Archive for the 'ನೆಚ್ಚಿನ ಪುಸ್ತಕ.' Category

26
ಮೇ
08

ಬೊಗಸೆಯಲ್ಲಿ ಹಿಡಿದಷ್ಟು.

ನವಕರ್ನಾಟಕ ಪ್ರಕಾಶನ ಪುಸ್ತಕ ಮಳಿಗೆಗಳಿಗೆ ಹೋಗುವುದೆಂದರೆ ನನಗೆಲ್ಲಿಲ್ಲದ ಖುಷಿ, ಸಪ್ನದಲ್ಲಿರುವ ಹಾಗೆ ಹೆಜ್ಜೆ ಹೆಜ್ಜೆಗೂ ಸೆಕ್ಯೂರಿಟಿ ಗಾರ್ಡುಗಳು, ತಣ್ಣನೆ ಕೊರೆಯುವ ಎಸಿಗಳು, ಸಾಲು ಸಾಲಾಗಿ ವರ್ಗೀಕರಿಸಿದ ಕಪಾಟುಗಳಲ್ಲಿ ಪೇರಿಸಿಟ್ಟ ಪುಸ್ತಕಗಳು, ಕೊಳ್ಳುವವರೆಡೆಗಿನ ಉದಾಸೀನ ಇದ್ಯಾವುದು ನವಕರ್ನಾಟಕದಲ್ಲಿ ಇಲ್ಲದಿದ್ದರು ಕೊಳ್ಳುವವರೊಂದಿಗೆ ಆಪ್ತವಾಗಿ ವ್ಯವಹರಿಸುವ ವಾತಾವರಣ ನನ್ನನ್ನ ಸೆಳೆಯುತ್ತದೆ ಎನ್ನಬಹುದು. ಮತ್ತೊಂದು ಆಕರ್ಷಕ ಸಂಗತಿಯೆಂದರೆ ಪ್ರತಿ ಪುಸ್ತಕ ಖರೀದಿಗೂ ೧೦% ರಿಯಾಯಿತಿ ವರ್ಷದ ೩೬೫ ದಿನವೂ ದೊರೆಯುತ್ತದೆ(ಯಾವುದೆ ಕನಿಷ್ಟ ಮಿತಿ ಇಲ್ಲದೆ). ಇಂಥ ವಾತವರಣ ಇನ್ನು ಹೆಚ್ಚು ಪುಸ್ತಕಗಳನ್ನ ಕೊಳ್ಳಲು ಓದುಗನನ್ನ ಪ್ರೇರೇಪಿಸೊದಂತು ನಿಜ. ಸದ್ಯಕ್ಕೆ ಪ್ರಕಟಣೆಯಲ್ಲಿಲ್ಲದ ಹಲವಾರು ಹಳೆಯ ಪುಸ್ತಕಗಳು, ಕಪಾಟಿನ ಸಾಲು ಸಾಲುಗಳಲ್ಲಿ ಎಲೆಮರೆಯ ಕಾಯಿಗಳಂತೆ ಅಡಗಿರುತ್ತವೆ ಅನ್ನೊದು ಮತ್ತೊಂದು ಕುತೂಹದ ಸಂಗತಿ ಇಲ್ಲಿಯದು. ಸ್ವಲ್ಪ ಸಮಯ ಹುಡುಕಿದರು ಒಂದೆರಡು ಅಂತಹ ಪುಸ್ತಕಗಳು ಸಿಗುವುದಂತು ಗ್ಯಾರಂಟಿ. ಹಾಗೆ ಕಳೆದ ಬಾರಿಯ ಭೇಟಿಯಲ್ಲಿ “ನಮ್ಮನೆ ಪುಸ್ತಕ”ಕ್ಕೆ ಸೇರಿದ ಎರಡು ಪುಸ್ತಕಗಳು “ನೀಲಿ ಮಳೆ” ಜಯಂತ ಕಾಯ್ಕಿಣಿಯವರ ಕವನ ಸಂಕಲನ ಮತ್ತು “ನಾತಲೀಲೆ” ಎಸ್ ಸುರೇಂದ್ರನಾಥ್ ಅವರ ಸಣ್ಣ ಕಥೆಗಳು.

ನೀಲಿ ಮಳೆ ಕವನ ಸಂಕಲನ.

ನೀಲಿ ಮಳೆ ಕವನ ಸಂಕಲನದಲ್ಲಿ ಒಟ್ಟು ೫೦ ಕವನಗಳಿದ್ದು ಪಿ ಲಂಕೇಷರ “ಪತ್ರಿಕೆ ಪ್ರಕಾಶನ” ದಿಂದ ೧೯೯೭ ರಲ್ಲಿ ಪ್ರಕಟವಾಗಿತ್ತು. ಜಯಂತ ಕಾಯ್ಕಿಣಿವರ ಸಣ್ಣ ಕಥೆಗಳನ್ನ ಗಮನಿಸಿದಾಗ ಅವುಗಳಲ್ಲಿ ಮುಂಬೈ ಬದುಕಿನ ಪ್ರಭಾವ ಅಗಾಧವಾಗಿದೆ ಅನ್ನ ಬಹುದು, ಹಾಗೆ ನೀಲಿ ಮಳೆ ಕವನಗಳಲ್ಲಿ ಮುಂಬೈ ಬದುಕಿನ ಸೂಕ್ಷ್ಮ ಸಂವೇದನೆಗಳನ್ನ ಹಿಡಿದಿಟ್ಟಿದ್ದಾರೆ. ನೀಲಿ ಮಳೆಯ ಅರಿಕೆಯ ಸಾಲುಗಳಲ್ಲಿ ಜಯಂತ ಕಾಯ್ಕಿಣಿ ಹೀಗೆ ಬರೆಯುತ್ತಾರೆ…

ಅರಿಕೆ.

ಸಂತೆಯಲ್ಲಿ ಕವೀ ಎಂಬ ಬೈಗುಳ ಕೂಗಿ ಕುಟ್ಟಿ
ಕಾಲರು ಹಿಡಿದು ಮಾಯವಾಗುವ ಅದೃಶ್ಯ ವ್ಯಕ್ತಿಗಳು

ಜನರಲ್ ವಾರ್ಡಿನ ಅನಾಮಿಕರಿಗೆ ಹಾಲು ಅನ್ನ
ಉಣಿಸಿ ಜೋಗುಳ ಹಾಡುವ ರಾತ್ರಿ ಪಕ್ಷಿಗಳು

ರಿಮಾಂಡ್ ಹೋಮಿನ ಕತ್ತಲಲ್ಲಿ ಹೊಳೆವ ಕಣ್ಣುಗಳು

ಶ್ರಾವಣ ಮಧ್ಯಾಹ್ನದ ಹತ್ತು ವರ್ಷಗಳ ನಂತರ
ತುಂತುರು ತುಂತುರು ನೀಲಿ ಮಳೆ.

ಪ್ರಕಟಿಸುತ್ತಿರುವ ಲಂಕೇಶರಿಗೆ ನಷ್ಟವಾಗದಿರಲಿ.

                                       -ಜಯಂತ
                                       ೨೨.೧.೧೯೯೭

ಜಾಗರದ ಕೊನೆಗೆ.

ರಾತ್ರಿ ಪಾಳಿ ಮುಗಿಸಿದ ದಾದಿ
ಬಸ್ಟಾಪಿನಲ್ಲಿದ್ದಾಳೆ. ಆಗಷ್ಟೆ ಊದಿನ ಕಡ್ಡಿ
ಹಚ್ಚಿಕೊಂಡ ರಿಕ್ಷಾ ಹಾಲಿನವ್ಯಾನು ಹಾದಿವೆ
ಎಮರ್ಕನ್ಸಿಗೆಂದು ಪಜಾಮದಲ್ಲೆ ಬಂದಿದ್ದ ಡಾಕ್ಟ್ರು
ಗೇಟಿನ ಬಳಿ ಹಾರ್ನು ಬಾರಿಸಿ ಹೊರಟಿದ್ದಾರೆ
ಕನಸಿನ ಸುರಂಗಗಳಲ್ಲೂ ಓಡಿ ಓಡಿ ದಣಿದವರು
ರಸ್ತೆ ಬದಿ ಮೆಲ್ಲಗೆ ವಿಗ್ರಹಗಳಂತೆ ಏಳುತ್ತಿದ್ದಾರೆ

ಟಿಫಿನ್ ಕ್ಯಾರಿಯರ್ಗಳು ಹೂವಿನ ಅಂಗಡಿಗಳನ್ನು
ಹಲೋ ಅಂದಿವೆ. ಸೈಕಲ್ ಬೆಲ್ ಗಳು ಕೊಳದೊಳಗಿನ
ಪ್ಲಾಸ್ಟಿಕ್ ಕಮಲಗಳನ್ನ ಕರೀತಿವೆ.
ಸಿಪ್ಪೆಯನ್ನು ಕಿತ್ತಳೆಯೆಂದು ತಿಳಿದು
ಮೋಸ ಹೋಗಿದ್ದಾನೆ ಊದ್ದ ಕಸಬರಿಕೆಯ ವಾರ್ಡ್ ಬಾಯ್.
ಮಚ್ಚರದಾನಿಗೆಂದು ಯಾರೋ ರಾತ್ರಿ
ಆಕಾಶಕ್ಕೆ ಹೊಡೆದ ಮೊಳೆಗಳು ಹಾಗೆ ಇವೆ

ರೆಕ್ಕೆಗಳ ಫಡಫಡಿಸಿ ಮರ
ಕತ್ತಲ ಕೊಡವಿಕೊಳ್ಳುತ್ತಿದೆ
ಎಲ್ಲ ಆಸ್ಪತ್ರೆಗಳ ಬಾಗಿಲು ತೆರೆಯಲಿ
ಜ್ವರದ ಕಣ್ಣಿನ ಮಕ್ಕಳು ನನ್ನ ಮಡಿಲಿಗೆ ಬರಲಿ
ಕಿರಣ ಸೋಕಿದರೆ ಸಾಕು ಮಾಯಲಿ ಗಾಯ
ಒಡೆಯದಿರಲಿ ಕಂಬನಿಗೆ ಎದೆಯ ಹಾಲು.

 

ದೀಪೊತ್ಸವ.

ಬಿರಿಯುತ್ತ ತಿಂಗಳ ಹಣ್ಣು ಕಾರ್ತಿಕ ಹುಣ್ಣಿಮೆಗೆ
ರಥಬೀದಿಯುದ್ದಕ್ಕೂ ಪಣತಿ ಸಾಲು
ರಂಗೋಲಿ ತುಳಿದಾಡುವ ಪರಿಷೆ

ಹೊಸ್ತಿಲ ಕದ ಹಿಡಿದು ಕಾಯುತಿರುವಳು ಪೋರಿ
ಬೀದಿಯಲ್ಲೀಗ ಪಲ್ಲಕ್ಕಿಯ ಮುಂದೆ
ಚಾಮರ ಬೀಸುತ್ತ ಹಾಯುವಳು ತಾಯಿ

ಉಂಡು ಹೋಗಿಲ್ಲ ರಾತ್ರಿಯಿಡೀ ಎದ್ದ ಮದ್ದಲೆಯ
ಸದ್ದಿಗೆ ನಿದ್ದೆ ಮಾಡಿಲ್ಲ ಸಪುರ ಆಯಿ
ಮಾಸಿದ ಬಳೆಗಳ ಎಳೆದೆಳೆದು ಮೊಣಕೈಗೆ

ಕೆಂಡದಂಥ ಪಲ್ಲಕಿಗೆ ಬೀಸುವಳು ಚವರಿ
ಜ್ವರ ಏರಿತೆ ಬಸವಳಿದಳೆ
ಹಿಲಾಲಿಗೆ ಎಣ್ಣೆ ಹಿಂಡುವ ಒಕ್ಕಲ ಬದಿಗೆ

ಉಂಡಳೆ ಬೇಬಿ ಮುಗಿಸಿದಳೆ ಓದು ಕಸಮುಸುರೆ
ಒಬ್ಬಳೇ ಮನೆಯೊಳಗೆ
ಬೀದಿಯಲಿ ನಡೆದಾಡುವ ಕತ್ತಲು ಮನೆ ಹೊಕ್ಕರೆ

ಹಾಯುತಿವೆ ವಾದ್ಯಗಳು ನಿಲ್ಲುತ್ತ ಆರತಿಗೆ
ಬಂತೀಗ ಉತ್ಸವ ಮನೆಯ ಎದುರು
ಆರತಿಯ ಮೊಗದಲ್ಲಿ ನೀಲಾಂಜನ ಎರ್‍ಅಡು

ಹೂವುಗಳು ಸುಡುತಿರಲು ಪಲ್ಲಯೊಳಗೆ
ಕಣ್ಣಲ್ಲೆ ಹಾಲೆರೆದಿದೆ ಕರುಳು
ಊರಿಡೀ ಸದ್ದಿರದ ಬೆಳದಿಂಗಳು.

-ಜಯಂತ ಕಾಯ್ಕಿಣಿ.

Advertisements
14
ಏಪ್ರಿಲ್
08

ಪಾಕಕ್ರಾಂತಿ ಮತ್ತು ತೇಜಸ್ವಿ.

ನಮ್ಮ ಹುಡುಗ ಶ್ರೀನಿಧಿ ಕಸ್ತೂರಿ ವಾಹಿನಿಯ ಪಾಲಾದ ಮೇಲೆ, ಅವನಿಂದ ಬರುತ್ತಿದ್ದ ಮೆಸೇಜುಗಳೆಲ್ಲ ಬ್ರೇಕಿಂಗ್ ನ್ಯೂಸುಗಳೆ. ಕುಮಾರಣ್ಣನ ರಾಜಿನಾಮೆ, ಯಡ್ಡಿಯ ಪ್ರಮಾಣವಚನ, ಗೌಡರ ಗದ್ದಲ ಹೀಗೆ ಸಾಗಿತ್ತು ಮೆಸೇಜುಗಳ ಹಾವಳಿ. ಮೊನ್ನೆ ಶುಕ್ರವಾರ ಮೊಬೈಲ್ ಸುದ್ದಿ ಪೆಟ್ಟಿಗೆಯಲ್ಲಿ ಬಂದು ಕುಳಿತಿದ್ದ ಸುದ್ದಿ ಓದಿ ಅರೆ ತೇಜಸ್ವಿ ಹೊಸ ಪುಸ್ತಕ ಬಂದಿದೆ ಅಂಕಿತದಲ್ಲಿ ತೊಗೊಂಡೆ ಎಂದು ಬರೆದಿದ್ದ. ಎಲಾ ಎಲಾ ಅಂದವನೆ ಫೋನಾಯಿಸಿದೆ ಆ ಕಡೆಯಿಂದ ಶ್ರೀ ಮಸ್ತ್ ಇದೆ ಮಗಾ, ಸಂಜೆ ಅಂಕಿತ ಕಡೆ ಆಫೀಸಿಂದ ಬರ್ತಾ ಹೊಗಿದ್ದೆ, ಪುಸ್ತಕ ಕಾಣಸ್ತು ಎತ್ತಾಕ್ಕೊಂಡು ಬಂದೆ ಎಂದು ನಕ್ಕ, ಕೊನೆಗೆ ದಿನಚರಿ ವಿಚಾರಿಸಿ ಮತ್ತೆ ಸಿಗುವ ಜೈ ಎಂದು ಫೋನಿಟ್ಟಾಯಿತು. ಸುದ್ದಿ ತಿಳಿದು ತಲೆಗೆ ಹುಳ ಬಿಟ್ಟ ಹಾಗೆ ಆದದ್ದು ದಿಟ, ಸುಮ್ಮನೆ ಇರುವುದಾರು ಹೇಗೆ? ಶನಿವಾರ ಬೆಳಗ್ಗೆಯೇ ಸಪ್ನಗೆ ನುಗ್ಗಿ “ಪಾಕಕ್ರಾಂತಿ ಮತ್ತು ಇತರ ಕಥೆಗಳು” ತಂದಾಗಿತ್ತು. ಆದರೆ ಓದಲಿಕ್ಕೆ ಸಮಸ ಸಿಗಲಿಲ್ಲ, ಕೊನೆಗೆ ಭಾನುವಾರ ಪಾಕಕ್ರಾಂತಿಗೆ ಮಂಗಳ ಹಾಡಿದ್ದಾಯಿತು.

ಈ ಪುಸ್ತಕದಲ್ಲಿನ ಕಥೆಗಳು ಈ ಮೊದಲು ಲಂಕೇಶ್ ಪತ್ರಿಕೆ, ತುಷಾರ, ಸುಧಾ, ವಿಕ್ರಾಂತ ಕರ್ನಾಟಕ, ಪ್ರಜಾವಾಣಿ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪಾಕ ಕ್ರಾಂತಿ ಎಂದಿನ ತೇಜಸ್ವಿಯವರ ಲವಲವಿಕೆಯ ಬರಹದಂತೆ ಒಮ್ಮೆ ನವಿರು ಹಾಸ್ಯ ಮತ್ತೊಮ್ಮೆ ಗಂಭಿರ ವಿಚಾರಗಳನ್ನು ಹೇಳುತ್ತಾ ಸಾಗುತ್ತೆ. ಮೊದಲನೆ ಕಥೆ ಪಾಕಕ್ರಾಂತಿ ಅಡುಗೆ ಮನೆಯಿಂದ ಶುರುವಾಗಿ ಕಲೆ, ವಿಜ್ಞಾನ, ಭಯೋತ್ಪಾದನೆ ಹೀಗೆ ಹಲವಾರು ವಿಷಯಗಳತ್ತ ಓದುಗನನ್ನ ಕರೆದೊಯ್ಯುತ್ತಾ ಪಾಕಕ್ರಾಂತಿಯ ಹಲವಾರು ಮಜಲುಗಳನ್ನ ನವಿರಾಗಿ ನಿರೂಪಿಸುತ್ತೆ.

ಪಾಕ ಕ್ರಾಂತಿ.

ಕೆಲವೆಲ್ಲಾ ಮನುಷ್ಯನಿಗೆ ಅನುಭಸಿದ ಮೇಲೆ ಅರ್ಥವಾಗುವುದು. ಮತ್ತೊಬ್ಬರು ಹೇಳಿದರೆ ತಲೆಗೆ ಹೊಗುವುದೇ ಇಲ್ಲ. ಉದಾಹರಣೆಗೆ ನನ್ನ ಶ್ರೀಮತಿ ಊರಿಗೆ ಹೋಗುತ್ತ ಅಡಿಗೆಮನೆ ಬಗ್ಗೆ ಕೆಲವು ಸೂಚನೆಗಳನ್ನು ಕೊಟ್ಟಳು. ಯಾವ್ಯಾವ ಡಬ್ಬದಲಿ ಏನೇನಿದೆ. ಸಾರಿನ ಪುಡಿ ಎಲ್ಲಿದೆ, ಸಾಸಿವೆ ಎಲ್ಲಿದೆ, ಮೆಣಸಿನಕಾಯಿ ಎಲ್ಲಿಟ್ಟಿದ್ದೇನೆ ಇತ್ಯಾದಿ. ಇದರ ಜೊತೆದೆ ಅಡುಗೆಮನೆ ಚೊಕ್ಕಟವಾಗಿ ಇಡುವ ಅಗತ್ಯವನ್ನೂ ಒತ್ತಿ ಹೇಳುದಳು. ನನಗೆ ಇದರಿಂದ ಸ್ವಲ್ಪ ರೇಗಿತು. ನಾನು ಒಳಗೊಳಗೇ ಹೆಂಗಸರು ತಾವು ಇಲ್ಲದಿದ್ದರೆ ಪ್ರಪಂಚದ ಗಂಡಸರೆಲ್ಲಾ ಊಟವಿಲ್ಲದೆ ಸತ್ತೇ ಹೋಗುತ್ತಾರೆಂದು ತಿಳಿದಿದ್ದಾರೆ. ಬೇಳೆ ಬೇಯಿಸಿ ಅದಕೊಂದಷ್ಟು ಉಪ್ಪೂ ಖಾರ ಹಾಕಿ ಸಾರು ಮಾಡಿ, ಅನ್ನ ಬೇಯಿಸಿಕೊಂಡು ತಿನ್ನೂವಷ್ಟೂ ನಮ್ಗೆ ಚೈತನ್ಯ ಇಲ್ಲವೆ? ಅಡಿಗೆ ಮನೆ ಚೊಕ್ಕಟವಾಗಿಡಬೇಕೆನ್ನುವುದು ಅದೇನು ಅಷ್ಟೊಂದು ಮುಖ್ಯವೆ? ” ಅಡುಗೆಮನೆ ಆಪರೇಶನ್ ಥಿಯೇಟರೆ? ಏಕೆಂದರೆ ಅಡುಗೆಮನೆಯ ಕಸ, ಧೂಳು ಇತ್ಯಾದಿಗಳು ತಿನ್ನುವ ಆಹಾರದೊಳಗೆ ಬೀಳದಂತೆ ನೋಡಿಕೊಂಡರೆ ಸಾಕು. ಬೇಕಾದಷ್ಟಾಯ್ತು” ಎಂದು ಗೊಣಗಿಕೊಂಡರೂ ಊರಿಗೆ ಹೊರಟವಳ ಹತ್ತಿರ ಮತ್ತೆ ಯಾಕೆ ಕ್ಯಾತೆ ತೆಗೆದು ಜಗಳವಾಡುವುದು, ಇವಳು ಹೇಳುವುದನ್ನೆಲ್ಲಾ ಹೇಳಿ ಮುಗಿಸಲಿ ಎಂದು “ಹು ಹು” ಎಂದೆ. ಅಡಿಗೆ ಪಾತ್ರೆಗಳನ್ನು ದಿನಾ ತೊಳೆಯುವುದರ ಬಗ್ಗೆಯೂ ನನ್ನದೇ ಆದ ಕೆಲವು ಅಭಿಪ್ರಾಯಗಳಿದ್ದವು. ಅಡಿಗೆ ಪಾತ್ರೆಗಳ ಹೊರಭಾಗಗಳನ್ನು ದಿನಾ ತೊಳೆಯುವುದು ಅನವಶ್ಯಕ ಎಂದೇ ನನ್ನ ಅಭಿಮತ. ಮತ್ತೆ ಒಲೆಯ ಮೇಲಿಟ್ಟು ತಳವೆಲ್ಲಾ ಮಸಿ ಹಿಡಿಯುವ ಈ ಪಾತ್ರೆಗಳ ಹೊರಭಾಗ ಕ್ಲಿನಾಗಿದ್ದರೆಷ್ಟು! ಬಿಟ್ಟರೆಷ್ಟು! ಅಡಿಗೆಯ ರುಚಿಗೂ ಪಾತ್ರೆಗಳ ಹೊರ ಭಾಗ ತಳತಳ ಹೊಳೆಯುವುದಕ್ಕೂ ಏನಾದರೂ ಸಂಭಂದವಿದೆಯ? ಹೆಲ್ತ್ ಇನ್ಸ್ ಪೆಕ್ಟರ್ ಏನಾದರೂ ನಮ್ಮ ಅಡುಗೆಮನೆ ಒಳಗೆ ಬಂದು ಇವನೆಲ್ಲಾ ಚೆಕ್ ಮಾಡಿ ಸರ್ಟಿಫಿಕೇಟ್ ಕೊಡುತ್ತಾನ? ಕೆಲವು ಪದಾರ್ಥಗಳನ್ನು ದಿನಾ ಮಾಡುವುದೂ ಸಹ ಅನವಶ್ಯಕವೆಂದೇ ನನ್ನ ಅಭಿಪ್ರಾಯ. ಉದಾಹರಣೆಗೆ ತಿಳಿಸಾರು ಇತ್ಯಾದಿ ಯಾಕೆ ದಿನಾ ಬೆಳಿಗ್ಗೆ ಎದ್ದು ಖಾರ ಕಡೆದು ಒಗ್ಗರಣೆ ಕೊಟ್ಟು ಮಾಡುತ್ತಾ ಇರಬೇಕು. ನಾಲ್ಕಾರು ದಿನಕ್ಕೆ ಆಗುವಷ್ಟು ಒಮ್ಮೆಗೇ ಮಾಡಿಟ್ಟು ಕುದಿಸಿ ಇಡಬಹುದಲ್ಲಾ? ಹೇಗೆ ನನಗೆ ಕೆಲವು ಅಮೋಘವಾದ ಅಭಿಪ್ರಾಯಗಳಿವೆ. ಆದರೆ ಯಾವ ಹೆಂಗಸರ ಹತ್ತಿರ ಇದನ್ನು ಹೇಳಿದರೂ ಅವರು ನನ್ನ ಅಭಿಪ್ರಾಯಗಳನ್ನು ಸ್ತ್ರೀ ಸ್ವಾತಂತ್ರ್ಯದ ಹಲವು ವಿದಾನಗಳೆಂದು ಪರಿಗಣಿಸದೆ ಬೆಚ್ಚಿಬಿದ್ದು, ಇಷ್ಟೋಂದು ಅನಾಗರೀಕ ಅಭಿರುಚಿ ಇರುವ ಮನುಷ್ಯನನ್ನು ಉತ್ತಮ ಕತೆಗಾರನೆಂದು ಕರೆಯುತ್ತೇವಲ್ಲ ಎಂದು ಆಶ್ಚರ್ಯಪಡುತ್ತಾರೆ. ಆದುದರಿಂದಲೇ ಅಡುಗೆಮನೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ಮಾಡಬೇಕೆಂದ ಯೋಚಿಸಿದ್ದ ನನ್ನ ಚಿಂತನೆ ಹೆಂಗಸರ ಬಳಿ ಹೇಳುವುದನ್ನು ನಿಲ್ಲಿಸಿದೆ. ಗಂಡಸರಿಗೆ ಹೇಳಿದರೋ, ತಮ್ಮ ಮನೆ ಹೆಂಗಸರಿಗೆ ವಿರಾಮ ಬಿಡುವು ಹೆಚ್ಚು ದೊರಕಿಸುವ ನನ್ನ ಯೋಜನೆಗಳ ಬಗ್ಗೆ ಯಾವ ಆಸಕ್ತಿಯನ್ನೂ ತೋರಿಸಲಿಲ್ಲ.

ಹೀಗೆ ಸಾಗುತ್ತೆ ತೇಜಸ್ವಿಯವರ ಪಾಕಕ್ರಾಂತಿ…

ಪಾಕಕ್ರಾಂತಿಯ ಬಗ್ಗೆ ಶ್ರೀನಿಧಿ ಏನು ಹೇಳುತ್ತಾನೆ ನೋಡಿ.

12
ಏಪ್ರಿಲ್
08

ಪುಟ್ಟ ಪಾದದ ಗುರುತು.

ಸಂಬಳ ಸಿಕ್ಕ ತಿಂಗಳ ಮೊದಲ ವಾರದಲ್ಲಿ ಒಂದಷ್ಟು ಪುಸ್ತಕಗಳನ್ನ ಕೊಳ್ಳುವುದು ಕಳೆದ ಐದಾರು ತಿಂಗಳಿಂದ ಆಚರಿಸಿಕೊಂಡು ಬಂದ ರೂಢಿ. ಕಳೆದ ತಿಂಗಳ ಮೊವತ್ತನೆ ತಾರೀಕೆ ಸಂಬಳ, ಗರಿ ಗರಿಯ ನೋಟುಗಳು ಜೇಬಿನಲ್ಲಿ ನಳನಳಿಸುತ್ತಿದ್ದವು. ಮತ್ತೆ ಮನಸ್ಸು ಹೇಗೆ ನಿಂತಾತು, ಕುಡುಕ ಸಾರಾಯಿ ಅಂಗಡಿ ಕಂಡೊಡನೆ ಲೋಕವ ಮರೆವಂತೆ ಮನೆಯ ಪಕ್ಕದಲ್ಲೆ ಇರುವ ಸಪ್ನ ಬುಕ್ ಹೌಸ್ ಕೈ ಬೀಸಿ ಕರೆದಿತ್ತು. ನೇರ ಮೂರನೆ ಮಹಡಿಯ ಪುಸ್ತಕಗಳಲ್ಲಿ ಕಳೆದು ಹೋಗಲು ಸಮಯ ಹಿಡಿಯಲಿಲ್ಲ, ಅರ್ಧ ಮುಕ್ಕಾಲು ಗಂಟೆ ಪೇರಿಸಿಟ್ಟ ಪುಸ್ತಕಗಳಲಿ ಚಂದದ ಶಿರ್ಷಿಕೆಯವನ್ನು ತೆಗೆದು ಮುಖಪುಟ ಗಮನಿಸಿ ಲೇಖಕ ಯಾರು? ಯಾರು ಮುನ್ನುಡಿ ಬರೆದಿದ್ದಾರೆ? ಅಂತೆಲ್ಲ ಗಮನಿಸಿ ಮತ್ತೆ ಅದೆ ಜಾಗದಲ್ಲಿ ಇಡುವುದು. ಮೊದಲೆ ಇಂಥ ಪುಸ್ತಕ ಕೋಳ್ಳಬೇಕು ಎಂದು ನಿರ್ಧರಿಸಿದ್ದರೆ ಕೆಲಸ ಸುಲಭ, ಆದರೆ ನಾನು ಸಾಮಾನ್ಯವಾಗಿ ಅಲ್ಲಿ ಹೋಗಿ ನೋಡಿ ಕೊಂಡವೆ ಹೆಚ್ಚು.

ಈ ಬಾರಿ ಹೊದಾಗ ಮೊದಲು ಕಣ್ಣಿಗೆ ಬಿದ್ದದು ಎಸ್ ಎಲ್ ಭೈರಪ್ಪನವರ “ದಾಟು”, ದಾಟು ಈ ಮೊದಲೆ ಓದಿದ್ದರಿಂದ ಹೊಸ ಪುಸ್ತಕದ ಹುಡುಕಾಟದಲ್ಲಿದ್ದಾಗ ಸಿಕ್ಕಿದ್ದು ಕುವೆಂಪು ಅವರ “ಮಲೆಗಳಲ್ಲಿ ಮದು ಮಗಳು”, ಮಲೆನಾಡ ಬದುಕಿನ ಬಗ್ಗೆ ತಿಳಿಯುವ ಕುತೂಹದಿಂದ ಅದನ್ನೆತ್ತಿಟ್ಟುಕೊಂಡೆ. ಮಧ್ಯದ ದೊಡ್ಡ ಸಾಲಿನಲ್ಲಿ ಪೇರಿಸಿಟ್ಟಿದ್ದ ಕಥಾ ಸಂಕಲನಗಳಲ್ಲಿ ಕೈಯಾಡಿಸಿ ಛಂದ ಪುಸ್ತಕ ಪ್ರಕಾಶನದ “ಪುಟ್ಟ ಪಾದದ ಗುರುತು” ಸಿಕ್ಕಿತು ಲೇಖಕಿಯ ಹೆಸರು ಅಪರಿಚಿತವಾಗೆ ಇತ್ತು ಸುನಂದ ಪ್ರಕಾಶ ಕಡಮೆ, ಮುನ್ನುಡಿಯಲ್ಲಿ ಜಯಂತ ಕಾಯ್ಕಿಯವರ ಮೊಹಕ ಸಾಲುಗಳು, ಕೇವಲ ೪೦ ರೂಗಳ ಚಂದದ ಮುಖಪುಟದ ಪುಸ್ತಕವನ್ನ ಕೊಳ್ಳದೆ ಇರುವುದಾದರು ಹೇಗೆ?

“ಪುಟ್ಟ ಪಾದದ ಗುರುತು” ಸುನಂದ ಪ್ರಕಾಶ ಕಡಮೆ ಅವರ ಚೊಚ್ಚಲ ಪುಸ್ತಕ ಮತ್ತು ಮೊದಲ ಕಥಾ ಸಂಕಲ ಕೂಡ, ನನಗೆ ತಿಳಿದ ಮಟ್ಟಿಗೆ. ಕೃತಿ ಮೊದಲನೆಯದಾದರು ಬರಹದ ಹಂದರ ಆಳವಾಗಿದೆ, ಬದುಕಿನ ಸೂಕ್ಷ್ಮ ವಿವರಳನ್ನ ಓಳಗೊಂಡ ಕಥೆಗಳು ನಮ್ಮ ಸುತ್ತ ಮುತ್ತ ಜರುಗುತ್ತಿರುವ ಅನುಭವವನ್ನ ಓದುಗನಲ್ಲಿ ಮೂಡಿಸುತ್ತವೆ. ಒಬ್ಬ ಆಪ್ತ ಮಿತ್ರನೊಡನೆ ಸರಾಗವಾಗಿ ಎಗ್ಗಿಲ್ಲದೆ ಮಾತನಾಡು ಪರಿಯಲ್ಲಿ ಕಥೆಗಳ ಹರಿವು ಕೊನೆಯ ತನಕ ತಣಿಸುವುದು. ಒಟ್ಟು ಹತ್ತು ಕಥೆಗಳಿದ್ದು, ಕೆಲವು ಕಥೆಗಳು ಈ ಮೊದಲು ವಿಜಯ ಕರ್ನಾಟಕ, ಉದಯವಾಣಿ ಇನ್ನು ಹಲವಾರು ಪತ್ರಿಕೆಗಳ ಕಥಾ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಕೃತಿಗಳೆ.

ಜಯಂತ ಕಾಯ್ಕಿಣಿಯವರ ಮುನ್ನುಡಿಯ ಸಾಲುಗಳು ಹೀಗೆ ಸಾಗುತ್ತವೆ…

ಸುನಂದಾರ ಸುಟಿಯಾದ ಕತೆಗಳು ರಭಸದಿಂದ ಹುಸಿದು ಹೋಗುತ್ತಿರುವ ಇಂದಿನ ನಮ್ಮ ಎಳೆ ಬಿಡಾರಗಳ ಸಾಂಸಾರಿಕ ಲಯವನ್ನು ಮತ್ತು ಅದನ್ನು ಪುಟ್ಟ ಸರಳ ಸಹಜ ದೈನಿಕದ ಎಳೆಗಳ ಮೂಲಕ ಮತ್ತೆ ಕಟ್ಟಲು ಯತ್ನಿಸುವ ಇಂದಿನ ಹೊಸ ತಾಯಿಯ ನಿತ್ಯದ ಸ್ಪೂರ್ತಿಯಲ್ಲು ಆಶ್ಚರ್ಯ ಹುಟ್ಟಿಸುವಂಥ ಪಕ್ವತೆಯಲ್ಲಿ ಮೃದುವಾಗಿ ಚಿತ್ರಿಸುತ್ತಿವೆ. ಆಳವಾದ ತಾಯ್ತನ ಮತ್ತು ಹದಿಹರೆಯದ ಕಣ್ಣಿನ ಫಳಫಳ ಚೈತನ್ಯ ಇವುಗಳ ಅಪರೂಪದ ಸಂಗಮದಲ್ಲಿ ಅಪಸ್ವರವಿಲ್ಲದೆ ಅರಳಿರುವ ಸುನಂದಾರ ಪ್ರಾಮಾಣಿಕ ಕತೆಗಳು ನಮ್ಮ ಬದುಕಿನ ಗುಣವನ್ನು ಆಪ್ತವಾಗಿ ಹೆಚ್ಚಿಸುತ್ತವೆ. 

-ಜಯಂತ ಕಾಯ್ಕಿಣಿ

ಗುಬ್ಬಿ ಗೂಡು

ಶ್ವಾಪುರದ ಜಾಧವ ಬಿಲ್ಡಿಂಗಿನ ದತ್ತೂ ಮಾಮನ ಮನೆಯಿಂದ ಹೊರಬಿದ್ದ ಸಂದೀಪ, ಎಸ್ಕೆ ಕಾಂಪ್ಲೆಕ್ಸ್ ಬಳಿ ಸಿಬಿಟಿ ಬಸ್ಸು ಹತ್ತಿ, ಕೋರ್ಟಿನ ಸರ್ಕಲ್ಲಿನಲ್ಲಿಳಿದಾಗ ಆಗಲೇ ಬೆಳಗಿನ ಒಂಬತ್ತೂವರೆ. ಪುಷ್ಪಾ ಮಾಮಿ ಚಹ ಕುಡಿಯಲು ಕೂತಾಗ ನಮ್ಮ ಪ್ರೀತಿಯ ಮೊದಲ ಹುಟ್ಟುಹಬ್ಬಕ್ಕೆ ನಿನ್ನ ಅಪ್ಪ ತೆಗೆಸಿಕೊಟ್ಟದ್ದಿದು ಎಂದು ಇಡ್ಲಿಪಾತ್ರೆ ತೋರಿಸುತ್ತ ಅಕ್ಕರೆಯಿಂದ ಒಂದೆರಡು ಇಡ್ಲಿ ಹೆಚ್ಚೇ ಬಡಿಸಿದ್ದು ಬಸ್ಸು ಹತ್ತಿದ ಕೂಡಲೇ ತೂಕಡಿಕೆ ತಂದುಬಿಟ್ಟಿತ್ತು. ದುರ್ಗದ ಬೈಲಿನಲ್ಲಿ ಪ್ರೀತಿ ಫೈನಾನ್ಸ್ ನಡೆಸುತ್ತ ಸದಾ ಸಫಾರಿ ಡ್ರೆಸ್ಸನ್ನೇ ತೊಡುತ್ತಿದ್ದ ದತ್ತೂ ಮಾಮ ಆಫೀಸಿಗೆ ತೆರಳುತ್ತಿ. ಮುಂದೆ ಓದಿ…
ಯಾವಾಗ ಬರೆದದ್ದು.

ಈ ತಿಂಗಳ ಪಂಚಾಂಗ.

ಡಿಸೆಂಬರ್ 2017
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
« ಡಿಸೆ    
 123
45678910
11121314151617
18192021222324
25262728293031

p

Powered by eSnips.com