಳುತಿದ್ದ ಅಮ್ಮ ಅಪರೂಪಕ್ಕೆ ಪೆನ್ನು ಹಿಡಿದಿದ್ದಳು. ತಾನು ಕಲಿತ ಅಕ್ಷರಗಳನ್ನೆಲ್ಲ ಜೋಡಿಸಿ ತನ್ನ ಹೆಸರು ಬರೆಯುತ್ತಿದ್ದಳು, ಹಿಂದೆ ಕುತೂಹಲದಿಂದ ಗಮನಿಸುತ್ತಿದ್ದ ನನಗೆ ಆದ ಖುಷಿ ಅಷ್ಟಿಷ್ಟಲ್ಲ. ನನಗೂ ಸರಿಯಾಗಿ ನೆನಪಿಲ್ಲ ಎಳೆಂಟು ವರ್ಷಗಳ ಹಿಂದಿನ ಮಾತು, ಪುಟ್ಟ ಮಗುವಿಗೆ ಅಕ್ಷರಗಳನ್ನ ತಿದ್ದಿಸುವ ಪರಿಯಲ್ಲಿ, ಅಮ್ಮನ್ನ ಕೈಯಲ್ಲಿ ಪೆನ್ನು ಹಿಡಿಸಿ ಅವಳಿಗೆ ಬ್ರಹ್ಮಾಂಡದಂತಿದ್ದ ಅಕ್ಷರಗಳನ್ನ ತಿದ್ದಿಸಿದ್ದು. ಪಕ್ಕದಲ್ಲಿ ಕುಳಿತು ಅದರ ಮೇಲ್ವಿಚಾರಣೆ ವಹಿಸಿದ್ದ ತಂಗಿ, ಅಮ್ಮ ತಿದ್ದುವೆಕೆಯಲ್ಲಿ ತಪ್ಪು ಮಾಡಿದಾಗ ನನ್ನ ಬಳಿ ಅದನ್ನೆಲ್ಲ ಒಪ್ಪಿಸುತ್ತಾ, ಅಮ್ಮ ಒಂದೊಂದು ಸಾರಿ ತಿದ್ದಿದಾಗಲು ತಾನೆ ಹೊಸ ಹೊಸ ಅಕ್ಷರಗಳನ್ನ ಕಲಿತಷ್ಟು ಸಂಭ್ರಮಿಸಿದ್ದಳು.

ತನ್ನ ಅಡುಗೆ ಮನೆಯ ರಾಜ್ಯಭಾರವನ್ನ ಬದಿಗಿಟ್ಟು ಸಮರೋಪಾದಿಯಲ್ಲಿ ಅಕ್ಷರಾಭ್ಯಾಸದಲ್ಲಿ ತೋಡಗಿದ್ದ ಅಮ್ಮನನ್ನ ಕುತೂಹಲದಿಂದ ಗಮನಿಸುತ್ತಿದ್ದ ಅಪ್ಪ, ನಿಮ್ಮಮ್ಮ ಮುಂದಿನ ವರ್ಷ ಕಾಲೇಜ್ ಸೇರ್ಕೊತಾಳಾ ಕೇಳೊ ಎಂದು ರೇಗಿಸಿದ್ದಕ್ಕೆ, ನಿಮ್ಮಪ್ಪನಿಗೆ ಅವಾಗಲೆ ಹೆದರಿಕೆ ಶುರುವಾಗಿರೊ ಹಾಗಿದೆ, ಎಲ್ಲಿ ನಾನೇ ಅಡುಗೆ ಮಾಡ್ಬೇಕಾಗುತ್ತೊ ಅಂತ ಕಣೋ ಎನ್ನುತ್ತ ಅಪ್ಪನ್ನನ್ನ ಬೆಚ್ಚಿಸಿದ್ದಳು. ಮತ್ತೆ ಅಮ್ಮ ಎಷ್ಟು ಕಲಿತಳು? ಏನು ಕಥೆ? ಅನ್ನೊ ಬಗ್ಗೆ ಗಮನಿಸಿರಲಿಲ್ಲ ಅಥವಾ ಅಂತ ಸಂದರ್ಭಗಳು ಬಂದಿರಲಿಲ್ಲ ಅನ್ನಬಹುದು, ಅದರೂ ಅಮ್ಮ ನಾಲ್ಕು ಅಕ್ಷರದ ಅವಳ ಹೆಸರನ್ನು ಬರೆಯುವ ಬ್ರಹ್ಮವಿದ್ಯೆ ಕಲಿತು ಅದನ್ನ ಪ್ರಯೋಗಿಸಿದ್ದನ್ನು ಕಂಡು ಉಬ್ಬಿಹೋದದಂತು ನಿಜ…. 🙂

06
ಮೇ
08

ಮುಸ್ಸಂಜೆಯ ಮಂದ ಬೆಳಕಿನಲ್ಲಿ ಗಝಲ್ಗಳ ಘಮ ಘಮ.

ಆಗ ತಾನೆ ತಿಣುಕಾಡಿ ಪಿ ಯು ಸಿ ಮುಗಿಸಿ ಡಿಪ್ಲಮೊ ಸೇರಿದ್ದೆ, ಯೋಗ ಕ್ಲಾಸಿನಲ್ಲಿ ಆಗಾಗ ಕೇಳಲು ಸಿಗುತ್ತಿದ್ದ ಭಜನ್ಗಳಿಂದ ತುಂಬಾ ಪ್ರಭಾವಿತನಾಗಿದ್ದೆ, ಯಾರು ಹಾಡಿರಬಹುದು? ಯಾವ ಆಲ್ಬಮ್? ಅಂತೆಲ್ಲಾ ಸಾಕಷ್ಟು ಕುತೂಹಲವಿದ್ದರು, ಅವರಲ್ಲಿ ಕೇಳಿ ತಿಳಿಯಬಹುದೆಂಬ ಸಾಮಾನ್ಯ ಸಂಗತಿ ಆಗ ತಿಳಿಯಲಿಲ್ಲ. ನಂತರ ದಿನಗಳಲ್ಲಿ ತಿಳಿದದ್ದು ಆ ಭಜನ್ಗಳು ಜಗಜೀತ್ ಸಿಂಗ್ ಅವರು ಹಾಡಿರುವ “ಮಾ” ಎಂಬ ಧ್ವನಿ ಸುರಳಿಯಲ್ಲಿದೆ ಎಂದು. ಈ ಸಂಗ್ರಹದಲ್ಲಿ ಅದ್ಬುತವಾದ ಎಂಟು ಭಜನ್ಗಳಿವೆ ಅದರಲ್ಲಿ “ಆನಂದ ಮಯೀ” ಎಂಥವರನ್ನು ಮಂತ್ರಮುಗ್ಧರನ್ನಾಗಿಸದೆ ಇರದು. ಹೀಗೆ ನನಗೆ ಪರಿಚಿತವಾದವರೆ ಗಝಲ್ ಕ್ಷೇತ್ರದ ದಿಗ್ಗಜ ಜಗಜೀತ್ ಸಿಂಗರು.

ಮೊನ್ನೆ ಮುಸ್ಸಂಜೆಯ ಮಂದ ಬೆಳಕಿನಲಿ ನನ್ನ ಹೊಸ mp3 ಪ್ಲೇಯರ್ ನಲ್ಲಿ ಒಂದಷ್ಟು ಗಝಲ್ಗಳನ್ನ ತುಂಬಿಕೊಂಡು ಕೇಳುತಿದ್ದರೆ ಮನವೆಲ್ಲ ಬೆಚ್ಚಗಿತ್ತು. ಅದರಲ್ಲು ಸಿಲ್ಸಿಲೆ ಮತ್ತು ಸಹೇರ್ ಸಂಗ್ರಹಗಳನ್ನ ಕೇಳೊವಾಗಿನ ಮಜವೇ ಬೇರೆ. ಮನದ ಭಾವನೆಗಳನ್ನ ಕೆಲವೆ ಪದಗಳಲ್ಲಿ ಕಟ್ಟಿಕೊಡಬಲ್ಲ ಗಝಲ್ಗಳನ್ನ ಅತ್ಯಂತ ಶ್ರೀಮಂತ ಸಾಹಿತ್ಯ ಪ್ರಕಾರ ಅನ್ನಬಹುದು. ಸಾಮಾನ್ಯವಾಗಿ ಗಝಲ್ಗಳು ದುಗುಡ ದುಮ್ಮಾನುಗಳ ನಡುವೆಯೆ ಹೆಚ್ಚು ಸುಳಿದಾಡುತ್ತವೆ ಅನ್ನುವ ಅಪವಾದವು ಇದೆ, ಗಝಲ್ಗಳನ್ನ ಮುದ ನೀಡುವ ಸಂಗೀತದೊಂದಿಗೆ ಕೇಳಿ ಆನಂದಿಸುವ ಮನವು ಪ್ರಫುಲ್ಲವಾದದೆ ಇರದು. ನಾವು ಕಾವ್ಯ ಭಾಷೆಯಲ್ಲಿ ಸಂಸ್ಕೃತದ ಪದಗಳನ್ನ ಹೇಗೆ ಬಳಸುತ್ತಿವೊ ಹಾಗೆ ಹಿಂದಿಯ ಜೊತೆ ಉರ್ದುವಿನ ಪದಗಳ ಬಳಕೆ ಈ ಗಝಲ್ಗಳಲ್ಲಿ ಕಾಣಬಹುದು. ಉದಾಹರಣೆಗೆ “ಕೂದಲು” ಅನ್ನುವ ಬದಲು “ಕೇಶರಾಶಿ” ಎಂದು ಬಳಸುವಹಾಗೆ, ಅಲ್ಲಿ “ಬಾಲ್” ಅನ್ನೊ ಬದಲು “ಜ್ಯೂಲ್ಫೆ” ಅಂತ ಬಳಸುತ್ತಾರೆ.

ನನ್ನನ್ನ ಕಾಡಿದ ಮತ್ತೊಂದು ಭಜನ್ ಶೃತಿ ಸಡೊಲಿಕರ್ ಅವರ ಕಂಠದಲ್ಲಿ “ಆರತಿ ಕೀಜೆ ಶೈಲಸುತಾ ಕೀ”, ನಿಮಗೂ ಹಿಡಿಸ ಬಹುದು.

25
ಏಪ್ರಿಲ್
08

ಚುಣಾವಣೆ ಎಂಬ ಅಖಾಡದ ಹೊಸ್ತಿಲಲ್ಲಿ.

ಈ ಬಾರಿ ಬೇಸಿಗೆಯ ಜಳಪಿನ ಜೊತೆಗೆ ಕಾವೇರಿದ ಸಂಗತಿಗಳು ಹಲವಾರು. ಮುಗಿಲು ಮುಟ್ಟಿದ ದಿನಸಿ ಹಣ್ಣು ತರಕಾರಿಗಳ ಬೆಲೆಗಳು ನಮ್ಮ ಮನೆಗಳ ತಿಂಗಳ ಬಜೆಟ್ಟಿನ ಚೌಕಟ್ಟನ್ನು ದಾಟಿ ಸಾಮಾನ್ಯ ಜನರ ಜೀವನದಲ್ಲಿ ಏರುಪೇರು ಮಾಡಿರೋದಂತು ನಿಜ. ಕಡು ಬಿಸಿಲು ಕಣ್ಣು ಬಿಚ್ಚಿ ಎಲ್ಲೆಡೆ ಆವರಿಸಿಕೊಳ್ಳುವ ರಥಸಪ್ತಮಿಯ ಹೊತ್ತಿಗೆ ಮೋಡ ಕಟ್ಟಿ ಗುಡುಗು ಮಿಂಚಿನೊಂದಿಗೆ ಧರೆಗಿಳಿದ ಅಕಾಲಿಕ ಮಳೆರಾಯ ನಗರವಾಸಿಗಳಿಗೆ ಒಂದಷ್ಟು ತಂಪನೆರೆದನಾದರೂ, ಅತ್ತ ಕೃಷಿಕನ ಹಗಲು ರಾತ್ರಿಗಳ ಪರಿಶ್ರಮದಿಂದ ನಳನಳಿಸುತ್ತಿದ್ದ ಬೆಳೆಗಳು ನೀರು ಪಾಲಾದದ್ದು ಮತ್ತೊಂದು ದುರಂತ. ಉತ್ತರ ಕರ್ನಾಟಕದ ಕಡೆ ದ್ರಾಕ್ಷಿ, ಬೆಣಸಿನಕಾಯಿ ಇತ್ತ ದಕ್ಷಿಣದಲ್ಲಿ ಮಾವು ಮತ್ತು ಒಕ್ಕಣೆಯ ದವಸ ದಾನ್ಯಗಳು ನೆಲೆಕಚ್ಚಿದವು. ಇದೆಲ್ಲದರ ನಡುವೆ ಮತ್ತೊಮ್ಮೆ “ಚಿಕನ್ ಗುನ್ಯ” ಜ್ವರ ಮತ್ತೆ ಘಟ್ಟ ಪ್ರದೇಶಗಳಲ್ಲಿ ಕಾಣಿಸಿಕೊಂಡಿರುವ ಸುದ್ದಿ ಬಂದಿದೆ. ಕಳೆದ ವರ್ಷ ಗ್ರಾಮೀಣರ ಬದುಕನ್ನು ಹಿಂಡಿ ಹಿಪ್ಪೆ ಮಾಡಿದ್ದ “ಚಿಕನ್ ಗುನ್ಯ” ಮತ್ತೆ ಎಲ್ಲರ ನಿದ್ದೆ ಕೆಡಿಸುವ ಹೊಸ್ತಿಲಲ್ಲಿದೆ. ಮೊನ್ನೆ ಪತ್ರಿಕೆಗಳಲ್ಲಿ ಬಂದ ಸುದ್ದಿಯ ಪ್ರಕಾರ ಸುಳ್ಯದ ಸುತ್ತಮುತ್ತಲಿನ ಐದು ಜನರಿಗೆ “ಚಿಕನ್ ಗುನ್ಯ” ಬಂದಿರುವುದು ಖಾತರಿಯಾಗಿದೆ.

ಯಾಕೊ ಗೊತ್ತಿಲ್ಲ ಈ ಬಾರಿಯ ಚುಣಾವಣೆಯ ಬಗ್ಗೆ ನನ್ಗೆ ಅಷ್ಟು ಒಲವಿಲ್ಲ, ನನ್ನೊಬ್ಬನ ಪರಿಸ್ಥಿತಿಯೊ ಅಥವ ಇನ್ನೂ ಹಲವರದ್ದೊ ಗೊತ್ತಿಲ್ಲ. ಮೊದಲಾದರೆ ಯಾರು ಗೆಲ್ಲ ಬಹುದು? ಮತ್ತೇನು ಹೊಸ ಹೊಸ ಕೆಲಗಳನ್ನು ಮಾಡಿಯಾರು? ಎಂಬ ಕುತೂಹಲವಾದರು ಇರುತ್ತಿತ್ತು. ಈ ಬಾರಿಯೂ ಯಾವ ಪಕ್ಷಕ್ಕೂ ಪೂರ್ಣ ಬೆಂಬಲ ಬರುವ ನಿರೀಕ್ಷೆ ಅವರಿಗೂ ಇಲ್ಲ, ನನಗಂತು ಮೊದಲೆ ಇಲ್ಲ. ಮತ್ತೆ ಅದೆ ಹುಲಿ ಕುರಿಯಾಟ, ರೆಸಾರ್ಟು ರಾಜಕಾರಣ, ಇವತ್ತು ಒಬ್ಬರ ಮೇಲೊಬ್ಬರು ಕತ್ತಿ ಮಸೆಯುತ್ತಿರುವವರು ನಾಳೆ ಪಕ್ಕನ ಕುರ್ಚಿಯಲ್ಲಿ ಕೂತು ಕಾಸು ಮಾಡುತ್ತಾರೆ. ಒಟ್ಟಿನಲ್ಲಿ ಗೌಡರ ಲೆಕ್ಕಾಚಾರ ಈ ಬಾರಿಯು ಸಾಗುವ ಲಕ್ಷಣಗಳೇ ಹೆಚ್ಚು. ಈ ಪರಿಸ್ಥಿಯ ನಡುವೆಯು ನಮ್ಮ ರವಿ ಕೃಷ್ಣಾ ರೆಡ್ಡಿಯಂತ ಸಾಫ್ಟ್ ವೇರ್ ಜೀವಿ ಅಮೇರಿಕಾದಿಂದ ನೇರ ಚುನಾವಣಾ ಅಖಾಡಕ್ಕೆ ದುಮುಕಿರುವುದು ಒಳ್ಳೆಯ ನಿರ್ಧಾರ, ಅವರಿಗೆ ಈ ಕೆಲಸದಲ್ಲಿ ಯಶಸ್ಸು ಸಿಗಲಿ. ಚುನಾವಣೆ ಸಮಯದಲ್ಲಿ ಮಾತ್ರ ಸಿಕ್ಕ ಸಿಕ್ಕವರಿಗೆ ಕೈಮುಗಿಯುತ್ತ ಪ್ರೀತಿ ವಿಶ್ವಾಸದ ಧಾರೆಯೆರೆಯುತ್ತಾ ಕಾಣಿಸಿಕೊಳ್ಳೊ ಜಿಡ್ಡುಗಟ್ಟಿದ ನಮ್ಮ ತಾತನ ಕಾಲದ ಪಳಯುಳಿಕೆಗಳು, ಆಗ ತಾನೆ ಜೈಲಿನಿಂದ ನೇರ ಚುನಾವಣಾ ಅಖಾಡಕ್ಕೆ ಇಳಿದು ರಾರಾಜಿಸುವ ಮಂದಿ, ಹಣ ಹೆಂಡ ತೋಳ್ಬಲವನ್ನೆ ಗೆಲ್ಲುವ ಕುದುರೆಯಾಗಿಸಿಕೊಂಡವರೆ ಸಾಮಾನ್ಯವಾಗಿ ಇರುತ್ತಿದ್ದರು. ಈ ಬಾರಿ ಚುಣಾವಣೆಗೆಯಲ್ಲಿ ಹೊಸ ತಳಿಗಳ ಜನ ಕೂಡ ಅಖಾಡಕ್ಕೆ ಇಳಿದಿದ್ದಾರೆ, ಅದರಲ್ಲಿ ಪ್ರಮುಖರು ಗಣಿಯ ಧಣಿಗಳು, ರಿಯಲ್ ಎಸ್ಟೇಟ್ ದೊರೆಗಳು, ಕೊನೆಗೆ ಕೆಲಸ ಮಾಡೊ ಮನಸ್ಸಿರೊ ಒಂದು ಮುಖವಾದರು ಕಾಣಿಸಿದರೆ ಸಾಕು. ಏನೇ ಆದರು ನಾನಂತು ಮೇ ೧೦ನೇ ತಾರೀಕು ನನ್ನ ಓಟು ಹಾಕೊದಂತು ಗ್ಯಾರಂಟಿ…. 🙂 ನೀವು ಬರ್ತಿರಾ ತಾನೆ?

“ಈ ಸಲವಾದರು ಒಂದು ಪಕ್ಷಕ್ಕೆ ಪೂರ್ಣ ಬೆಂಬಲ ಸಿಗಲಿ, ಸೂತ್ರದ ಗೊಂಬೆಯ ಪಾಡು ನಮ್ಮ ಸರ್ಕಾರಕ್ಕೆ ಬೇಡ.”
ಯಾವಾಗ ಬರೆದದ್ದು.

ಈ ತಿಂಗಳ ಪಂಚಾಂಗ.

ಜೂನ್ 2023
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 1234
567891011
12131415161718
19202122232425
2627282930  

p

Powered by eSnips.com