Archive for the 'ನನಗನ್ನಿಸ್ಸಿದ್ದು.' Category

02
ಜೂನ್
08

ಒಂದಷ್ಟು ಕವನಗಳ ಜೇನುಮಳೆ.

ಕವನಗಳ ಭಾವ ಜಗತ್ತಿನಲ್ಲಿ ನನಗೆ ಮೊದಲು ಪರಿಚಿತರಾದವರು ಕೆ ಎಸ್ ನರಸಿಂಹಸ್ವಾಮಿಯವರು ಅದಕ್ಕೆ ಹಲವಾರು ಕಾರಣಗಳಿವೆ ಸರಳ ಭಾಷಾ ಪ್ರಯೋಗ ಇರಬಹುದು, ಕವನಗಳ ವಸ್ತುಗಳ ನಮ್ಮ ದೈನಂದಿನ ಬದುಕಿನಲ್ಲಿ ಹಾಸುಹೊಕ್ಕಾಗಿ ಇದದ್ದು ಇರಬಹುದು, ಭಾವಗೀತೆಗಳಾಗಿ ಎಲ್ಲರ ಮನವನ್ನ ಆವರಿದ್ದು ಇರಬಹುದು ಹೀಗೆ ಪಟ್ಟಿ ಬೆಳೆಯುತ್ತಾ ಸಾಗುತ್ತೆ. ನಂತರದ ದಿನಗಳಲ್ಲಿ ಬೇಂದ್ರೆ, ನಿಸಾರ್ ಅಹಮದ್, ಬಿ ಅರ್ ಲಕ್ಷ್ಮಣರಾಯರು, ಹೆಚ್ ಎಸ್ ವೆಂಕಟೇಶಮೂರ್ತಿ ಮತ್ತು ಲಕ್ಷ್ಮೀನಾರಾಯಣ ಭಟ್ಟರ ಹಲವಾರು ಕವನಗಳು ನನಗೆ ಮುದ ನೀಡಿವೆ. ಹೀಗೆ ನನಗಿಷ್ಟವಾದ ಕವನಗಳನ್ನ ಸಾಹಿತ್ಯಾಸಕ್ತರಲ್ಲಿ ಹಂಚಿಕೊಳ್ಳುವ ವೇದಿಯನ್ನ ಮೊದಲು ಕಲ್ಪಿಸಿದ್ದು ಆರ್ಕೂಟ್ ಪೊರ್ಟಲ್. ದಿನ ಒಂದರಂತೆ ಸರಿ ಸುಮಾರು ಒಂದು ವರ್ಷಗಳ ಅವಧಿಯಲ್ಲಿ ೨೫೦ಕ್ಕೊ ಹೆಚ್ಚು ಕವನಗಳನ್ನ ಬರಹ ತಂತ್ರಾಂಶ ದಲ್ಲಿ ಟೈಪ್ ಮಾಡಿ ಪಿಡಿಎಫ್ ಫೈಲ್ಗಳಾಗಿ ಮಾಡಿ ಮೇಲ್ ಕೂಡ ಮಾಡುತ್ತಿದ್ದೆ. ಕೆಲಸದ ಒತ್ತಡದಿಂದ ಕಳೆದ ೨- ೩ ತಿಂಗಳಿದ ಕವನಗಳನ್ನ ಹಂಚಿಕೊಳ್ಳೊದನ್ನ ನಿಲ್ಲಿಸಬೇಕಾಯಿತು. ಒಂದಷ್ಟು ಕವನಗಳನ್ನ ಕನ್ನಡ ಲಿರಿಕ್ಸ್ ವೆಬ್ ಸೈಟ್ ನಲ್ಲಿ ಹಾಕಿದ್ದೆ ನಂತರದ ದಿನಗಳಲ್ಲಿ ಅದೂ ಆಗಲಿಲ್ಲ. ಈಗ ನನ್ನಲ್ಲಿದ ಎಲ್ಲ ಕವನಗಳನ್ನ ಒಟ್ಟಿಗೆ ಸಾಹಿತ್ಯಾಸಕ್ತರಿಗೆ ಲಭ್ಯವಾಗುವಂತೆ ಗೂಗಲ್ ಪೇಜ್ (ಕವನ ಸಂಗ್ರಹ) ಮತ್ತು ಗೂಗಲ್ ಸೈಟ್ ನಲ್ಲಿ ಹಾಕಿದ್ದೇನೆ. ಮತ್ತೆ ಬಿಡುವು ಮಾಡಿಕೊಂಡು ಹೊಸ ಹೊಸ ಕವನಗಳನ್ನ ಇಲ್ಲಿ ಸೇರಿಸುವ ಭರವಸೆಯೊಂದಿಗೆ ನಿಮಗಿದೊ ಅರ್ಪಣೆ. ನಿಮಗೆ ಈ ಕವನಗಳ ಪಿಡಿಎಫ್ ಆವೃತ್ತಿ ಬೇಕಿದ್ದಲ್ಲಿ ನಿಮ್ಮ ಮೈಲ್ ವಿಳಾಸ ಕಳುಹಿಸಿ.

*********************************************

ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟರ ಹಲವಾರು ಕವನಗಳು ನನಗೆ ಇಷ್ಟ, ಅದರಲ್ಲೂ ನನ್ನನ್ನ ತುಂಬಾ ಕಾಡಿದ ಒಂದು ಕವನವನ್ನ ಇಲ್ಲಿ ಬರೆದಿರುವೆ. ಕವನ ಸಂಕಲನ – ವೃತ್ತ  ಕವನದ ಶಿರ್ಶಿಕೆ “ಸೀಮಂತಿನಿ”, ನಿಮಗೂ ಕೂಡ ಹಿಡಿಸ ಬಹುದು.

ಸೀಮಂತಿನಿ.

ಯಾರಿವಳು?

ಇದ್ದಕ್ಕಿದ್ದಂತೆ ಪಕ್ಕದಲೆ ಬದಲಾದವಳು?

ಗಂಡನೆಂಬವನನ್ನ ಕಂಡ ಕಂಡಂತೆಯೇ

ಕಂದ ಎಂಬಂತೆ ಮಮತೆಯಲಿ ಮಾತಾಡುವಳು!

ಅಪ್ಪ ಬಂದವನನ್ನು ತಪ್ಪು ಮಾಡಿದ ಎಳೆಯನಂತೆ

ಉಡಿಯಲ್ಲಿ ಹಾಕಿ ಶಮಿಸಿದವಳು

ಗುಟುರು ಮದವನು ಮೆಟ್ಟಿ ಎದ್ದ ಹೆಡೆಯನು ತಟ್ಟಿ

ಹೊಲೆಗಸದ ತೊಟ್ಟಿಯನು ಹೀಗೆ ತೊಳೆದವಳು?

ಇವಳೆ

ಬೆನ್ನ ಬಳಿ ಬಂದು ಕೊರಳಿಗೆ ತೂಗುತಿದ್ದವಳು?

ಕೈಯ ಪುಸ್ತಕವನ್ನು ಕಿತ್ತು ಗೂಡೊಳಗೆಸೆದು

ಸಾಕು ಬಿಡಿ ಸನ್ಯಾಸ ಎಂದು ತೋಳೆಳೆದವಳು!

ಕೆನ್ನೆಯಲಿ ಬೆರಳಿಟ್ಟು

ಕೊರಳ ಸರ ತುಟಿಗಿಟ್ಟು

ಏನೊ ಕಕಮಕ ಹಿಡಿಸಿ ಗೆದ್ದು ನಕ್ಕವಳು?

ಈಗ ಅದೆ ಹುಡುಗಿ

ಬೇಸಿಗೆಯ ಉರಿಗಣ್ಣ

ಬೆಳುದಿಂಗಳಲಿ ತೊಳೆದು

ಗರ್ಭಗುಡಿ ಹಣತೆಯನು ಹಚ್ಚಿರುವಳು;

ಮೊನ್ನೆ ಸೀಮಂತದಲಿ ಹಸೆಯೇರಿದಾಗಿಂದ

ಜಗದಂಬೆ ಭಾವಕ್ಕೆ ಸಂದಿರುವಳು!

ಒಲೆ ಮೇಲೆ ಅನ್ನ ಸೀಯುತ್ತಲಿದೆ ಮೊನ್ನೆ;

ಎದುರಿಗೇ ಕುಳಿತು

ಹಾಲಪಾತ್ರೆಗೆ ಬಿದ್ದ ಇರುವೆಗಳ ಮೇಲೆತ್ತಿ

ನೆಲಕಿಳಿಸಿ ಹರಿಯಬಿಡುತಿದ್ದಾಳೆ, ಒಂದೊಂದೆ!

ಪೊರಕೆ ತುದಿಯಲಿ ಹಿಂದೆ

ಜಿರಲೆಗಳ ಬಡಿದವಳು ಇವಳೆ?

‘ಪಾಪ’ ಎಂದರೆ – ‘ಅಹ! ಶುದ್ದ ಕನ್ನಡಿಗ’

ಎಂದು ಛೇಡಿಸಿದವಳು!

ಈಗ ಹೊರಳಿದೆ ಕರಳು,

ಮೊದಲ ಬಾರಿಗೆ ಬಸಿರ ಸವರಿದೆ ಯಶೋದೆಯ

ಬೆಣ್ಣೆ ಬೆರಳು.

ಎಲ್ಲಿ ತರೆಮರೆಸಿಕೊಂಡುವೊ ಏನೊ ಈಗಿವಳ

ಸಿನಿಮ ಹೋಟೆಲುಗಳಿಗೆ ಅಲೆವ ಚಪಲ,

ಆಗೀಗ(ನನ್ನನೂ ಜೊತೆಗೆಳೆದುಕೊಂಡು!)

ದೇವಸ್ಥಾನ ಯಾತ್ರೆಯಷ್ಟೇ ಈಗ ಎಲ್ಲ!

ಮುಡಿತುಂಬ ಹಣೆತುಂಬ ಕೈತುಂಬ ತನ್ನೆಲ್ಲ

ಮಾಂಗಲ್ಯ ಸೌಭಾಗ್ಯ ಮೆರೆಸಿ,

ಶಾಂತಮುಖದೊಳಗೊಂದು ಮರುಳುನಗೆ ನಿಲಿಸಿ,

ಇವಳೀಗ ಕಾರ್ತೀಕದಾಗಸದ ಹಾಡು,

ಕಣ್ಣೊ, ಹುಣ್ಣಿಮೆಯಿರುಳ ಕಡಲ ಬೀಡು!

ಜೊತೆಗೆ ನಡೆವಾಗ

ನನ್ನ ಹೆಜ್ಜೆಗು ಹೆಜ್ಜೆ ಮುಂದೆಯಿಟ್ಟು,

ಈಗ? ಎಂಬಂತೆ ಹುಬ್ಬೆತ್ತರಿಸಿ ನಕ್ಕು ಸ್ಪರ್ಧಿಸಿದ್ದವಳು

ಈಗೆಲ್ಲ ಅಬ್ಬರ ಬಿಟ್ಟು

ಕಾಲೆಳೆಯುವಳು ಏಕೊ ತೀರ.

ಕನಸುಗಣ್ಣೆಗೆ ದಾರಿಯಲ್ಲು ಏನೋ ಧ್ಯಾನ,

ಮೈ ಮಾತ್ರ ಇಲ್ಲಿ, ಮನಸೆಲ್ಲೊ ಹೊರಟಿದೆ ಯಾನ,

ಅಡಿಗಡಿಗು ಒಂದೊಂದು ಗುಡಿಕಟ್ಟಿ ಬಾಗಿಲಲಿ

ಹೊರಳಿ ಬೇಡಿದೆ ಮಗುವಿಗಭಯದಾನ.

ಎಲ್ಲ ಬಾಳಲಿ ಎಂಬ ಭಾವ

ಚೆಲ್ಲುತಿದೆ ಕಣ್ಣು ಅಲುಗಿದೆ ಹೊಟ್ಟೆಯೊಳಗಿರಿವ ಪುಟ್ಟ ಜೀವ;

ಗಟ್ಟಿ ಸ್ವಾರ್ಥಕೆ ಈಗ ಮಳೆ ಬಿದ್ದು ಮೈಯೊಡೆದು

ಉಸಿರಾಡುತಿದೆ ಮಣ್ಣ ತೇವ!

-ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ.

http://sites.google.com/site/kavanasangraha/

http://kavana.sangraha.googlepages.com/home

Advertisements
25
ಏಪ್ರಿಲ್
08

ಚುಣಾವಣೆ ಎಂಬ ಅಖಾಡದ ಹೊಸ್ತಿಲಲ್ಲಿ.

ಈ ಬಾರಿ ಬೇಸಿಗೆಯ ಜಳಪಿನ ಜೊತೆಗೆ ಕಾವೇರಿದ ಸಂಗತಿಗಳು ಹಲವಾರು. ಮುಗಿಲು ಮುಟ್ಟಿದ ದಿನಸಿ ಹಣ್ಣು ತರಕಾರಿಗಳ ಬೆಲೆಗಳು ನಮ್ಮ ಮನೆಗಳ ತಿಂಗಳ ಬಜೆಟ್ಟಿನ ಚೌಕಟ್ಟನ್ನು ದಾಟಿ ಸಾಮಾನ್ಯ ಜನರ ಜೀವನದಲ್ಲಿ ಏರುಪೇರು ಮಾಡಿರೋದಂತು ನಿಜ. ಕಡು ಬಿಸಿಲು ಕಣ್ಣು ಬಿಚ್ಚಿ ಎಲ್ಲೆಡೆ ಆವರಿಸಿಕೊಳ್ಳುವ ರಥಸಪ್ತಮಿಯ ಹೊತ್ತಿಗೆ ಮೋಡ ಕಟ್ಟಿ ಗುಡುಗು ಮಿಂಚಿನೊಂದಿಗೆ ಧರೆಗಿಳಿದ ಅಕಾಲಿಕ ಮಳೆರಾಯ ನಗರವಾಸಿಗಳಿಗೆ ಒಂದಷ್ಟು ತಂಪನೆರೆದನಾದರೂ, ಅತ್ತ ಕೃಷಿಕನ ಹಗಲು ರಾತ್ರಿಗಳ ಪರಿಶ್ರಮದಿಂದ ನಳನಳಿಸುತ್ತಿದ್ದ ಬೆಳೆಗಳು ನೀರು ಪಾಲಾದದ್ದು ಮತ್ತೊಂದು ದುರಂತ. ಉತ್ತರ ಕರ್ನಾಟಕದ ಕಡೆ ದ್ರಾಕ್ಷಿ, ಬೆಣಸಿನಕಾಯಿ ಇತ್ತ ದಕ್ಷಿಣದಲ್ಲಿ ಮಾವು ಮತ್ತು ಒಕ್ಕಣೆಯ ದವಸ ದಾನ್ಯಗಳು ನೆಲೆಕಚ್ಚಿದವು. ಇದೆಲ್ಲದರ ನಡುವೆ ಮತ್ತೊಮ್ಮೆ “ಚಿಕನ್ ಗುನ್ಯ” ಜ್ವರ ಮತ್ತೆ ಘಟ್ಟ ಪ್ರದೇಶಗಳಲ್ಲಿ ಕಾಣಿಸಿಕೊಂಡಿರುವ ಸುದ್ದಿ ಬಂದಿದೆ. ಕಳೆದ ವರ್ಷ ಗ್ರಾಮೀಣರ ಬದುಕನ್ನು ಹಿಂಡಿ ಹಿಪ್ಪೆ ಮಾಡಿದ್ದ “ಚಿಕನ್ ಗುನ್ಯ” ಮತ್ತೆ ಎಲ್ಲರ ನಿದ್ದೆ ಕೆಡಿಸುವ ಹೊಸ್ತಿಲಲ್ಲಿದೆ. ಮೊನ್ನೆ ಪತ್ರಿಕೆಗಳಲ್ಲಿ ಬಂದ ಸುದ್ದಿಯ ಪ್ರಕಾರ ಸುಳ್ಯದ ಸುತ್ತಮುತ್ತಲಿನ ಐದು ಜನರಿಗೆ “ಚಿಕನ್ ಗುನ್ಯ” ಬಂದಿರುವುದು ಖಾತರಿಯಾಗಿದೆ.

ಯಾಕೊ ಗೊತ್ತಿಲ್ಲ ಈ ಬಾರಿಯ ಚುಣಾವಣೆಯ ಬಗ್ಗೆ ನನ್ಗೆ ಅಷ್ಟು ಒಲವಿಲ್ಲ, ನನ್ನೊಬ್ಬನ ಪರಿಸ್ಥಿತಿಯೊ ಅಥವ ಇನ್ನೂ ಹಲವರದ್ದೊ ಗೊತ್ತಿಲ್ಲ. ಮೊದಲಾದರೆ ಯಾರು ಗೆಲ್ಲ ಬಹುದು? ಮತ್ತೇನು ಹೊಸ ಹೊಸ ಕೆಲಗಳನ್ನು ಮಾಡಿಯಾರು? ಎಂಬ ಕುತೂಹಲವಾದರು ಇರುತ್ತಿತ್ತು. ಈ ಬಾರಿಯೂ ಯಾವ ಪಕ್ಷಕ್ಕೂ ಪೂರ್ಣ ಬೆಂಬಲ ಬರುವ ನಿರೀಕ್ಷೆ ಅವರಿಗೂ ಇಲ್ಲ, ನನಗಂತು ಮೊದಲೆ ಇಲ್ಲ. ಮತ್ತೆ ಅದೆ ಹುಲಿ ಕುರಿಯಾಟ, ರೆಸಾರ್ಟು ರಾಜಕಾರಣ, ಇವತ್ತು ಒಬ್ಬರ ಮೇಲೊಬ್ಬರು ಕತ್ತಿ ಮಸೆಯುತ್ತಿರುವವರು ನಾಳೆ ಪಕ್ಕನ ಕುರ್ಚಿಯಲ್ಲಿ ಕೂತು ಕಾಸು ಮಾಡುತ್ತಾರೆ. ಒಟ್ಟಿನಲ್ಲಿ ಗೌಡರ ಲೆಕ್ಕಾಚಾರ ಈ ಬಾರಿಯು ಸಾಗುವ ಲಕ್ಷಣಗಳೇ ಹೆಚ್ಚು. ಈ ಪರಿಸ್ಥಿಯ ನಡುವೆಯು ನಮ್ಮ ರವಿ ಕೃಷ್ಣಾ ರೆಡ್ಡಿಯಂತ ಸಾಫ್ಟ್ ವೇರ್ ಜೀವಿ ಅಮೇರಿಕಾದಿಂದ ನೇರ ಚುನಾವಣಾ ಅಖಾಡಕ್ಕೆ ದುಮುಕಿರುವುದು ಒಳ್ಳೆಯ ನಿರ್ಧಾರ, ಅವರಿಗೆ ಈ ಕೆಲಸದಲ್ಲಿ ಯಶಸ್ಸು ಸಿಗಲಿ. ಚುನಾವಣೆ ಸಮಯದಲ್ಲಿ ಮಾತ್ರ ಸಿಕ್ಕ ಸಿಕ್ಕವರಿಗೆ ಕೈಮುಗಿಯುತ್ತ ಪ್ರೀತಿ ವಿಶ್ವಾಸದ ಧಾರೆಯೆರೆಯುತ್ತಾ ಕಾಣಿಸಿಕೊಳ್ಳೊ ಜಿಡ್ಡುಗಟ್ಟಿದ ನಮ್ಮ ತಾತನ ಕಾಲದ ಪಳಯುಳಿಕೆಗಳು, ಆಗ ತಾನೆ ಜೈಲಿನಿಂದ ನೇರ ಚುನಾವಣಾ ಅಖಾಡಕ್ಕೆ ಇಳಿದು ರಾರಾಜಿಸುವ ಮಂದಿ, ಹಣ ಹೆಂಡ ತೋಳ್ಬಲವನ್ನೆ ಗೆಲ್ಲುವ ಕುದುರೆಯಾಗಿಸಿಕೊಂಡವರೆ ಸಾಮಾನ್ಯವಾಗಿ ಇರುತ್ತಿದ್ದರು. ಈ ಬಾರಿ ಚುಣಾವಣೆಗೆಯಲ್ಲಿ ಹೊಸ ತಳಿಗಳ ಜನ ಕೂಡ ಅಖಾಡಕ್ಕೆ ಇಳಿದಿದ್ದಾರೆ, ಅದರಲ್ಲಿ ಪ್ರಮುಖರು ಗಣಿಯ ಧಣಿಗಳು, ರಿಯಲ್ ಎಸ್ಟೇಟ್ ದೊರೆಗಳು, ಕೊನೆಗೆ ಕೆಲಸ ಮಾಡೊ ಮನಸ್ಸಿರೊ ಒಂದು ಮುಖವಾದರು ಕಾಣಿಸಿದರೆ ಸಾಕು. ಏನೇ ಆದರು ನಾನಂತು ಮೇ ೧೦ನೇ ತಾರೀಕು ನನ್ನ ಓಟು ಹಾಕೊದಂತು ಗ್ಯಾರಂಟಿ…. 🙂 ನೀವು ಬರ್ತಿರಾ ತಾನೆ?

“ಈ ಸಲವಾದರು ಒಂದು ಪಕ್ಷಕ್ಕೆ ಪೂರ್ಣ ಬೆಂಬಲ ಸಿಗಲಿ, ಸೂತ್ರದ ಗೊಂಬೆಯ ಪಾಡು ನಮ್ಮ ಸರ್ಕಾರಕ್ಕೆ ಬೇಡ.”

06
ಏಪ್ರಿಲ್
07

ಸೂತಕದ ಛಾಯೆಯಲಿ ಮಡುಗಟ್ಟಿದ ಮನಸುಗಳಿಗೆ.

ಹಾ!!! ನನಗಂತು ನಂಬಲಾಗದ ಕಟು ಸತ್ಯವಿದು , ನಮ್ಮೆಲರ ಮನೆಯ ಹಿರಿಯ ಪುರ್ಣಚಂದ್ರ ತೇಜಸ್ವಿ ಅವರು ಇನ್ನಿಲ್ಲ ಅನ್ನೊದು.
ನಮ್ಮೆಲ್ಲರ ಮನೆಯ ಹಿರಿಯನಾಗಿ ,ನಮ್ಮನ್ನು ಎಚ್ಚರಿಸುತ್ತಾ ತಪ್ಪು ಮಾಡಿದಾಗ ಗದರಿಸುತ್ತಾ . ಎಲ್ಲರನ್ನು ಹುರುದುಂಬಿಸುತ್ತಾ ಎಲ್ಲರನ್ನು ಬೆಳೆಸಿದ ಮಹಾನ್ ಜೀವಿ………. ಇಷ್ಟು ಬೇಗ ಅಸ್ಥಂಗತ ನಾದ ಸೂರ್ಯ ಅನ್ನೊದು ನನ್ನ ಕಲ್ಪನೆಗು ನಿಲುಕದು.

ಬಾಳ ಹಾದಿಯಲಿ ಬಹುದಾದ ಸಾಧನೆಯ ಮಾಡಿ
ನಮ್ಮೆಲರನು ಒಂದು ಮಾಡಿ, ಬದುಕ ಪಾಟ ನೀಡಿ
ಎಲ್ಲ ಬಂದನಗಳ ಕಳಚಿ,ಎಲ್ಲರನು ಅಗಲಿ
ಎಲ್ಲಿಗೆ ನಡೆದೆ ಅಜ್ಜ……………

ನಿನ್ನ ಸೂರ್ಯಕಾಂತಿ ಪ್ರಖರಿಸುವುದು ಎಂದೆದು
ನೂರು ನೂರು ಜನುಮಕು, ಎಲ್ಲ ಯುಗಕು
ಮತ್ತೆ ಹುಟ್ತಿ ಬಾ ಅಜ್ಜ , ಈ ತಾಯಿ ಕಾದಿಹಳು
ನಿನ್ನ ಸೇವೆಗೆ ……….

ಮಹಾನ್ ಚೇತನಕ್ಕೆ ನೆಮ್ಮದಿ ಸಿಗಲಿ ………. ಸಾಗು ಅಜ್ಜ ಅಂನತದೆಡೆಗೆ

ಅವರ ಸಾಹಿತ್ಯ ಜಗದ ಮುಲೆ ಮೂಲೆ ಪಸರಿಸಲಿ …..

ಭಾರವಾದ ಹೃದಯದಿಂದ
ಅಮರ
ಯಾವಾಗ ಬರೆದದ್ದು.

ಈ ತಿಂಗಳ ಪಂಚಾಂಗ.

ಜುಲೈ 2018
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
« ಡಿಸೆ    
 1
2345678
9101112131415
16171819202122
23242526272829
3031  

p

Powered by eSnips.com
Advertisements