03
Jul
08

ಬಾಗಿಲಿಗೆ ಜೋತುಬಿದ್ದ ಭಾರದ ಬೀಗ ಮಾತಾಡದೆ ಮೌನವಾಗಿದೆ.

ನಂಜರಾಜ ಬಹದ್ದೂರ್ ಛತ್ರದ ಮುಂದೆ ಸಾಗುವ ರಸ್ತೆ ಶಿವರಾಮ ಪೇಟೆಯ ಮುಖ್ಯ ರಸ್ತೆಗಳಲೊಂದು, ಮೈಸೂರಿನ ಹಳೆ ತಲೆಮಾರಿನ ಅಂಗಡಿ ಮುಂಗಟ್ಟುಗಳು ರಸ್ತೆಯುದ್ದಕ್ಕೂ ಚಿಕ್ಕಗಡಿಯಾರ ವೃತ್ತದವರೆಗೆ ಪೊಣಿಸಿದಂತೆ ಎರಡು ಬದಿಯಲ್ಲಿ ಸಾಲುಗಟ್ಟಿವೆ. ಮೊದಲು ಬಲಕ್ಕೆ ಸಿಗುವ ಶೃಂಗಾರ್ ಹೋಟೆಲು, ಅದೇ ಸಾಲಿನಲ್ಲಿ ನಾಲ್ಕೈದು ಮಳಿಗೆಗಳನ್ನು ದಾಟಿ ಸಾಗಿದರೆ ಎದಿರಾಗುವುದು ಚಂದ್ರು ಸೌಂಡ್ ಸಿಸ್ಟಮ್. ಸುಮಾರು ೧೦೦-೧೫೦ ವರ್ಷಗಳಷ್ಟು ಹಳೆಯದಾದ ಮಂಗಳೂರು ಹೆಂಚಿನ ಚಾವಣಿಯ ಕಟ್ಟಡ, ಒಳಗೆ ಪ್ರವೇಶಿಸುತ್ತಿದ್ದಂತೆ ಎಡಭಾಗದಲ್ಲಿ ಟೆಲಿಪೋನ್ ಭೂತಿನ ಎರಡು ಡಬ್ಬಗಳು, ಬಲಭಾಗದಲ್ಲಿ ಕೂರಲು ಹಾಕಿದ್ದ ಬೆಂಚು. ಒಳಕೋಣೆಯಲ್ಲಿ ದಡೂತಿ ಮರದ ಪೆಟ್ಟಿಗೆಗಳ ಹಾಗೆ ಕಾಣುತ್ತಿದ್ದ ಧ್ವನಿವರ್ಧಕಗಳು, ಮೂಲೆಗೆ ಆತುಕೊಂಡಿದ್ದ ಮರದ ಕಪಾಟಿನ ತುಂಬಾ ಸಾಲು ಸಾಲಾಗಿ ಜೋಡಿಸಿದ್ದ ಗ್ರಾಮೊಫೋನು ತಟ್ಟೆಗಳು, ಟೇಪ್ ರೇಕಾರ್ಡ್ ಮಾಡಲು ಬಳಸುತ್ತಿದ್ದ ಬೆಳ್ಳಿ ಬಣ್ಣದ ಹೊಳೆವ ಫಿಲಿಫ್ಸ್ ರೇಕಾರ್ಡರ್, ವಿವಿಧ ಬಣ್ಣ ಗಾತ್ರದ ಮೂರ್ನಾಲ್ಕು ಗ್ರಾಮೊಫೋನ್ ಪ್ಲೇಯರುಗಳು. ಪಕ್ಕದ ಕೋಣೆಯಿಂದ ಆಗಾಗ ಸದ್ದುಮಾಡುತ್ತಾ ಮೌನವಾಗುತ್ತಾ ಕುಟ್ಟುವ ಬೆರಳುಗಳಿಗಾಗಿ ಹಪಹಪಿಸುವ ಬೆರಳಚ್ಚು ಯಂತ್ರಗಳು. ಆ ಹೊತ್ತಿಗಾಗಲೆ ಕಂಪ್ಯೂಟರ್ ಡಿಟಿಪಿ ಸೆಂಟರುಗಳ ಭರಾಟೆಯಿಂದ ತಮ್ಮ ಅಸ್ಥಿತ್ವ ಕಳೆದುಕೊಳ್ಳುತ್ತ ಅವಸಾನದ ಅಂಚಿನಲ್ಲಿದ್ದ ಬೆರಳಚ್ಚು ಯಂತ್ರಗಳು ಮತ್ತು ಅವಲಂಬಿತರು.

ಸಾವಿರಾರು ಗ್ರಾಮೊಫೋನು ತಟ್ಟೆಗಳ ಸವಿವರವಾದ ಮಾಹಿತಿಯನ್ನ ಸುಮಾರು ೫೦೦ ಪುಟಗಳ ಪುಸ್ತಕದಲ್ಲಿ ಕನ್ನಡ, ಹಿಂದಿ, ಇತರೆ ಹೀಗೆ ವರ್ಗಿಕರಿಸಿ ಚಿತ್ರ ಬಿಡುಗಡೆಯಾದ ಇಸವಿಯ ಅನುಕ್ರಮವಾಗಿ ಬರೆದಿಟ್ಟಿದ್ದರು. ನಾವು ಭೇಟಿ ನೀಡಿದಾಗಲೆಲ್ಲ ಪುಸ್ತಕದ ಪ್ರತಿ ಹಾಳೆಯನ್ನ ತನ್ಮಯತೆಯಿಂದ ತಿರುವಿ, ನಮಗಿಷ್ಟವಾದ ಪಟ್ಟಿ ತಯಾರಿಸಿ ಕ್ಯಾಸೆಟ್ ನೊಂದಿದೆ ಮಾದೇವನಿಗೆ ಕೊಟ್ಟರೆ ಅರ್ಧ ಕೆಲಸ ಮುಗಿದ ಹಾಗೆ. ಅವನಿಗೆ ಆಗಾಗ ಕಾಫಿ ಸಿಗರೇಟು ಕೊಡಿಸಿ ನಮ್ಮ ಕೆಲಸಕ್ಕೆ ವಿಶೇಷ ಗಮನ ಕೊಡುವಂತೆ ನೋಡಿಕೊಳ್ಳುತ್ತಾ, ಒಂದೊಂದು ಕ್ಯಾಸೆಟ್ ರೆಕಾರ್ಡ್ ಮಾಡಿಸುವಾಗಲು ಅದೆಷ್ಟು ಬಾರಿ ಅವನ ಅಂಗಡಿಗೆ ಅಲೆದಿದ್ದೆವೊ ದೇವರೆ ಬಲ್ಲ. ಮತ್ತೆಲ್ಲು ಸಿಗದ ಸಂಗ್ರಹ ಅವನ ಬಳಿ ಇದ್ದುದ್ದರಿಂದ ನಮಗೂ ಅನ್ಯ ಮಾರ್ಗವಿರಲಿಲ್ಲ. ಕ್ಯಾಸೆಟ್ಟು ಕೊಳ್ಳಲು ೩೦ ರೂ, ಮಾದೇವನಿಗೆ ೨೫ ರೂ, ನಾಲ್ಕೈದು ಬಾರಿ ಅಲೆದಾಡಿದ್ದಕ್ಕೆ ಪೆಟ್ರೊಲ್ ಖರ್ಚು ೩೦ ರಿಂದ ೪೦ ರೂ ಹೀಗೆ ೧೦೦ ರೂಗಳ ಗಡಿ ತಲುಪುತ್ತಿತ್ತು ನಮ್ಮ ಹಾಡುಗಳ ಖಯಾಲಿ. ಒಮ್ಮೆ ಹಾಡುಗಳನ್ನ ಕೇಳಿದರೆ ಅಷ್ಟೆಲ್ಲ ಪರಿಶ್ರಮ ವ್ಯರ್ಥವಾಗಿಲ್ಲ ಅನ್ನೊ ಸಮಾಧಾನ. ಚೀಟಿಯಲ್ಲಿ ಬರೆದ ಹಾಡಿನೆಡೆಗೆ ಕಣ್ಣಾಡಿಸಿ ಕಪಾಟಿನ ಸಾಲುಗಳಲ್ಲಿ ಅಡಗಿದ್ದ ಸಾವಿರಾರು ಕರಿಯ ತಟ್ಟೆಗಳಲ್ಲಿ ನಿಖರವಾದುದನ್ನು ಒಮ್ಮೆಲೆ ತೆಗೆಯಬಲ್ಲ ಅವನ ಪರಿಣತಿಯನ್ನ ಮೆಚ್ಚಲೆ ಬೇಕು, ಅಷ್ಟಲ್ಲದೆ ತಿರುಗುತ್ತಿರುವ ಗ್ರಾಮೊಫೋನಿನ ಮೇಲೆ ತಟ್ಟೆ ಇರಿಸಿ ಒಂದೆ ಕ್ಷಣದಲ್ಲಿ ನಮಗೆ ಬೇಕಾದ ಹಾಡಿನ ಪ್ರಾರಂಭಕ್ಕೆ ಮುಳ್ಳನ್ನು ಇರುಸಿ ರೆಕಾರ್ಡಿಂಗ್ ಚಾಲು ಮಾಡುವಾಗ ಅವನ ಆತ್ಮವಿಶ್ವಾಸ ಮತ್ತು ಅನುಭವ ಎದ್ದುಕಾಣುತ್ತಿದ್ದವು. ಇವತ್ತಿಗೂ ಅವನು ಮಾಡಿಕೊಟ್ಟ ಕ್ಯಾಸೆಟ್ಟುಗಳ ಸಾಲುಗಳು ಮನೆಯ ಕಪಾಟಿನಲ್ಲಿ ಕೇಳುವವರಿಗಾಗಿ ಕಾದಿವೆ. ನಂತರದ  ಎಂಪಿತ್ರಿ ಕ್ರಾಂತಿಯ ಭರಾಟೆಯಲ್ಲಿ ತನ್ನ ಅಳಿದುಳಿದ ಕರಿಯ ತಟ್ಟೆಗಳಲ್ಲಿ ಮಾದೇವ ಎಲ್ಲಿ ಕಳೆದು ಹೋದನೊ ಗೊತ್ತಿಲ್ಲ. ಅವನ ಅಂಗಡಿಯ ಬಾಗಿಲಿಗೆ ಜೋತುಬಿದ್ದ ಭಾರದ ಬೀಗ ಮಾತಾಡದೆ ಮೌನವಾಗಿದೆ.

Advertisements

9 Responses to “ಬಾಗಿಲಿಗೆ ಜೋತುಬಿದ್ದ ಭಾರದ ಬೀಗ ಮಾತಾಡದೆ ಮೌನವಾಗಿದೆ.”


 1. July 3, 2008 at 3:48 pm

  ಮೊದಲಿಗೆ ಬಹಳ ಲಲಿತವಾಗಿ ಬರೆದಿದ್ದೀರಿ. ನಾನಂತೂ ಕಾಲೇಜಿನ ದಿನಗಳಲ್ಲಿ ಅಂಡಲೆಯುತ್ತಿದ್ದ ಮೈಸೂರಿನ ಗಲ್ಲಿಗಲ್ಲಿಗಳನ್ನು ನೆನಪಿಸಿಕೊಳ್ಳುತ್ತಿದ್ದೆ. ಇದೀಗ ತಾನೆ ನೀವು ನನಗಿತ್ತಿದ್ದ ಸಿಡಿಯಲ್ಲಿ ಮುದ್ರಿತವಾಗಿರುವ ಕಾಳಿಂಗರಾಯರ ಗಾಯನ ಕೇಳ್ತಿದ್ದೆ. ಬಹುಶಃ ಈ ಹಾಡನ್ನೂ ಮಾದೇವನೇ ನಿಮಗೆ ಮುದ್ರಿಸಿಕೊಟ್ಟಿರಬೇಕು. ಅಷ್ಟು ಸುಲಭವಾಗಿ ಈಗೆಲ್ಲಿಯೂ ಇದು ಸಿಗೋದಿಲ್ಲ. ಕೊನೆಗೆ ಮಾದೇವ ಕಾಣೆಯಾದ ಎಂಬ ಪದಗಳನ್ನು ಓದಿ, ಕರುಳು ಹಿಂಡಿದ ಹಾಗಾಗುತ್ತಿದೆ. ಅವನ ಅಂಗಡಿಗೆ ಬೀಗ ಹಾಕಿ ಅಸಂಖ್ಯ ರಸಿಕರ ಮನಸ್ಸಿಗೆ ಬೆಂಕಿ ಹಚ್ಚಿದ ಹಾಗಾಗಿದೆ. ಆದರೆ ಪಾಪದ ಆ ಮಾದೇವ ಏನಾದ್ನೋ ಏನೋ. ಅವನೆಲ್ಲೇ ಇರಲಿ, ಅವನ ಹೊಟ್ಟೆ ತಣ್ಣಗಿರಲಿ. ಉಫ್!

  ಗುರುದೇವ ದಯಾ ಕರೊ ದೀನ ಜನೆ

 2. 2 Tina
  July 4, 2008 at 5:20 am

  ಅಮರ,
  ನಾನೂ ಮೈಸೂರಿನಲ್ಲಿದ್ದಾಗ ನನ್ನ ಹಿರಿಯರೊಬ್ಬರಿಂದ ಈ ಅಂಗಡಿಯ ಬಗ್ಗೆ ಕೇಳಿದ್ದೆ. ಈಗ ಮೈಸೂರುಪೇಟೆ ಜೋರಾಗಿ ಬದಲಾಗುತ್ತ ಇದೆ. ಹಳೆಯ laidback ಗುಂಗು, ದೊಡ್ಡ ಹಳ್ಳಿಯೇನೊ ಅನ್ನಿಸಿಬಿಡುತ್ತಿದ್ದ ಆ ಚಾರ್ಮು ಮಾಯವಾಗುತ್ತ ಇದೆ. ಏನೆಂದರೂ ನಮ್ಮ ಕನ್ನಡನಾಡಿನ ಸಂಸ್ಕೃತಿಯ ಸೊಗಡು ಉಳಿಸಿಕೊಂಡಿರುವ ಕೆಲವೇ ಊರುಗಳ ಲಿಸ್ಟಿನಲ್ಲಿ ಮೈಸೂರು ಇನ್ನೂ ಇದೆ ಅನ್ನೋದು ಸಮಾಧಾನದ ವಿಷಯ. ನೀವು ಹೇಳಿದ ಅಂಗಡಿಯ ಥರದ ಇನ್ನೂ ಅನೇಕ ವಿಶೇಷತೆಗಳು ಟೆಕ್ನಾಲಜಿಯ ಭರಾಟೆಯಲ್ಲಿ ಮೆಲ್ಲಗೆ ಕಣ್ಮರೆಯಾಗುತ್ತಿವೆ. ಒಂದು ಆಂಗ್ಲ ಹೇಳಿಕೆಯ ಪ್ರಕಾರ ಹೇಳುವುದಾದರೆ, they are not dying, but fading away.
  ನೀವು ಮೈಸೂರಿನವರಾ?
  -ಟೀನಾ

 3. July 5, 2008 at 3:28 am

  ಅಮರ್ ಅವರೆ,

  ಮನಮುಟ್ಟುವ ಬರಹ. ಕಂಪ್ಯೂಟರ್ ಯುಗ ಅಸಂಖ್ಯಾತ ಹೊಸ ಚಿಗುರುಗುರುಗಳನ್ನು ಬೆಳೆಸುತ್ತಿದ್ದರೂ ಅವೆಲ್ಲವೂ ಹಳೆಬೇರಿನ ಮೇಲೆ ನಿಂತಿರುವುದರಿಂದ.. ಆ ಹಳೆ ಬೇರುಗಳೇ ಕಾಣಿಸದಂತಾಗುತ್ತಿವೆ. ನಿಜಕ್ಕೂ ಖೇದಕರ.

 4. July 7, 2008 at 3:25 pm

  ಗುರುಗಳೇ,
  ಮಾದೇವನ ಬಳಿ ಸಂಗ್ರಹಿಸಿದ್ದ ಹಲವಾರು ಹಾಡುಗಳು ಇಂದಿಗೂ ಸಾಮಾನ್ಯವಾಗಿ ಸಿಗೋದಿಲ್ಲ, ಒಂದಷ್ಟು ಕ್ಯಾಸೆಟ್ಟುಗಳು ಮನೆಗೆ ಹೋದಾಗ ಕೇಳುತ್ತಾ ಇರ್ತೇನೆ …….. ನಿಮಗೆ ಕೊಟ್ಟಿರೊ ಹಾಡುಗಳು ನಾನು ಹೊಸದಾಗಿ ಸಂಗ್ರಹಿಸಿದ್ದು ….. ಇನ್ನೂ ಸಾಕಷ್ಟು ಸಂಗ್ರಹಿವುದು ಇದೆ ಬಿಡಿ 🙂

  ಟೀನಾ ಮೇಡಮ್,
  ನಮ್ಮೂರು ಮೈಸೂರು 🙂 … “ಚಂದ್ರು ಸೌಡ್ ಸಿಸ್ಟಮ್” ಆಗ ಸಾಕಷ್ಟು ಹೆಸರು ಮಾಡಿದ್ದ ಅಂಗಡಿ, ಮೈಸೂರಿನವರಲ್ಲದೆ ಬೇರೆ ಊರುಗಳಿಂದ ಇಲ್ಲಿ ರೆಕಾರ್ಡು ಮಾಡಿಸಲು ಬರುತ್ತಿದ್ದರು. ನಾನಂತು ಅಷ್ಟು ಹಿಂದಿ ಮತ್ತು ಕನ್ನಡದ ಸಂಗ್ರಹಗಳನ್ನ ಗ್ರಾಮೊಫೋನ್ ಪ್ಲೇಟುಗಳಲ್ಲಿ ನೋಡಿಲ್ಲ, “ಬದಲಾವಣೆ ಜಗದ ನಿಯಮ” ಅನ್ನೊ ಹಾಗೆ …… ಯಾವುದೆ ಆದರೂ ಬದಲಾವಣೆ ತನ್ನನ್ನ ಒಳಪಡಿಸದಿದ್ದರೆ ನಶಿಸೋದಂತು ನಿಜ.

  ತೇಜಸ್ವಿನಿಯವರೇ,
  ನಿಮ್ಮ ಮಾತು ನಿಜ, ಹಳೆಯ ಬೇರುಗಳ ಮೇಲೆ ಹೊಸ ಚಿಗುರು ಚಂದವೆ ….. ಆದರೂ ಒಂದು ಸಮಾಧಾನ ಸಂಗೀತ ನಮ್ಮನ್ನ ತಲುಪುತ್ತಿದ್ದ ಮಾಧ್ಯಮ ಬದಲಾಯಿತು ಮತ್ತು ಅದನ್ನ ತಲುಪಿಸಲು ದುಡಿಯುತ್ತಿದ್ದವರು ಬದಲಾದರು … ಆದರೆ ಸಂಗೀತ ಮಾತ್ರ ಹಾಗೆ ಇದೆ.

 5. July 17, 2008 at 12:04 pm

  ಅಮರ,
  ತುಂಬಾ ಸ್ವಾರಸ್ಯಕರವಾದ ಬರವಣಿಗೆ. ಇಂತಹ ನೆನಪುಗಳನ್ನು ನಮ್ಮೊಡನೆ ಹಂಚಿಕೊಳ್ಳಿರಿ.

 6. July 19, 2008 at 5:53 am

  ಅಮರ್ ಅವರೇ,
  ನಾನು ಮೈಸೂರಿಗೆ ಹೊಸಬ. ಆದರೆ ನಿಮ್ಮ ಲೇಖನ ಓದಿದ ಮೇಲೆ ಆ ಸ್ಥಳ ನೋಡಬೇಕೆನಿಸಿದೆ. ಹುಡುಕುತ್ತೇನೆ. ಅಂದ ಹಾಗೆ ನೀವೂ ಹೇಗಿದ್ರೂ ಮೈಸೂರಿನಲ್ಲೇ ಇದ್ದೀರಿ, ಯಾಕೆ ಒಮ್ಮೆ ಸಿಗಬಾರದು ? ಸಿಗುವುದಾದರೆ ಹೇಳಿ, ಒಮ್ಮೆ ಕುಳಿತು ಕಾಫಿ ಕುಡಿಯೋಣ, ಮಾತಾಡೋಣ. ನನ್ನ ಕಚೇರಿ ವಿಜಯ ಕರ್ನಾಟಕ, 0821-2421904.
  ನಾವಡ

 7. July 25, 2008 at 1:31 pm

  ಸುನಾಥರೇ,
  ಖಂಡಿತ ಬರೆಯುವೆ, ಧನ್ಯವಾದ 🙂

  ನಾವಡರೇ,
  ನಿಮ್ಮ ಕಚೇರಿಗೆ ತುಂಬಾ ಹತ್ತಿರದಲ್ಲೆ ಇರುವಂತಹ ಜಾಗ ಅದು. ಈಗ ನಾನು ರಾಜಧಾನಿಯಲ್ಲಿರುವೆ, ನಿಮ್ಮ ದೂರವಾಣಿ ಸಂಖ್ಯೆಯನ್ನ ಇಟ್ಟುಕೊಂಡಿದ್ದೇನೆ. ಈ ಬಾರಿ ಮೈಸೂರಿಗೆ ಬಂದಾಗ ಖಂಡಿತ ನಿಮ್ಮನ್ನು ಭೇಟಿಮಾಡುವೆ.

 8. August 20, 2008 at 3:35 pm

  ನಮಸ್ಕಾರ,

  ನಿಮ್ಮ ಬ್ಲಾಗ್‍ ನೋಡಿದೆ. ಬಹಳ ಸುಂದರ ಹಾಗೂ ಸೊಗಸಾಗಿದೆ.

  ನಾನು ಕನ್ನಡ ಹನಿಗಳ ಬಳಗದಿಂದ ವಿನಂತಿಸಿಕೊಳ್ಳುತ್ತಿರುವುದೇನೆಂದರೆ, ನಮ್ಮ ಕನ್ನಡ ಹನಿಗಳು ಹಾಸ್ಯ್, ಕವನ, ಹನಿಗವನ ಇನ್ನೂ ಹತ್ತು ಹಲವನ್ನು ಹೊಂದಿದೆ.

  ನೀವು ನಿಮ್ಮ ಕವನಗಳನ್ನು ಪ್ರಕಟಿಸಿ, ಇನ್ನೂ ಹೆಚ್ಚಿನ ಸ್ನೇಹಿತರಿಗೆ ತಲುಪಲಿ…..

  http://kannadahanigalu.com/

  ನೀವು ಮೀಕ್ಷಿಸಿ, ನಿಮ್ಮ ಬ್ಲಾಗ್‍ನಲ್ಲಿ ಪ್ರಕಟಿಸುವಿರಾ, ಹಾಗೆಯೇ ಕನ್ನಡ ಹನಿಗಳಲ್ಲಿಯು ನಿಮ್ಮ ಬ್ಲಾಗ್‍ನ್ನು ಪ್ರಕಟಿಸುತ್ತೇವೆ.

  ದಯವಿಟ್ಟು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಾಗಳಿಗೆ ನಮಗೆ ಬರೆದು ತಿಳಿಸಿ.

  ಧನ್ಯವಾದಗಳೊಂದಿಗೆ…..

  Regards
  Kannadahanigalu Team

 9. 9 minchulli
  March 2, 2009 at 2:13 pm

  ನಮಸ್ತೆ.. ನಾಡಿದ್ದು 8-03-2009 ರಂದು ನಡೆಯುವ ಅಮ್ಮನ ಹಬ್ಬಕ್ಕೆ ನಿಮ್ಮನ್ನು ಆಮಂತ್ರಿಸಲು ಬಂದೆ.. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.. ವಿವರಗಳಿಗೆ ನನ್ನ ಬ್ಲಾಗ್ http://minchulli.wordpress.com ನೋಡಿ. ಮರೆಯದೆ ಬನ್ನಿ… ನಿಮ್ಮ ಆಪ್ತರಿಗೆಲ್ಲ ಈ ವಿಚಾರ ಹೇಳಿ ಸಾಧ್ಯವಾದರೆ ಕರೆದುಕೊಂಡು ಬನ್ನಿ. ನೀವು ಬಂದರೆ ತುಂಬಾ ಸಂತೋಷ ಆಗುತ್ತೆ.

  ಶುಭವಾಗಲಿ,
  – ಶಮ, ನಂದಿಬೆಟ್ಟ


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s


ಯಾವಾಗ ಬರೆದದ್ದು.

ಈ ತಿಂಗಳ ಪಂಚಾಂಗ.

July 2008
M T W T F S S
« Jun   Dec »
 123456
78910111213
14151617181920
21222324252627
28293031  

p

Powered by eSnips.com

%d bloggers like this: