Archive for the 'ನೆನಪಿನಂಗಳದಿಂದ.' Category

31
ಡಿಸೆ
08

ನೆನಪುಗಳಿಂದ ಕನಸುಗಳೆಡೆಗೆ.

shubhashya01

ಬದುಕೆಂಬ ಪಯಣದಲ್ಲಿ ಕಳೆದು ಹೋಗಿದ್ದವರು ಮತ್ತೆ ಸಿಕ್ಕಿದ್ದಾರೆ, ಸಿಕ್ಕಿದ್ದವರು ಕಳೆದು ಹೋಗಿದ್ದಾರೆ ಆದರು ಬದುಕು ಸಾಗುತ್ತಿದೆ. ಮತ್ತೊಂದು ನವ ವರುಷದ ಹೊಸ್ತಿಲಲ್ಲಿ ಮತ್ತೆ ಮತ್ತೆ ಕಾಡುವ ನೆನಪುಗಳ ಅಮಲಿನಿಂದ ಹೊರ ಬಂದು ಹೊಸ ಕನಸುಗಳತ್ತ ಸಾಗುತ್ತಿದೆ ಬದುಕು. ಕಳೆದ ದಿನಗಳು ಸಾಕಷ್ಟು ಸುಖದ ಘಳಿಗೆಗಳನ್ನ, ಮಡುಗಟ್ಟುವ ದು:ಖವನ್ನ ತಂದಿವೆ. ಇದೆಲ್ಲದರ ಹೊರತಾಗಿ ಸುಖದಲ್ಲಿ ಹಿಗ್ಗಿಸದೆ ದು:ಖದಲ್ಲಿ ಕುಗ್ಗಿಸದೆ ಬದುಕಿನ ಪ್ರತಿ ಕ್ಷಣಗಳಲ್ಲೂ ಹೊಸ ಹೊಸ ಅನುಭವಗಳನ್ನ ತಂದ ಕಳೆದ ವರುಷಕ್ಕೆ ನನ್ನದೊಂದು “ಥ್ಯಾಂಕ್ಸ್” ಇರಲಿ.

ಪುಟ್ಟ ಸಂಬಳದ ಚಾಲಕ ವೃತ್ತಿಯಲ್ಲಿದ್ದೂ, ಸಮಯ ಸಿಕ್ಕಾಗಲೆಲ್ಲ ಪುಸ್ತಕಗಳನ್ನ ಓದಿಕೊಳ್ಳುತಾ ಹತ್ತು ಹಲವು ವಿಚಾರಗಳನ್ನ ನನ್ನೊಡನೆ ಹಂಚಿಕೊಂಡಿದ್ದ ಗೆಳೆಯ ಹಿಂತಿರುಗಿ ಬಾರದಂತೆ ಹೋರಟು ಹೋದ. ಅವನ ನಂ. ಇನ್ನು ನನ್ನ ಮೋಬೈಲ್ ನಲ್ಲೆ ಇದೆ. ಕರೆ ಮಾಡಬಹುದು?? “ಅಮರಣ್ಣ ಈ ಪುಸ್ತಕ ಓದಿದ್ಯಾ” ಕೇಳಬಹುದು?? ಒಮ್ಮೊಮ್ಮೆ ಅನ್ನಿಸುತ್ತೆ. “ಗಿರಿ”ಯನ್ನ ಕಳೆದುಕೊಂಡ ಎಲ್ಲರಿಗೂ ಅವನ ಅಗಲಿಕೆಯ ದು:ಖವನ್ನ ಬರಿಸುವ ಶಕ್ತಿ ಹೊಸ ವರುಷ ತರಲಿ.

ಕಳೆದ ನಾಲ್ಕೈದು ತಿಂಗಳುಗಳಿಂದ “ಮಾತಿಲ್ಲದ ಮೌನರಾಗಗಳು” ಮೌನವಾಗಿದಕ್ಕೆ ಕ್ಷಮೆ ಇರಲಿ. “ಸುಮ್ಮನೆ” ಫೋಟೊ ಬ್ಲಾಗು ಮತ್ತು ಚಿತ್ರ ಕವನಕ್ಕೆ ಹತ್ತಾರು ಚಿತ್ರಗಳನ್ನ ಹಾಕಿದ್ದೆ ನನ್ನ ದೊಡ್ಡ ಸಾಧನೆ :p . ಆದರೆ ಮತ್ತೊಂದೆಡೆ ಸಾಕಷ್ಟು ಪುಸ್ತಕಗಳನ್ನ ಓದಿಕೊಂಡೆ ಅನ್ನೋದು ಪ್ಲಸ್ ಪಾಯಿಂಟ್, ಈ ವರುಷದಲ್ಲಿ ಹೆಚ್ಚಿಗೆ ಓದಿದ್ದು ತೇಜಸ್ವಿಯವರ ಪುಸ್ತಗಳನ್ನ ಅನ್ನೋದು ಮತ್ತೂ ಖುಷಿಯ ವಿಷಯ. ಪುಸ್ತಕ ಓದುವುದ ಹೊರತಾಗಿ ನನ್ನ ಹಳೆಯ ಚಾಳಿಯಾದ ಸಿನಿಮಾ ಮತ್ತು ಡಾಕ್ಯೂಮೆಂಟರಿ ಸಿನಿಮಾಗಳ ಸಂಗ್ರಹ ಅವ್ಯಾಹತವಾಗಿ ಸಾಗಿದೆ. ಭಾಷೆಗಳ ಎಲ್ಲೆ ಮೀರಿ ಹಲವಾರು ಸಿನಿಮಾಗಳನ್ನ ಸಂಗ್ರಹಿಸಿದ್ದೇನೆ, ಹಲವನ್ನ ನೋಡಿಯಾಗಿದೆ. ೫೦ಕ್ಕೂ ಹೆಚ್ಚಿನ ಡಾಕ್ಯೂಮೆಂಟರಿ ಸಿನಿಮಾಗಳು ನನ್ನ ಸಂಗ್ರಹದ ಭಾಗವಾದವು. ಇಷ್ಟಾದರೂ ನನ್ನ ಸಂಗ್ರಹದ ದಾಹ ಇಂಗಿಲ್ಲ. ಇವನ್ನೆಲ್ಲ ಸಂಗ್ರಸಿದಕ್ಕಿಂತ ಗೆಳೆಯರೋಡನೆ ಹಂಚಿಕೊಂಡಾಗಿನ ತೃಪ್ತಿಯೆ ಬೇರೆ….. ಈ ಅವಕಾಶ ದೊರೆತ ನಾನು ಧನ್ಯ.

ಕಳೆದ ವರುಷದ ಅಮಲಿನಿಂದ ಕಳಚಿಕೊಂಡು ಹೊಸ ವರುಷದಲ್ಲಿ ಮಾಡಬೇಕಾದ/ಮಾಡಿಸಬೇಕಾದ ಕಾರ್ಯಕ್ರಮ/ಕೆಲಸಗಳು ಸಾಕಷ್ಟಿವೆ.

* ನಮ್ಮ ಭಾವಗೀತೆಗಳ ಸಂಗ್ರಹ ಹೊಸ ವರುಷದಲ್ಲಿ ಶತಕ ಕಾಣಲಿದೆ (ಸದ್ಯ ನನ್ನ ಬಳಿ ೯೬ ಭಾವಗೀತೆಗಳ  ಸಂಗ್ರಹಗಳಿವೆ).
* ಗೆಳೆಯ ಶೀನಿಧಿ ಡಾ.ಹೆಚ್ ಎಸ್ ವೆಂಕಟೇಶಮೂರ್ತಿಯವರ ಸಮಗ್ರ ಕಾವ್ಯ ಕೊಡಿಸುತ್ತಾನೆ(೨೦೦೮ ರಲ್ಲೆ ತಲುಪಬೇಕಿತ್ತು ಪರವಾಗಿಲ್ಲ ಕಾಯ್ತೇನೆ 🙂 )
* ನಮ್ಮ ಸಿನಿಮಾ ಮತ್ತು ಡಾಕ್ಯೂಮೆಂಟರಿ ಸಿನಿಮಾ ಸಂಗ್ರಹಕ್ಕೆ ಮತ್ತೊಂದಷ್ಟು ಆಹಾರ ಸಿಗಲಿ (ನೀವು ಪ್ರಾರ್ಥಿಸಿಕೊಳ್ಳಿ ನನಗೆ ಸಿಕ್ಕರೆ ನಿಮಗೂ ಸಿಕ್ಕಹಾಗೆ ತಾನೆ).
* ೨೦೦೮ರಲ್ಲಿ ಶುರುಮಾಡಿದ ಚಿತ್ರಸ್ಪಂದನ ಮತ್ತು ನಾಗರೀಕ ಅಂತರ್ಜಾಲ ತಾಣಗಳ ಕೆಲಸ ಕಾರಣಾಂತರಗಳಿಂದ “ಸರಕಾರಿ ಕೆಲಸದ” ಹಾಗೆ ಕುಂಟುತ್ತ ಸಾಗಿದೆ, ಹೊಸ ವರುಷದಲ್ಲಿ ಚುರುಕಾಗಲಿ.
* ನಮ್ಮ ಕವನ ಸಂಗ್ರಹಕ್ಕೆ ಇನ್ನೂ ಹೆಚ್ಚಿನ ಕವನಗಳನ್ನ ಸೇರಿಸಲು ಸಮಯ ಸಿಗಲಿ.
* ೨೦೦೮ರಲ್ಲಿ ಮೂರು ಯಶಸ್ವಿ ಕಾರ್ಯಕ್ರಮಗಳನ್ನ ಕೊಟ್ಟ ಕನಸಿನ ಕೂಸು “ಪ್ರಣತಿ” ೨೦೦೯ರಲ್ಲಿ ಹೊಸ ಹೊಸ ಕಾರ್ಯಕ್ರಮಗಳನ್ನ ಮಾಡುವಂತಾಗಬೇಕು.
* ಹೊಸ ವರುಷದಲ್ಲಿ ಹತ್ತಾರು ಚಾರಣಗಳನ್ನ ಮಾಡುವಂತಾಗಲಿ.

ಸದ್ಯಕ್ಕೆ ಈ ಲಿಸ್ಟನ್ನ ಇಲ್ಲಿಗೆ ನಿಲ್ಲಿಸೋಣ ಅಂತ! ನಾನು ಒಬ್ಬ ಸಾಮಾನ್ಯ ಮನುಷ್ಯ ಅಲ್ವ ಆಸೆಗಳ ಬುತ್ತಿ ಮುಗಿಯೋದೆ ಇಲ್ಲ… ಕನಸುಗಳಿಗೆ ಎಲ್ಲೆ ಅನ್ನೊದೆ ಇರೋಲ್ಲ 🙂

ನಿಮ್ಮೆಲ್ಲರ ಕನಸುಗಳ ನನಸಾಗಿಸುವ ಘಳಿಗೆಗಳನ್ನ ಹೊಸ ವರುಷ ಹೊತ್ತು ತರಲಿ ….
ಶುಭ ಹಾರೈಕೆಗಳೊಂದಿಗೆ.
-ಅಮರ

Advertisements
03
ಜುಲೈ
08

ಬಾಗಿಲಿಗೆ ಜೋತುಬಿದ್ದ ಭಾರದ ಬೀಗ ಮಾತಾಡದೆ ಮೌನವಾಗಿದೆ.

ನಂಜರಾಜ ಬಹದ್ದೂರ್ ಛತ್ರದ ಮುಂದೆ ಸಾಗುವ ರಸ್ತೆ ಶಿವರಾಮ ಪೇಟೆಯ ಮುಖ್ಯ ರಸ್ತೆಗಳಲೊಂದು, ಮೈಸೂರಿನ ಹಳೆ ತಲೆಮಾರಿನ ಅಂಗಡಿ ಮುಂಗಟ್ಟುಗಳು ರಸ್ತೆಯುದ್ದಕ್ಕೂ ಚಿಕ್ಕಗಡಿಯಾರ ವೃತ್ತದವರೆಗೆ ಪೊಣಿಸಿದಂತೆ ಎರಡು ಬದಿಯಲ್ಲಿ ಸಾಲುಗಟ್ಟಿವೆ. ಮೊದಲು ಬಲಕ್ಕೆ ಸಿಗುವ ಶೃಂಗಾರ್ ಹೋಟೆಲು, ಅದೇ ಸಾಲಿನಲ್ಲಿ ನಾಲ್ಕೈದು ಮಳಿಗೆಗಳನ್ನು ದಾಟಿ ಸಾಗಿದರೆ ಎದಿರಾಗುವುದು ಚಂದ್ರು ಸೌಂಡ್ ಸಿಸ್ಟಮ್. ಸುಮಾರು ೧೦೦-೧೫೦ ವರ್ಷಗಳಷ್ಟು ಹಳೆಯದಾದ ಮಂಗಳೂರು ಹೆಂಚಿನ ಚಾವಣಿಯ ಕಟ್ಟಡ, ಒಳಗೆ ಪ್ರವೇಶಿಸುತ್ತಿದ್ದಂತೆ ಎಡಭಾಗದಲ್ಲಿ ಟೆಲಿಪೋನ್ ಭೂತಿನ ಎರಡು ಡಬ್ಬಗಳು, ಬಲಭಾಗದಲ್ಲಿ ಕೂರಲು ಹಾಕಿದ್ದ ಬೆಂಚು. ಒಳಕೋಣೆಯಲ್ಲಿ ದಡೂತಿ ಮರದ ಪೆಟ್ಟಿಗೆಗಳ ಹಾಗೆ ಕಾಣುತ್ತಿದ್ದ ಧ್ವನಿವರ್ಧಕಗಳು, ಮೂಲೆಗೆ ಆತುಕೊಂಡಿದ್ದ ಮರದ ಕಪಾಟಿನ ತುಂಬಾ ಸಾಲು ಸಾಲಾಗಿ ಜೋಡಿಸಿದ್ದ ಗ್ರಾಮೊಫೋನು ತಟ್ಟೆಗಳು, ಟೇಪ್ ರೇಕಾರ್ಡ್ ಮಾಡಲು ಬಳಸುತ್ತಿದ್ದ ಬೆಳ್ಳಿ ಬಣ್ಣದ ಹೊಳೆವ ಫಿಲಿಫ್ಸ್ ರೇಕಾರ್ಡರ್, ವಿವಿಧ ಬಣ್ಣ ಗಾತ್ರದ ಮೂರ್ನಾಲ್ಕು ಗ್ರಾಮೊಫೋನ್ ಪ್ಲೇಯರುಗಳು. ಪಕ್ಕದ ಕೋಣೆಯಿಂದ ಆಗಾಗ ಸದ್ದುಮಾಡುತ್ತಾ ಮೌನವಾಗುತ್ತಾ ಕುಟ್ಟುವ ಬೆರಳುಗಳಿಗಾಗಿ ಹಪಹಪಿಸುವ ಬೆರಳಚ್ಚು ಯಂತ್ರಗಳು. ಆ ಹೊತ್ತಿಗಾಗಲೆ ಕಂಪ್ಯೂಟರ್ ಡಿಟಿಪಿ ಸೆಂಟರುಗಳ ಭರಾಟೆಯಿಂದ ತಮ್ಮ ಅಸ್ಥಿತ್ವ ಕಳೆದುಕೊಳ್ಳುತ್ತ ಅವಸಾನದ ಅಂಚಿನಲ್ಲಿದ್ದ ಬೆರಳಚ್ಚು ಯಂತ್ರಗಳು ಮತ್ತು ಅವಲಂಬಿತರು.

ಸಾವಿರಾರು ಗ್ರಾಮೊಫೋನು ತಟ್ಟೆಗಳ ಸವಿವರವಾದ ಮಾಹಿತಿಯನ್ನ ಸುಮಾರು ೫೦೦ ಪುಟಗಳ ಪುಸ್ತಕದಲ್ಲಿ ಕನ್ನಡ, ಹಿಂದಿ, ಇತರೆ ಹೀಗೆ ವರ್ಗಿಕರಿಸಿ ಚಿತ್ರ ಬಿಡುಗಡೆಯಾದ ಇಸವಿಯ ಅನುಕ್ರಮವಾಗಿ ಬರೆದಿಟ್ಟಿದ್ದರು. ನಾವು ಭೇಟಿ ನೀಡಿದಾಗಲೆಲ್ಲ ಪುಸ್ತಕದ ಪ್ರತಿ ಹಾಳೆಯನ್ನ ತನ್ಮಯತೆಯಿಂದ ತಿರುವಿ, ನಮಗಿಷ್ಟವಾದ ಪಟ್ಟಿ ತಯಾರಿಸಿ ಕ್ಯಾಸೆಟ್ ನೊಂದಿದೆ ಮಾದೇವನಿಗೆ ಕೊಟ್ಟರೆ ಅರ್ಧ ಕೆಲಸ ಮುಗಿದ ಹಾಗೆ. ಅವನಿಗೆ ಆಗಾಗ ಕಾಫಿ ಸಿಗರೇಟು ಕೊಡಿಸಿ ನಮ್ಮ ಕೆಲಸಕ್ಕೆ ವಿಶೇಷ ಗಮನ ಕೊಡುವಂತೆ ನೋಡಿಕೊಳ್ಳುತ್ತಾ, ಒಂದೊಂದು ಕ್ಯಾಸೆಟ್ ರೆಕಾರ್ಡ್ ಮಾಡಿಸುವಾಗಲು ಅದೆಷ್ಟು ಬಾರಿ ಅವನ ಅಂಗಡಿಗೆ ಅಲೆದಿದ್ದೆವೊ ದೇವರೆ ಬಲ್ಲ. ಮತ್ತೆಲ್ಲು ಸಿಗದ ಸಂಗ್ರಹ ಅವನ ಬಳಿ ಇದ್ದುದ್ದರಿಂದ ನಮಗೂ ಅನ್ಯ ಮಾರ್ಗವಿರಲಿಲ್ಲ. ಕ್ಯಾಸೆಟ್ಟು ಕೊಳ್ಳಲು ೩೦ ರೂ, ಮಾದೇವನಿಗೆ ೨೫ ರೂ, ನಾಲ್ಕೈದು ಬಾರಿ ಅಲೆದಾಡಿದ್ದಕ್ಕೆ ಪೆಟ್ರೊಲ್ ಖರ್ಚು ೩೦ ರಿಂದ ೪೦ ರೂ ಹೀಗೆ ೧೦೦ ರೂಗಳ ಗಡಿ ತಲುಪುತ್ತಿತ್ತು ನಮ್ಮ ಹಾಡುಗಳ ಖಯಾಲಿ. ಒಮ್ಮೆ ಹಾಡುಗಳನ್ನ ಕೇಳಿದರೆ ಅಷ್ಟೆಲ್ಲ ಪರಿಶ್ರಮ ವ್ಯರ್ಥವಾಗಿಲ್ಲ ಅನ್ನೊ ಸಮಾಧಾನ. ಚೀಟಿಯಲ್ಲಿ ಬರೆದ ಹಾಡಿನೆಡೆಗೆ ಕಣ್ಣಾಡಿಸಿ ಕಪಾಟಿನ ಸಾಲುಗಳಲ್ಲಿ ಅಡಗಿದ್ದ ಸಾವಿರಾರು ಕರಿಯ ತಟ್ಟೆಗಳಲ್ಲಿ ನಿಖರವಾದುದನ್ನು ಒಮ್ಮೆಲೆ ತೆಗೆಯಬಲ್ಲ ಅವನ ಪರಿಣತಿಯನ್ನ ಮೆಚ್ಚಲೆ ಬೇಕು, ಅಷ್ಟಲ್ಲದೆ ತಿರುಗುತ್ತಿರುವ ಗ್ರಾಮೊಫೋನಿನ ಮೇಲೆ ತಟ್ಟೆ ಇರಿಸಿ ಒಂದೆ ಕ್ಷಣದಲ್ಲಿ ನಮಗೆ ಬೇಕಾದ ಹಾಡಿನ ಪ್ರಾರಂಭಕ್ಕೆ ಮುಳ್ಳನ್ನು ಇರುಸಿ ರೆಕಾರ್ಡಿಂಗ್ ಚಾಲು ಮಾಡುವಾಗ ಅವನ ಆತ್ಮವಿಶ್ವಾಸ ಮತ್ತು ಅನುಭವ ಎದ್ದುಕಾಣುತ್ತಿದ್ದವು. ಇವತ್ತಿಗೂ ಅವನು ಮಾಡಿಕೊಟ್ಟ ಕ್ಯಾಸೆಟ್ಟುಗಳ ಸಾಲುಗಳು ಮನೆಯ ಕಪಾಟಿನಲ್ಲಿ ಕೇಳುವವರಿಗಾಗಿ ಕಾದಿವೆ. ನಂತರದ  ಎಂಪಿತ್ರಿ ಕ್ರಾಂತಿಯ ಭರಾಟೆಯಲ್ಲಿ ತನ್ನ ಅಳಿದುಳಿದ ಕರಿಯ ತಟ್ಟೆಗಳಲ್ಲಿ ಮಾದೇವ ಎಲ್ಲಿ ಕಳೆದು ಹೋದನೊ ಗೊತ್ತಿಲ್ಲ. ಅವನ ಅಂಗಡಿಯ ಬಾಗಿಲಿಗೆ ಜೋತುಬಿದ್ದ ಭಾರದ ಬೀಗ ಮಾತಾಡದೆ ಮೌನವಾಗಿದೆ.

12
ಮೇ
08

ನನ್ನಮ್ಮ.

ಮೊನ್ನೆ ಚುಣಾವಣೆಯಂದು ಸೊಂಟದ ಮೇಲೆ ಕೈ ಹಾಕೊಂಡು ಮತ ಹಾಕಲು ಸಾಲುಗಟ್ಟಿ ನಿಂತಿದ್ದೆ, ನನ್ನ ಮುಂದಿನ ಸರದಿಯಲ್ಲಿ ಅಮ್ಮ. ಹೆಸರು ಗುರುತಿನ ಚೀಟಿ ಪರೀಕ್ಷಿಸಿದ ಅಧಿಕಾರಿ ಕೆಂಪು ಬಣ್ಣದ ಹಾಳೆಯ ಮೇಲೆ ಚೌಕದಲ್ಲಿ ಅಡಗಿದ್ದ ಸಂಖ್ಯೆಯೊಂದಕ್ಕೆ ಸೊನ್ನೆ ಸುತ್ತಿ ಗುರುತಿಸಿಕೊಳ್ಳುತ್ತ ಅಮ್ಮನನ್ನ ಮುಂದಿನ ಅಧಿಕಾರಿಯತ್ತ ಕಳುಹಿಸಿದ. ಅಮ್ಮನ ಹೆಸರಿದ್ದ ಹಾಳೆಯನ್ನ ಹುಡುಕಿದ ಅವನು ಸಹಿಮಾಡುವ ಜಾಗವನ್ನ ತೋರಿಸುತ್ತಿದ್ದ, ಹಿಂದೆ ನಿಂತ ನಾನು ಗುರುತಿನ ಚೀಟಿಯನ್ನ ತೋರಿಸುತ್ತಿದ್ದೆ, ಸೌಟು ಹಿಡಿದು ತನ್ನ ಅಡುಗೆಯ ಮನೆಯನ್ನ ಆಳುತಿದ್ದ ಅಮ್ಮ ಅಪರೂಪಕ್ಕೆ ಪೆನ್ನು ಹಿಡಿದಿದ್ದಳು. ತಾನು ಕಲಿತ ಅಕ್ಷರಗಳನ್ನೆಲ್ಲ ಜೋಡಿಸಿ ತನ್ನ ಹೆಸರು ಬರೆಯುತ್ತಿದ್ದಳು, ಹಿಂದೆ ಕುತೂಹಲದಿಂದ ಗಮನಿಸುತ್ತಿದ್ದ ನನಗೆ ಆದ ಖುಷಿ ಅಷ್ಟಿಷ್ಟಲ್ಲ. ನನಗೂ ಸರಿಯಾಗಿ ನೆನಪಿಲ್ಲ ಎಳೆಂಟು ವರ್ಷಗಳ ಹಿಂದಿನ ಮಾತು, ಪುಟ್ಟ ಮಗುವಿಗೆ ಅಕ್ಷರಗಳನ್ನ ತಿದ್ದಿಸುವ ಪರಿಯಲ್ಲಿ, ಅಮ್ಮನ್ನ ಕೈಯಲ್ಲಿ ಪೆನ್ನು ಹಿಡಿಸಿ ಅವಳಿಗೆ ಬ್ರಹ್ಮಾಂಡದಂತಿದ್ದ ಅಕ್ಷರಗಳನ್ನ ತಿದ್ದಿಸಿದ್ದು. ಪಕ್ಕದಲ್ಲಿ ಕುಳಿತು ಅದರ ಮೇಲ್ವಿಚಾರಣೆ ವಹಿಸಿದ್ದ ತಂಗಿ, ಅಮ್ಮ ತಿದ್ದುವೆಕೆಯಲ್ಲಿ ತಪ್ಪು ಮಾಡಿದಾಗ ನನ್ನ ಬಳಿ ಅದನ್ನೆಲ್ಲ ಒಪ್ಪಿಸುತ್ತಾ, ಅಮ್ಮ ಒಂದೊಂದು ಸಾರಿ ತಿದ್ದಿದಾಗಲು ತಾನೆ ಹೊಸ ಹೊಸ ಅಕ್ಷರಗಳನ್ನ ಕಲಿತಷ್ಟು ಸಂಭ್ರಮಿಸಿದ್ದಳು.

ತನ್ನ ಅಡುಗೆ ಮನೆಯ ರಾಜ್ಯಭಾರವನ್ನ ಬದಿಗಿಟ್ಟು ಸಮರೋಪಾದಿಯಲ್ಲಿ ಅಕ್ಷರಾಭ್ಯಾಸದಲ್ಲಿ ತೋಡಗಿದ್ದ ಅಮ್ಮನನ್ನ ಕುತೂಹಲದಿಂದ ಗಮನಿಸುತ್ತಿದ್ದ ಅಪ್ಪ, ನಿಮ್ಮಮ್ಮ ಮುಂದಿನ ವರ್ಷ ಕಾಲೇಜ್ ಸೇರ್ಕೊತಾಳಾ ಕೇಳೊ ಎಂದು ರೇಗಿಸಿದ್ದಕ್ಕೆ, ನಿಮ್ಮಪ್ಪನಿಗೆ ಅವಾಗಲೆ ಹೆದರಿಕೆ ಶುರುವಾಗಿರೊ ಹಾಗಿದೆ, ಎಲ್ಲಿ ನಾನೇ ಅಡುಗೆ ಮಾಡ್ಬೇಕಾಗುತ್ತೊ ಅಂತ ಕಣೋ ಎನ್ನುತ್ತ ಅಪ್ಪನ್ನನ್ನ ಬೆಚ್ಚಿಸಿದ್ದಳು. ಮತ್ತೆ ಅಮ್ಮ ಎಷ್ಟು ಕಲಿತಳು? ಏನು ಕಥೆ? ಅನ್ನೊ ಬಗ್ಗೆ ಗಮನಿಸಿರಲಿಲ್ಲ ಅಥವಾ ಅಂತ ಸಂದರ್ಭಗಳು ಬಂದಿರಲಿಲ್ಲ ಅನ್ನಬಹುದು, ಅದರೂ ಅಮ್ಮ ನಾಲ್ಕು ಅಕ್ಷರದ ಅವಳ ಹೆಸರನ್ನು ಬರೆಯುವ ಬ್ರಹ್ಮವಿದ್ಯೆ ಕಲಿತು ಅದನ್ನ ಪ್ರಯೋಗಿಸಿದ್ದನ್ನು ಕಂಡು ಉಬ್ಬಿಹೋದದಂತು ನಿಜ…. 🙂

18
ಮಾರ್ಚ್
08

‘ಟೈ’ ಎಂಬ ಕುತ್ತಿಗೆಗೆ ಸುತ್ತುವ ರಹಸ್ಯ ಗಂಟಿನ ಸುತ್ತ.

ಡಿಗ್ರಿ ಗಿಟ್ಟಿಸುವ ಸಲುವಾಗಿ ಓದೊದನ್ನ ಬಿಟ್ಟು ಸುಮಾರು ಎರಡು ಮುಕ್ಕಾಲು ವರ್ಷಗಳೆ ಕಳೆದು ಹೋದವೆನೊ, ಕಲಿತ ಕಾಲೇಜಿಗೆ ಗುಡ್ ಬೈ ಹೇಳಿ ಕೆಲಸ ಹುಡುಕಿಕೊಂಡು ಈ ಮಹಾನಗರಕ್ಕೆ ಬಂದದ್ದು ಆಯ್ತು. ಐದಾರು ಜನ ಒಟ್ಟಿಗೆ ಕಲಿತವರು ಇಲ್ಲೂ ಕೂಡ ಒಂದೆ ನೆಲೆಯಲ್ಲಿ ಬದುಕುತಿದ್ದಿವಿ, ಬೆಳಗ್ಗೆ ಮಬ್ಬು ಕತ್ತಲೆಯಿಂದಲೆ ಶುಋವಾಗುವ ನಮ್ಮ ಓಟ ಎಲ್ಲ ದಿಕ್ಕುಗಳೆಡೆಗೂ ಸಾಗುತ್ತೆ. ಒಬ್ಬ ಕೇಂಗೆರಿಯಾದರೆ ಮತ್ತೊಬ್ಬ ಎಲೆಕ್ಟ್ರಾನಿಕ್ ಸಿಟಿ ಹೀಗೆ ಸಾಗುತ್ತೆ ಒಬ್ಬೊಬ್ಬರ ದಾರಿ, ಮತ್ತೆ ರಾತ್ರಿ ಕತ್ತಲಲ್ಲಿ ಒಟ್ಟಾಗುವ “ನಮ್ಮ ಸಂಸಾರ ಆನಂದ ಸಾಗರ”.

ಮೊನ್ನೆ ನಮ್ಮನೆಲಿ ಹಬ್ಬದ ವಾತವರಣ ನಮ್ಮ ಹುಡ್ಗ ಪ್ರೀತಿಶ ಇನ್ಪೊಸಿಸ್ ನಲ್ಲಿ ನೌಕರಿ ಗಿಟ್ಟಿಸಿದ್ದ, ಕಂಪನಿ ಕಳ್ಸಿದ್ದ ಹತ್ತಾರು ಪುಟಗಳ ಕಾಲ್ ಲೆಟರ್ ನಲ್ಲಿ ಒಂದೆರಡು ಪುಟ ಹೇಗೆ ಬರ್ಬೆಕು ಯಾವತ್ತು ಯಾವತರಹದ ಬಟ್ಟೆ ತೊಡ್ಬೆಕು ಅಂತೆಲ್ಲ ಮಾರುದ್ದ ಕಂಡಿಷನ್ ಹಾಕಿದ್ರು. ನಮ್ಮ ಸಮಸ್ಯೆ ಶುಋವಾಗಿದ್ದು ವಾರಕ್ಕೆರಡು ದಿನ ಟೈ ಸುತ್ತಿಕೊಂಡು ಹೋಗಬೇಕಾದ ವಿಚಾರ ತಿಳಿದಾಗ. ನಮ್ಮ ಐದು ಮಂದಿಗೂ ಜೀವಮಾನದಲ್ಲಿ ಟೈ ಕಟ್ಟಿಕೊಂಡ ನೆನಪಿಲ್ಲ ಅಭ್ಯಾಸವು ಇಲ್ಲ. ನಾವು ಕೆಲಸ ಮಾಡೊ ಕಂಪನಿಯವರು ಪಾಪ ಯಾವತ್ತು ನಮ್ಮನ್ನ ಹೀಗೆ ಬಟ್ಟೆ ಹಾಕಂಡು ಬನ್ನಿ ಅಂದವರಲ್ಲ. ನನ್ನ ತಂಗಿ ಪ್ರಾಥಮಿಕ ಶಾಲೆಗೆ ಹೋಗೊವಾಗ ಟೈ ಕಟ್ಟಿಕೊಳ್ಳುತಿದ್ದ ನೆನೆಪು, ಆದ್ರೆ ಅಲ್ಲಿ ಗಂಟು ಹಾಕೊ ಪ್ರಮೇಯವಿರಲಿಲ್ಲ. ಅಂಗಿಯ ಕಾಲರ್ ಸುತ್ತ ಸಿದ್ದಮಾಡಿಟ್ಟ ಟೈನ ದಾರ ಕಟ್ಟಿಕೊಂಡರಾಗಿತ್ತು. ಫಾರ್ಮಲ್ ಬಟ್ಟೆ ಧರಿಸಿದರೆ ಇಸ್ತ್ರಿ ಮಾಡ್ಬೆಕಾಗುತ್ತೆ ಅಂತ ಜೀಂನ್ಸ್ ಟೀ ಶರ್ಟ್ ಧರಿಸಿ ಕಾಲ ಕಳೆಯೊ ಪೈಕಿ ನಾವು. ಅಬ್ಬ!!! ಒಂದು ಜೀನ್ಸ್ ಇದ್ರೆ ಸಾಕು ಎಷ್ಟು ಬಾರಿ ಬೇಕಾದ್ರು ಓಗಿದೆ ಹಾಕ್ಕೊಬೊದು…. ಕೊಳೆಯಾದ್ರೆ ಅದೂ ಒಂಥರಾ ಫ್ಯಾಷನ್ 🙂 .

ಕೊನೆಗೆ ಬೆಂಗಳೂರಿನ ಮಿತ್ರ ವೃಂದದಲ್ಲಿ ನಮ್ಮ ಸಮಸ್ಯೆಯನ್ನ ಹೇಳಿಕೊಂಡಾಗ ನಕ್ಕವರೇ ಹೆಚ್ಚು, ಆಲ್ಲ ಮಾರಾಯರ ಎಲ್ಲಾ ಮಲ್ಟಿನಾಷನಲ್ ಕಂಪನಿಗಳಲ್ಲಿ ಕೆಲಸ ಮಾಡ್ತಿರಾ, ಒಂದು ಟೈ ಗಂಟು ಹಾಕ್ಲಿಕ್ಕೆ ಬರ್ಲಿಲ್ಲಾ ಅಂದ್ರೆ ನೀವು ಓದಿದ್ದೆಲ್ಲ ವೇಸ್ಟು, ಅಂತ ನಮ್ಮ ಡಿಗ್ರಿಗೆಲ್ಲ ಬೆಂಕಿ ಇಟ್ರು 🙂 . ನಮ್ಮ ಕಾರ್ಮೆಂಟ್ ಸ್ಕೂಲಿನಲ್ಲೆ ಇದೆಲ್ಲ ಕಲಿಸಿದ್ದಾರೆ ಗೊತ್ತಾ ಅಂದಾಗ ನೆನಪಾದದ್ದು ನಮ್ಮ ಸರಕಾರಿ ಶಾಲೆ. ಕೆಲಸಕ್ಕೆ ಬಾರದನ್ನೆಲ್ಲ ಮಾಡ್ತಿವಿ ಈ ಗಂಟು ಹಾಕೋದು ಕಣ್ಣುಕಟ್ಟಿನ ವಿದ್ಯೆನಾ ಅಂತ ಒಮ್ಮೆ ನೆಟ್ ನಲ್ಲಿ ಗಾಳ ಹಾಕಿ ಅಂದ ಕಾಲದಲ್ಲಿ ಗೆಳೆಯ ಕಳುಹಿಸಿದ್ದ ಒಂದು ಮೈಲ್ ಹಿಡಿದಾಯಿತು ಅದರಲ್ಲಿ ಸಚಿತ್ರವಾಗಿ ಹೇಗೆ ಗಂಟು ಹಾಕೋದು, ಯಾವ ಯಾವ ತರಹದಲ್ಲಿ ವಿಭಿನ್ನವಾದ ಗಂಟುಗಳನ್ನ ಹಾಕಬಹುದು ಎಂತೆಲ್ಲ ಇತ್ತು. ಕೊನೆಗೆ ನಾಲ್ಕಾರು ಬಾರಿ ವಿಚಿತ್ರ ಗಂಟುಗಳನ್ನ ಹಾಕಿ ಕೊನೆಗೆ ರಹಸ್ಯ ಗಂಟನ್ನು ಬೇದಿಸುವ ಹೊತ್ತಿಗೆ ಅಂದು ರಾತ್ರಿ ೧೨ ಆಗಿತ್ತು.

ಮೊನ್ನೆ ರಾತ್ರಿ ಆಫೀಸಿನಿಂದ ವಾಪಸ್ಸಾದ ಪ್ರೀತಿಶನ ಮುಖದಲ್ಲಿ ಒಂದು ಕಳೆ ಇತ್ತು, ಏನ್ಲಾ ಎಂತ ಸಮಾಚಾರ ಎಂದಾಗ ಇವತ್ತಿಂದ ಟೈಗೆ ಗುಡ್ ಬೈ ಇನ್ನು ಜೂನ್ ವರೆಗೆ ಆರಾಮು, ಇಷ್ಟಗಲ ನಕ್ಕ.

“ನಮ್ಮವರು ಯಾಕೇ ಹೀಗೆ ಪಾಶ್ಚಿಮಾತ್ಯ ರೀತಿ ರಿವಾಜುಗಳನ್ನ ಅನುಸರಿಸುತ್ತಾರೊ ಆ ದೇವರೆ ಬಲ್ಲ, ಅವರ ಹವಾಮಾನಕ್ಕೆ ಕೋಟು ಟೈ ಒಗ್ಗೂತ್ತೆ. ನಮ್ಮ ಬೆಂಗಳೂರಿನ ಎಪ್ರಿಲ್ ಮೇ ತಿಂಗಳ ಆ ಸುಡುವ ಬಿಸಿಲಿನಲ್ಲಿ ಸೂಟ್ ಹಾಕಂಡು ಟೈ ಸುತ್ಕಂಡು ಡೈರಕ್ಟ್ ಮೇಲಕ್ಕೆ ಹೋಗ್ಬೆಕು ಅಷ್ಟೆ”.

ನಮ್ಮ ಹಾಗೆ ನೀವು ಈ ಗಂಟಿನ ರಹಸ್ಯ ತಿಳಿಬೇಕೆ ಇಲ್ಲಿ ಕ್ಲಿಕ್ಕಿಸಿ….

http://fungags.blogspot.com/2008/03/tie-problem-solved.html
http://forums.bollyent.com/tie-problem-solved-t-20860.html

 

05
ಮಾರ್ಚ್
08

ನೆನಪುಗಳೆಂಬ ಮುಗಿಯದ ಸರಕು.

ಅಂದು ರೂಮಿನಲ್ಲಿ ಓದುತ್ತ ಕುಳಿತವನಿಗೆ ಯಾರೋ ಬಾಗಿಲು ಬಡಿದ ಸದ್ದಾಯಿತು, ಎದ್ದು ಬಾಗಿಲು ತೆರೆದಾಗ ಎದುರಿಗಿದ್ದದ್ದು ಗೆಳತಿ ಲತಾ, ಅದು ಒಬ್ಬಳೆ ಬಂದಿದ್ದಳು ಮನಸಿನಲ್ಲಿ ಏನೊ ಕಸಿವಿಸಿ ಬ್ಯಾಚುಲರ್ಸ್ ರೂಮು ಬೇರೆ ನೋಡಿದವರು ಹೇಗೆ ಅರ್ಥೈಸಿಕೊಂಡಾರು ಅನ್ನೊ ಸಣ್ಣ ತಳಮಳ ಮನದ ಮೂಲೆಯಲ್ಲಿ. ಅವಳು ಯಾವತ್ತು ಹಾಗೆ ಒಬ್ಬಳೆ ಬಂದವಳಲ್ಲ, ಅಷ್ಟಾಗಿ ನಾನು ಕಾಲೇಜಿಗೆ ಸೇರಿ ಒಂದೂವರೆ ವರ್ಷ ಕಳೆದಿದ್ದರು ನನ್ನ ಅವಳ ಸೇಹ, ಮಾತು ಕತೆ ಇತ್ತಿಚಿನ ಮೂರ್ನಾಲ್ಕು ತಿಂಗಳಿಂದ ಅಷ್ಟೆ. ಬಾಗಿಲಲ್ಲಿ ನಿಂತಿದ್ದವಳನ್ನ ಅರೆ ಮನಸ್ಸಿನಿಂದ ಕರೆದು ಚಾಪೆಯ ಮೇಲೆ ಕೂರಿಸಿದೆ, ಅವಳು ಆಗ ತಾನೆ ಕಾಲೇಜಿನ ಕಡೆಯಿಂದ ಬಂದಿದ್ದಳು ಎನ್ನುತ್ತಿತ್ತು ಬೆನ್ನಿಗೆ ಜಾಲಿ ಬಿಟ್ಟಿದ್ದ ಬ್ಯಾಗು. ಅವಳು ಕುಳಿತ ಭಂಗಿ, ಮುಖದಲ್ಲಿ ಎದ್ದು ಕಾಣುತ್ತಿದ್ದ ಚಡಪಡಿಗೆ ಯಾವುದೊ ಗಂಭೀರ ವಿಚಾರ ನನ್ನಲ್ಲಿ ಪ್ರಸ್ತಾಪಿಸುವ ಹಾಗಿತ್ತು. ಒಮ್ಮೆಲೆ ವಿಚಾರಕ್ಕೆ ಬಂದ ಲತಾ ಈಗ ತಾನೆ ಹಾಸ್ಟೆಲ್ ನಿಂದ ಬಂದೆ ಪ್ರತಿಭ ರೂಮಿಗೆ ಹೊಗಿದ್ದೆ, ತುಂಬಾ ಅಪ್ಸೆಟ್ ಆಗಿದ್ದಾಳೆ, ಯಾರೊಂದಿಗೂ ಮಾತಾಡುತ್ತಿಲ್ಲ, ನಾನು ಸೂಸೈಡ್ ಮಾಡ್ಕೊತ್ತಿನಿ ಅಂತಿದ್ಲು. ನೀನು ಯಾಕೆ ಅವಳನ್ನ ಮಾತಾಡಿಸ್ತಿಲ್ಲ? ಯಾಕೆ ಮುನಿಸಿಕೊಂಡಿರೊದು? ಎನು ತಪ್ಪು ಮಾಡಿದ್ದಾಳೆ? ಒಂದೆ ಸಮನೆ ಹರಿಯುತ್ತಿದ್ದ ಪ್ರಶ್ನೆಗಳಿಗೆ ಕೊಂಚ ಒರಟಾಗೆ “ಓ ನಿನ್ನ ಜೊತೆ ಹೇಳಿ ಕಳಿಸಿದ್ದಾಳ ಸಂಧಾನ ಮಾಡೊಕ್ಕೆ, ಸಾಯೊರು ಯಾರು ನಾವು ಸಾಯ್ತಿವಿ ಸಾಯ್ತಿವಿ ಅಂತ ಸಿಕ್ಕಸಿಕ್ಕವರಿಗೆಲ್ಲ ಹೇಳಿಕೊಳ್ಳೊಲ್ಲ ಬಿಡು”.ನಾನು ಇರೊದೆ ಹೀಗೆ ಬೇಕಾದೋರು ಇರಬಹುದು, ಇಲ್ಲ ಅಂದ್ರೆ ಹೋಗ ಬಹುದು ನೀನು ಸುಮ್ಮನೆ ಇದ್ದು ಬಿಡು ಅಂದೆ. ನನ್ನಿಂದ ಈ ಉತ್ತರವನ್ನ ಲತಾ ನಿರೀಕ್ಷಿಸಿದ್ದಳೊ ಇಲ್ಲವೊ ನನಗಂತು ಗೊತ್ತಿಲ್ಲ, ಅವತ್ತು ಮರು ಮಾತಿಲ್ಲದೆ ನಡೆದು ಹೊಗಿದ್ದಳು ರೂಮಿನಿಂದ. ನನಗೆ ಕೊಪ ಬರೊದು ಅಪರೂಪಕ್ಕೆ ಬಂದರೆ ಹೀಗೆ ಆಗೊಗಿರ್ತಿನಿ, ನನ್ನ ಈ ಮಾತುಗಳನ್ನು ಸಹಿಸಿಕೊಂಡು ಕೂಡ ಬಂದಿದ್ದಳು ಪ್ರತಿಭ. ಒಂದು ಮಾತು ಕೂಡ ಆಡಲಿಲ್ಲ ನನ್ನ ಮೇಲೆ ಜಗಳಕ್ಕಾದರು ಬರ್ತಾಳೆನೊ ಅಂತಿದ್ದೆ ಅದನ್ನು ಹುಸಿಮಾಡಿದ್ಲು, ಮೂಗು ಜೀವದ ತರ ಇದ್ದು ಬಿಟ್ಟಳು. ನಂತರ ಎರಡು-ಮೂರು ದಿನಗಳಲ್ಲಿ ಕಾಪ್ರಮೈಸ್ ಮಾಡಿಕೊಂಡವಿ ಅಂತ ಇಟ್ಕೊಳ್ಳಿ, ಮೊನ್ನೆ ಪ್ರತಿಭಳ ಮದುವೆ ಮನೆಯಲ್ಲಿ ಲತಾ ಸಿಕ್ಕಾಗ ಈ ಸಂಧರ್ಭ ನೆನಪಿಗೆಬಂದು ಮುಸು ಮುಸು ನಕ್ಕೆ………. 🙂

 

ಕಳೆದ ವಾರ ಒಂದಷ್ಟು ಸಂಭ್ರಮ ಒಂದಷ್ಟು ಬೇಸರ ಒಟ್ಟೊಟ್ಟಿಗೆ ಅನುಭವಿಸಿಯಾಗಿತ್ತು, ನಾಲ್ಕಾರು ವರುಷಗಳಿಂದ ಜೊತೆಯಲ್ಲೆ ಬದುಕುತ್ತಾ, ಒಂದಷ್ಟು ಸಂತೋಷವನ್ನ, ದುಗುಡವನ್ನ ಹಂಚಿಕೊಳ್ಳುತ್ತಾ, ನನ್ನ ಕೊಪ ಮುನಿಸು ಎಲ್ಲವನ್ನ ಸಹಿಸಿಕೊಂಡ ಗೆಳತಿ ದಿಡಿರನೆ ಬದುಕಿನ ಹೊಸ ಆಯಾಮವನ್ನ ಪ್ರವೇಶಿಸಿದಳು. ಅದು ಸಹಜವಾದದ್ದೆ “ಮದುವೆ” ಅನ್ನೊದು ಹೊಸ ಬದುಕಿನ ಮುನ್ನುಡಿ, ಇನ್ನೊಂದು ಪ್ರೀತಿಸುವ ಜೀವವನ್ನ ಬದುಕಿನುದ್ದಕ್ಕೂ ಇರಿಸಿಕ್ಕೊಳ್ಳುವ ಸುಂದರ ಭಾಂದವ್ಯ. ಅವಳ ಕನಸುಗಳಿಗೆ ಅವನು, ಅವನ ಕನಸುಗಳಿಗೆ ಅವಳು ರೆಕ್ಕೆ ಕಟ್ಟಿ ಬಹು ದೂರ ಸಾಗಲಿ ಬದುಕೆಂಬ ಬಾಂದಳದಿ…… ಮದುವೆಯೆಂಬ ಮಹಾಯಜ್ಞ ನಿರ್ವಿಘ್ನವಾಗಿ ಸಾಗ್ತು ಅನ್ನೊದು ಮನಸಿಗೆ ಮತ್ತಷ್ಟು ಖುಷಿ ತಂದಿದೆ.

ಗೆಳತಿಯ ಬದುಕು ತಣ್ಣಗಿರಲಿ …….. ಶುಭ ಹಾರೈಕೆಗಳೊಂದಿಗೆ.
-ಅಮರ

18
ಫೆಬ್ರ
08

ನನ್ನ ಕಣ್ಣಾಲೆಗಳಲಿ ಅವಳು.

ಈ ವಾರ ಅಮ್ಮ ನನ್ನಲ್ಲಿಗೆ ಬರುವುದಾಗಿ ಮೊದಲೆ ನಿಶ್ಚಯವಾಗಿದ್ದರಿಂದ ನಾನು ಮೈಸೂರಿನ ದಾರಿ ಹಿಡಿಯುವುದು ತಪ್ಪಿತು. ಅಮ್ಮ, ತಂಗಿ ಇಬ್ಬರು ಬರಬೇಕಾಗಿದ್ದರೂ ಅವಳಿಗೆ ರಜೆ ಸಿಗದ ಕಾರಣ ಅಮ್ಮ ಒಬ್ಬರೆ ಬರಬೇಕಾಗಿ ಬಂತು. ನಾನು ಬೆಂಗಳೂರಿಗೆ ಬಂದು ನೆಲಸಿ ಎರಡುವರೆ ವರ್ಷಗಳಾದರು ಅಮ್ಮ ಮನೆಗೆ ಬಂದಿರಲಿಲ್ಲ. ಅಪ್ಪ ಒಮ್ಮೆ ಬಂದು ಹೋಗಿದ್ದರು, ಆಗ ನಾವು ಇನ್ನೊಂದು ಪುಟ್ಟ ಮನೆಯಲ್ಲಿದ್ದೆವು. ಹಲವು ದಿನಗಳ ನಂತರ ತನ್ನ ಪ್ರಪಂಚವನ್ನು ಬಿಟ್ಟು ನನ್ನಲಿಗೆ ಅಮ್ಮ ಬರುತ್ತಿದ್ದಾಳೆಂಬ ಖುಷಿ ಒಂದು ಕಡೆಯಾದರೆ ಅವಳು ಸಲಿಸಾಗಿ ಮನೆ ತಲುಪಿದರೆ ಸಾಕು ಅಂದುಕೊಳ್ಳುತ್ತಿದ್ದೆ. ಮೊದಲಾಗಿ ಅಮ್ಮ ದೂರದ ಪ್ರಯಾಣ ಮಾಡುವುದೆ ಅಪರೂಪ ಅದರಲ್ಲೂ ನಾವ್ಯಾರಾದರೂ ಜೊತೆಯಲ್ಲೆ ಇರುತ್ತೆವೆ ಅಥವ ಯಾರಾದರು ಸಂಭದಿಕರೊ, ಪರಿಚಿತರೊ ಜೊತೆಗಿರುತ್ತಿದ್ದರು. ಬೆಳಿಗ್ಗೆ ಬೇಗ ಬಿಟ್ಟು ತಿಂಡಿಯ ಹೊತ್ತಿಗೆ ನಿನ್ನ ಮನೆಗೆ ಬರ್ತಿನಿ ಕಣೋ ಅಂದಿದ್ದಳು ರಾತ್ರಿ ಮಾತಾಡಿದ್ದಾಗ. ಬೆಳಿಗ್ಗೆ ೮ ಗಂಟೆಯಾದರು ಹೊರಟ ಸುಳಿವು ಸಿಗಲಿಲ್ಲ, ನಾನು ಕರೆಮಾಡಲಾಗಿ ಇನ್ನು ಹೊರಟಿಲ್ಲ ಮನೆಯ ಕೆಲಸವೆಲ್ಲಾ ಈಗ ತಾನೆ ಮುಗಿದಿದೆ, ಇನ್ನೆನು ಹೊರಡುವುದಾಗಿ ತಂಗಿಯಿಂದ ಉತ್ತರ ಬಂತು. ಅವರು ಬಸ್ ನಿಲ್ದಾಣಕ್ಕೆ ಬಂದಾಗ ೯.೩೦ ಆಗಿತ್ತು, ತಂಗಿ ಕರೆಮಾಡಿ ಯಾವ ಬಸ್ಸು ಹತ್ತಿಸುವುದು ಎಂತೆಲ್ಲಾ ನನ್ನ ವಿಚಾರಿಸಿ ಮೈಸೂರು ಮಲ್ಲಿಗೆ ತಡೆ ರಹಿತಕ್ಕೆ ಹತ್ತಿಸು, ಅದು ಮೆಜಸ್ಟಿಕ್ ನಿಲ್ದಾಣಕ್ಕೆ ಬರೊಲ್ಲ ನಾನು ಸ್ಯಾಟಲೈಟ್ ನಿಲ್ದಾಣದಲ್ಲಿ ಕಾಯುವುದಾಗಿ ತಿಳಿಸಿದೆ. ಅಮ್ಮ ಬರಲು ಮೂರು ತಾಸು ಬೇಕು, ೧೨ ಕ್ಕೆ ಅಲ್ಲಿ ತಲುಪಿದರೆ ಸಾಕು ಎಂದುಕೊಂಡು ಬೆಳಗಿನ ತಿಂಡಿ ಮಾಡುಲು ಸೋಮಾರಿಯಾದೆ, ಕೊನೆಗೆ ನನ್ನ ಗೆಳೆಯ ಮ್ಯಾಗಿ, ಒಂದಷ್ಟು ಚಹ ಮಾಡಿ ಮುಂದೆ ಇಟ್ಟ.

ದಿನಪತ್ರಿಕೆಗಳ ಪುಟಗಳಲ್ಲಿ ಮುಳುಗು ಹಾಕುವುದರೊಳಗೆ ಸಮಯ ೧೦.೩೦ ಆಗಿತ್ತು, ತಯಾರಾಗಿ ಹೊರಡುವ ಅಂದುಕೊಂಡಷ್ಟರಲ್ಲಿ ಸ್ಪೂರ್ತಿ ಕರೆಮಾಡಿ ಅಣ್ಣ ನಾನು ಕೊರಮಂಗಲದಲ್ಲಿದ್ದಿನಿ ಕಣೋ, ದೊಮ್ಮಲೂರಿಗೆ ಬಾರೋ, ನನ್ಗೆ ನಿಮ್ಮ ಮನೆಯ ಹತ್ತಿರ ಕೆಲ್ಸ ಇದೆ ಎಂದಾಗ ಅವಳಿಗೆ ಅಮ್ಮನ ವಿಷಯ ಹೇಳಿ ಬೇಗ ಬಾ ಅಂದೆ. ಸ್ಪಲ್ಪ ಹೊತ್ತಿನಲ್ಲೆ ಮತ್ತೆ ಕರೆಮಾಡಿ ಈ ಬಸ್ಸು ನೇರವಾಗಿ ಬರ್ತಿಲ್ಲ ಕಣೋ ಎಮ್ ಜಿ ರೋಡ್ ಕಡೆಯಿಂದ ಬರುತಂತೆ ಎಂದು ಗೊಣಗಿದಳು, ನೀನು ನನ್ಗೆ ಸಿಗೂ ಆಯ್ತಾ, ನಾನು ಪರ್ಸ್ ಮರ್ತು ಬಂದಿದ್ದಿನಿ, ಅದಕ್ಕೆ ನಿನ್ಗೆ ಫೋನ್ ಮಾಡಿದ್ದಿ ಅಂದಳು. ಆಯತು ಬಾ ಬೇಗ, ನಿನ್ನ ಬಿಡಲಾಗದಿದ್ದರೆ ಹಣ ಕೊಟ್ಟು ಹೊಗ್ತಿನಿ ಅಂದೆ, ಕೊನೆಗೆ ತಯಾರಾಗಿ ಮನೆಯಿಂದ ಕದಲುವ ಹೊತ್ತಿಗೆ ೧೧.೩೦ ಆಗೆ ಹೊಗಿತ್ತು. ಈ ಮದ್ಯೆ ಸ್ಪೂರ್ತಿಗೆ ಕರೆಮಾಡಿ ಎಲ್ಲಿದಿಯಾ ಎಂದಾಗ ಟಿರ್ನಟ್ರಿ ವೃತ್ತ ಅಂದಳು, ಹಾಗಾದರೆ ಅಲ್ಲೆ ಇಳ್ಕೊ ಅಲ್ಲೆ ಸಿಕ್ಕುವುದಾಗಿ ಹೇಳಿ ಹೊರಟೆ, ನಾನು ಸಿ ಎಮ್ ಎಚ್ ರಸ್ತೆಯ ಟ್ರಾಫಿಕ್ ಬೆದಿಸಿ ಹಲಸೂರು ತಲುಪುದುದರೊಳಗೆ ಅವಳು ಅಲ್ಲಿಗೆ ಬಂದಿದ್ದಳು, ಅವಳ ಕೈಯಲ್ಲಿ ಹಣವಿಟ್ಟು ನಾನು ಬಸ್ ಸ್ಟಾಂಡಿನ ಕಡೆ ದಾವಿಸಿದೆ. ಇನ್ನೆನ್ನು ರಿಚ್ಮಂಡ್ ವೃತ್ತ ತಲುಪಿದೆ ಅನ್ನುವಷ್ಟರಲ್ಲಿ ಪ್ಯಾಂಟ್ ಕಿಸೆಯಲ್ಲಿದ್ದ ಮೊಬೈಲ್ ಗುರುಗುಟ್ಟುತ್ತಿತ್ತು, ಆ ಕೆಟ್ಟ ಟ್ರಾಫಿಕ್ ನಲ್ಲಿ ಗಾಡಿ ಪಕ್ಕಕ್ಕೆ ನಿಲ್ಲಿಸಿ ನೋಡಿದಾಗ ಬೆಂಗಳೂರಿನ ನಂ,
ಆ ಕಡೆಯಿಂದ ಅಮ್ಮ ನಾನು ಬಂದಿದ್ದಿನಿ ಕಣೋ, ಇವಾಗ ಇಳಕೊಂಡೆ ನಿನೆಲ್ಲಿದಿಯಾ?
ನಾನು ಬರ್ತಿದ್ದೆನೆ ಎಲ್ಲಿ ಇಳಿದಿದ್ದಿಯಾ?
ನಾಯಂಡಲ್ಲಿ ಅಂತ ಯಾರೊ ಹೇಳಿದ್ರು.
ಅಲ್ಲಿಗೆ ಅರ್ಧ ಜೀವ ಹೊದಂತಾಯಿತು. ಮತ್ತೆ ಕೇಳಿದೆ
ಅಮ್ಮ ಅ ಬಸ್ ಸ್ಟಾಂಡ್ ದೊಡ್ಡದಾಗಿದೆಯಾ?
ಪರವಾಗಿಲ್ಲ ಸುಮಾರಾಗಿದೆ, ಇಲ್ಲೊಂದು ಹೋಟೆಲ್ ಕೂಡ ಇದೆ.
ಕಾಯನ್ ಬೂತಿನ ಕುಯ್ ಕುಯ್ ಸದ್ದು ಶುರುವಾದಂತೆ ಎದೆಯ ಕಂಪನಗಳಲಿ ಏರಿಳಿತ ಗೊಚರಿಸುತಿತ್ತು.
ಅಲ್ಲೆ ಇರು ಎಲ್ಲೂ ಹೋಗಬೇಡ ನಾನು ಬರ್ತೆನೆ ಸ್ವಲ್ಪ ಹೊತ್ತಲ್ಲೆ.

ರಿಚ್ಮಂಡ್ ವೃತ್ತ ದಾಟಿದವನಿಗೆ ಮುಂದೆ ಸಿಕ್ಕ ಸಿಗ್ನಲ್ ಗಳು ಮುಂದೆ ಚಲಿಸಿದಂತೆ ಹಸಿರಾಗುತ್ತಿದ್ದವು, ಒಂದೆ ಸಮನೆ ಜಾಗ ಸಿಕ್ಕಲ್ಲೆಲ್ಲ ಮುನ್ನುಗ್ಗುತ್ತಾ ಮಾರುಕಟ್ಟೆಯ ಮೇಲು ಸೇತುವೆ ತುಸು ಬೇಗನೆಯೆ ದಾಟಿಕೊಂಡೆ. ಮನದಲ್ಲಿ ಆವರಿಸಿಕೊಳ್ಳುತ್ತಿದ್ದ ಭಯ ಆತಂಕ ಮುಂದೆ ಮುಂದೆ ಸಾಗಿದಂತೆ ಹೆಚ್ಚುತ್ತಲೆ ಇತ್ತು. ಸ್ಯಾಟಲೈಟ್ ಬಸ್ ನಿಲ್ದಾಣದಲ್ಲೆ ಇಳಿದಿದ್ದಾಳೆ ಅವಳಿಗೆ ಹೇಳಲು ಗೊತ್ತಾಗುತ್ತಿಲ್ಲ ಎಂದು ನಾನೆ ಹೇಳಿಕೊಂಡೆನಾದರು, ಇಲ್ಲ ಮುಂಚಿತವಾಗೆ ಇಳಿದಿರಬಹುದು ಅನ್ನೊ ಆತಂಕ ಹೆಮ್ಮರವಾಗಿ ಬೆಳೆಯುತ್ತಲೆ ಇತ್ತು. ಕೊನೆಗೂ ಸ್ಯಾಟಲೈಟ್ ಬಸ್ ನಿಲ್ದಾಣ ತಲುಪಿ, ಮೈಸೂರಿನಿಂದ ಬಂದು ನಿಲ್ಲುವ ನಿಲ್ದಾಣದ ಭಾಗದಲ್ಲಿ ಅಮ್ಮನ್ನ ಹುಡುಕಲು ಮೊದಲುಗೊಂಡೆ. ಆ ಅಪರಿಚಿತ ಮುಖಗಳಲಿ ಪರಿಚಿತರನ್ನ ಹುಡುಕುತ್ತಾ ಅಮ್ಮ ಇವತ್ತು ಯಾವ ಬಣ್ಣದ ಸೀರೆ ಉಟ್ಟಿದ್ದಾಳೆ ಎಂದು ಗೊತ್ತಿದ್ದರೆ ಹುಡುಕಲು ಅನುವಾಗುತ್ತಿತ್ತು ಅಂದುಕೊಂಡೆನಾದರು, ತಂಗಿಗೆ ಕರೆಮಾಡಿ ಕೇಳಿದರೆ ಅವಳು ಗಾಬರಿಯಾಗುತ್ತಾಳೆಂದು ಅನಿಸಿ ಸುಮ್ಮನಾದೆ. ವಿಶಾಲವಾದ ನಿಲ್ದಾಣದಲ್ಲಿ ಅಲ್ಲಲಿ ಕೂತು ತುಕಡಿಸುತ್ತಿದ ಕೆಲವೆ ಮಂದಿ ಇದ್ದರು. ನಿಲ್ದಾಣದ ಹಿಂದೆ ಮುಂದೆ ಮೂರು ನಾಲ್ಕು ಬಾರಿ ಪ್ರದಕ್ಷಿಣೆ ಹಾಕಿದರು ಅಮ್ಮನ ಸುಳಿವು ಸಿಗಲಿಲ್ಲ. ಕಾಯನ್ ಬೂತ್ ಗಳ ಪಕ್ಕದಲಿ ಒರಗಿ ಎತ್ತರಿಸಿದ ದನಿಯಲ್ಲಿ ಮಾತಾಡುತ್ತಿದ್ದವರಿಂದ ಹಿಡಿದು, ತಮ್ಮ ಜೊತೆ ತಂದ ವಸ್ತುಗಳ ಚಕ್ರವ್ಯೂಹದಲ್ಲಿ ಸೇರಿ ತೂಕಡಿಸುತ್ತಿದ್ದವರಲ್ಲಿ, ಕದಂಬ ಹೋಟೆಲ್ ನಿಂದ ಸಂತೃಪ್ತರಾಗಿ ಹೊರ ಬರುತ್ತಿದವರಲ್ಲಿ ಮತ್ತೆ ಪಾಯಿಖಾನೆಯಿಂದ ಮೂಗಿಗೆ ಕರವಸ್ತ್ರ ತುರುಕಿ ಬರುತ್ತಿದ್ದರಲ್ಲಿ ಅಮ್ಮನನ್ನ ಹುಡುಕುತ್ತಿದ್ದೆ.

ಕಿಸೆಯಲ್ಲಿ ಗುರುಗುಟ್ಟುತ್ತಿದ್ದ ಮೊಬೈಲ್ ನೋಡಿ ಅಮ್ಮನ ಕರೆಯೆಂದು ತಿಳಿಯಿತು, ನಾನು ಬಂದೆ ನೀನು ಎಲ್ಲಿದ್ದಿಯಾ? ನೀನು ಇಳಿದಿರೋದು ಎಲ್ಲಿ ಅಂತ ಸರಿಯಾಗಿ ವಿಚಾರಿಸಿದ್ದಿಯಾ ಅಂದೆ, ಹೂ ಕಣೊ ನಾಯಂಡಳ್ಳಿ ಅಂತೆ , ಇಲ್ಲಿ ಮೈಸೂರಿಂದ ಬರೊ ಬಸ್ಸು ಬರ್ತಿವೆ, ಮೈಸೂರಿನ ಕಡೆ ಹೊರಡೊ ಬಸ್ಸು ಬರ್ತಿವೆ, ಇಲ್ಲೆ ಬಸ್ ಸ್ಟಾಂಡ್ ನಲ್ಲೆ ಇದ್ದಿನಿ ಅಂದಳು, ಬರ್ತಿನಿ ಇರೂ ಅಲ್ಲೆ ಬೇಗ ಅಂದು, ಸೀದಾ ಟಿ ಸಿ ಬಳಿ ವಿಚಾರಿಸಿದೆ ನಾಯಂಡಳ್ಳಿ ಅಂದರೆ ಯಾವ ಸ್ಟಾಪು? ಎಷ್ಟು ದೂರ ಹೊಗಬೇಕು? ಅಂತ. ಎರಡು ಕಿ ಮೀ ಆಗುತ್ತೆ ಹಿಂದಿನ ಸ್ಟಾಪು ಅಂದ. ಗಾಡಿ ತೆಗೆದು ಹೊರಡುತ್ತಿದ್ದಾಗ ಮತ್ತೊಂದು ಗುರು ಗುರು ಸದ್ದಾಯಿತು, ಮನೆಯಿಂದ ಅಪ್ಪ ಕರೆಮಾಡಿದ್ದರು. ಅಮ್ಮ ಬಂದಿದ್ದಾರೆ ನಾನು ಹೊಗ್ತಿದ್ದೆನೆ ಎಂದಷ್ಟೆ ಹೇಳಿ ಮತ್ತೆ ಮಾಡುವುದಾಗಿ ಹೇಳಿ ಹೊರಟೆ.

ಮಧ್ಯಾನದ ಬಿಸಿಲಿನ ಝಳಪು, ಈ ಸನ್ನಿವೇಷ ಎರಡು ಒಂದುಗೂಡಿ ಹೆಲ್ಮೆಟ್ ಒಳಗಿನ ತಲೆ ಬಿಸಿ ಬಿಸಿ ಬೊಂಡ ದಂತಾಗಿ, ಅಮ್ಮನನ್ನು ಕಾಣುವ ತನಕ ಸಮಾಧಾನ ಇರಲಿಲ್ಲ. ರಿಂಗ್ ರೋಡ್ ದಾಟಿ ಅಂಗಡಿಗಳ ಮುಂದೆ ತೂಗು ಬಿಟ್ಟಿದ್ದ ಬೊರ್ಡುಗಳನ್ನು ಗಮನಿಸಿ ನಾಯಂಡಳ್ಳಿ ಎಂದು ಖಚಿತಪಡಿಸಿಕೊಂಡೆ. ರಸ್ತೆಯನ್ನ ದಾಟಿ ಬಸ್ ನಿಲ್ದಾಣವನ್ನು ಸಮೀಪಿಸಿತ್ತಿದ್ದಂತೆ ಅಮ್ಮನ ದರ್ಶನವಾಗಿ ಉರಿಯುವ ಬೆಂಕಿಗೆ ತಂಪನೆರೆದಷ್ಟು ನೆಮ್ಮದಿಯಾಯಿತು. ಆ ಚಿಕ್ಕ ನಿಲ್ದಾಣದಲ್ಲಿ ನಿಂತ ಅಮ್ಮ ಹೋಗಿ ಬರುವ ವಾಹನಗಳ ಕಡೆ ಕಣ್ಣಾಡಿಸುತ್ತಾ ನನ್ನ ಹುಡುಕುತ್ತಿದ್ದಳು. ಅಮ್ಮ ನೀನು ಎರಡು ಕಿ ಮೀ ಮುಂಚೆನೆ ಇಳಿದಿದ್ದಿಯಾ ಗೊತ್ತಾ ನಿನಗೆ? ಆಗ ಅವಳಿಗೆ ಅರಿವಾದದ್ದು ನಾನು ಮೊದಲೆ ಇಳಿದಿದ್ದೇನೆ ಅಂತ. ಹೌದೆನೋ ನನಗೆ ಯಾರೊ ಹೇಳಿದ್ರು ಇಲ್ಲೆ ಇಳಿಲಿಕ್ಕೆ ಇಳಕೊಂಡೆ ಮುಗ್ದವಾಗಿ ಉತ್ತರಿಸಿದಳು. ಹಿಂದಿನ ದಿನ ಅಮ್ಮನೊಂದಿಗೆ ಮಾತನಾಡಿ ಹೊರಡುವ ಸಮಯವೆಲ್ಲ ನಿರ್ಧರಿಸಿದ್ದಾಗ್ಯೂ, ಮತ್ತೆ ತಂಗಿಗೆ ಕರೆಮಾಡಿ ಚಿಟಿಯಲ್ಲಿ ನನ್ನ ಮತ್ತು ನಿನ್ನ ಪೋನ್ ನಂಬರ್ ಬರೆದು ಅಮ್ಮನ ಕೈಲಿ ಕೊಟ್ಟಿರು, ಅಮ್ಮನಿಗೆ ಫೋನ್ ಮಾಡಲು ತಿಳಿಯದಿದ್ದರು ನಂಬರ್ ಇದ್ದರೆ ಯಾರ ಬಳಿಯಾದರು ಫೋನ್ ಮಾಡಿಸುತ್ತಾಳೆ ಎಂದಿದ್ದೆ. ನೆನ್ನೆ ಮುಂಜಾಗ್ರತೆ ವಹಿಸಿದ್ದು ಉಪಯೋಗಕ್ಕೆ ಬಂದದ್ದನ್ನು ನೆನೆದು ಸಮಾಧಾನ ವಾಯಿತು. ಅಮ್ಮ ಬಂದ ವಿಚಾರ ತಂಗಿಗೆ ತಿಳಿಸಿ ಅಲ್ಲಿಂದ ಹೋರಟಾಗ ೧ ಗಂಟೆಯಾಗಿರಬಹುದು, ಬೆಂಗಳೂರಿನ ಕಡು ಮಧ್ಯಾನದ ದರ್ಶನ ಭಾಗ್ಯ ಅಮ್ಮನಿಗೆ ನನ್ನ ಜೊತೆ ಸಿಕ್ಕಿತು, ಕ್ಕಿಕ್ಕಿರಿದ ರಸ್ತೆಗಳಲ್ಲಿ ಹೆಣಗಾಡುತಿದ್ದ ನನ್ನತ್ತ ನೋಡಿ ಬಸ್ ನಲ್ಲೆ ಬರೊದಲ್ಲವಾ ನೀನು ಎಂದಳು, ಬಸ್ ನಲ್ಲಿ ಬಂದಿದ್ದರೆ ಸಂಜೆ ಹೊತ್ತಿಗೆ ನಿನ್ನ ಹುಡುಕುತ್ತಿದ್ದೆ ಅಷ್ಟೆ ಅಂತ ನಕ್ಕೆ. ನೀನು ದಿನ ಇದೆ ರಸ್ತೆಯಲ್ಲೆ ಓಡಾಡೊದಾ, ಅವಳಿಗೆ ಯೋಚನೆ ಶುರುವಾಗಿತ್ತು, ನನ್ನ ಮಗ ದಿನ ಇಲ್ಲಿ ಹ್ಯಾಗೆ ಓಡಾಡುತ್ತಾನೆ? ಇಲ್ಲಮ್ಮ ನಾನು ಯಾವಗಲು ಬರೊಲ್ಲ ನಾನು ಓಡಾಡೊ ರಸ್ತೆಲಿ ಇಷ್ಟೊಂದು ಟ್ರಾಫಿಕ್ ಇರಲ್ಲ ಅಂದೆ ಕೊಂಚ ಸಮಾಧಾನವಾದ ಹಾಗೆ ಕಂಡಳು.

ಇನ್ನೂ ಎಷ್ಟು ದೂರ ಹೋಗ ಬೇಕು ಕೇಳುತ್ತಿರುವಾಗಲೆ ಎಡಭಾಗಕ್ಕೆ ಹರಡಿಕೊಂಡಿದ್ದ ವಿಶಾಲ ಜಲವನ್ನ ಕಂಡು , ಇದು ಹಲಸೂರು ಕೆರೆ ಅಲ್ವ ? ಅಂದಾಗ, ಅಬ್ಬ! ಪರವಾಗಿಲ್ಲ ಇದೊಂದು ಜಾಗ ಮುಂಚೆ ಹೇಗಿತ್ತೊ ಹಾಗೆ ಬಿಟ್ಟಿದಾರೆ ಈ ಜನ, ಅಮ್ಮ ಗುರಿತಿಸಿಯೆ ಬಿಟ್ಟಳು ಅಂದುಕೊಂಡು, ಹು ಅಂದೆ.
ಅಮ್ಮ ನೀನು ಯಾರ ಮನೆಗೆ ಹೊಗ್ತಿಯಾ ನಿನ್ನ ಅತ್ತೆ ಮನೆಗೊ? ಅಮ್ಮನ ಮನೆಗೊ? ಎಂದೆ …….
ಯಾಕೋ ನಿನ್ನ ಮನೆಗೆ ಕರಕೊಂಡು ಹೊಗೋದಿಲ್ಲ ಅಂತ ಕಾಣುತ್ತೆ? ನನ್ನನ್ನ ಇವಾಗ್ಲೆ ಸಾಗಾಕುವ ಹಾಗೆ ಇದ್ದಿಯಾ?
ಅಂತ ಬಾಂಬೆ ಹಾಕಿದ್ಲು…….
ಹಂಗಲ್ಲಮ್ಮ ಎಲ್ಲಿಗ್ಗೆ ಮೊದಲು ಹೊಗ್ತಿಯಾ ಅಂತ ರೆಗಿಸಿದ್ದು ಅಷ್ಟೆ ಅಂದೆ.
ನಿನ್ನ ಮನೆ ಮೊದಲು ಮಿಕ್ಕವರ ಕಥೆ ಬಿಡು… ಅಮ್ಮ ಇಷ್ಟಗಲ ನಕ್ಕಳು, ಅವಳ ಕಣ್ಣಾಲೆಗಳಲ್ಲಿ ಮಗನ ಮನೆಗೆ ಬರುವ ಸಂತಸ ತುಂಬಿ ಬಂದಿತ್ತು…..
ನನ್ನ ಕಣ್ಣಾಲೆಗಳಲಿ ಅವಳು….

26
ಜೂನ್
07

‘ಇಸ್ಟೀಲ್-ಸಿಲ್ವಾರ್ ಪಾತ್ರೇ’

     ಆಫೀಸಿನ ಕಿಟಕಿಯಾಚೆ ಕಾಣ್ಣಾಯಿಸಿದಾಗ ದೂರದಲ್ಲೆಲ್ಲೊ ಪ್ಲಾಸ್ಟಿಕ್,ಸ್ಟಿಲ್ ಪಾತ್ರೆಗಳನ್ನು ಮಾರುತ್ತಿರುವವನು ತನ್ನ ಸೈಕಲ್ ಹಿಡಿದು ಬೀದಿ ಬೀದಿ ತಿರುಗುತ್ತಿದ್ದ.’ಇಸ್ಟೀಲ್ …. ಪಿಲಾಸ್ಟಿಕ್ ಪಾತ್ರೆ’ ಅಂತ ಅಸ್ಪಷ್ಟವಾಗಿ ಕೇಳುತ್ತಿತ್ತು.ತಟ್ಟನೆ ಮನಸ್ಸು ಹರಿದದ್ದು ನಮ್ಮನೆಗೆ ಬರುತಿದ್ದ ಸಾಬಯ್ಯನತ್ತ. ಯಾಕೋ ಗೊತ್ತಿಲ್ಲ ಈ ಪಾತ್ರೆ ಸಾಬಯ್ಯ ಅವಾಗವಾಗ ನೆನಾಪಾಗ್ತಾನೆ. ಮನೆಗೆ ಬಂದಾಗ ಒಂದು ನಾಲ್ಕು ಚಂದ ಮಾತಾಡ್ತಿದ್ದ, ತನ್ನ ಕಷ್ಟ ಸುಖ ಹೆಳ್ಕತಿದ್ದ. ಮನೆಲಿದ್ದ ಪೇಪರ್ರು… ಹಳೇ ಪ್ಲಾಸ್ಟಿಕ್ಕು,ಕಬ್ಬಿಣ ಎಲ್ಲ ಹೆಗ್ಗಿಲ್ಲದೆ ತಗಂಡು ಪಾತ್ರೆಗಳನ್ನ ಕೊಡುತ್ತಿದ್ದ. ನನಗೂ ಅವನನ್ನ ಕಂಡ್ರೆ ಬಲು ಪ್ರೀತಿ, ಕೊಳಕು ಕುರ್ತಾ- ಪೈಜಾಮು, ಕಾಲರ್ ಕರಿಬಣ್ಣದ್ದೆನೊ ಅನ್ನಿಸುವ ಮಟ್ಟಕ್ಕೆ ಇರುತ್ತಿತ್ತು. ಬಡಕಲು ದೇಹವಾದರು ಗಟ್ಟಿಮುಟ್ಟಾಗಿದ್ದ, ತಲೆ ಮೇಲೆ ಬಿಳಿ ಟೋಪಿ,ಅಲ್ಲೊಂದು ಇಲ್ಲೊಂದು ಕುದಲಿದ್ದ ಕುರುಚಲು ಗಡ್ಡ…. ಅಷ್ಟಾದರು ಸುಂದರ ಮನ್ಸಿನ ಮುಗ್ದ ಮನುಷ್ಯ. ಮನೆ ತುಂಬಾ ಮಕ್ಕಳು ಈ ಹಿಂದೆ ವರ್ಸ ಮೇ ನಾಗೆ ಒಂದು ಮಗಳುದು ಮದ್ವೆ ಮಾಡಿಬಿಟ್ಟೆ ಅಂತ ಯಾವಾಗಲಾದರು ಮಾತಿಗೆಳೆಯೊನು. ಒಂದೊಂದು ಸಲ ಅನ್ನ್ಸೊಂದು ಎಷ್ಟು ಜನ ಮಕ್ಕಳು ಸಾಬಯ್ಯ ಅಂತ ಕೇಳ ಬೇಕು ಅಂತ … ಸುಮ್ಮಸಾಗ್ತಿದ್ದೆ. ಅಮ್ಮನಿಗೆ ಸಾಬಯ್ಯ ಬಂದ್ರೆ ಎಲ್ಲಿಲ್ಲದ ಸಡಗರ ಏನಾದ್ರು ಹೊಸ ಪಾತ್ರೆ ತಗೊ ಬಹುದು ಅಂತ. ಅವನು ತಂದ ಪಾತ್ರೆ ಗಂಟನ್ನೆಲ್ಲ ಬಿಚ್ಚಿಸಿ ಎಲ್ಲ ಪಾತ್ರೆಗಳನ್ನ ಪರೀಕ್ಷಿಸಿ ನೋಡದಿದ್ದರೆ ಅವಳಿಗೆ ಸಮಾಧಾನ ಆಗ್ತಿರಲಿಲ್ಲ. ಏನು ಮಾಡಕ್ಕೆ ನನ್ನ ಹತ್ತಿರ ಪಾತ್ರೆ ಇಲ್ಲ ಇದು ಆಗುತ್ತಾ ಅಂತ ನಮ್ಮನ್ನೆಲ ಕೇಳಿ ಆರಿಸಿ ಇಟ್ಟುಕೊಳ್ಳೊದು, ಮುಂದಿನ ವ್ಯಾಪಾರದ ಕೆಲಸ ಅಪ್ಪನದ್ದು.

    ಅಪ್ಪನಿಗೆ ಇವನನ್ನ ಕಂಡರೆ ಅಷ್ಟ ಕಷ್ಟೆ ಎಲ್ಲಿ ಅಮ್ಮ ಕೆಲಸಕ್ಕೆ ಬರುವ ಕಬ್ಬಿಣ, ಪ್ಲಾಸ್ಟಿಕ್ ಸಾಮಾನುಗಳನ್ನ ಹಾಕಿ ಪಾತ್ರೆ ತಗೊತಾಳೊ ಅನ್ನೊ ಅನುಮಾನ. ಆದರೂ ವ್ಯಾಪಾರ ಕುದುರಿಸಲು ಒಪ್ಪುತಿದ್ದ, ಹೇ ಕೊಡಿ ಸಾಬ್ರೆ ಬರುತ್ತೆ ಇದು, ನಾನು ನೊಡ್ಕಂದು  ಬಂದಿದ್ದಿನಿ ಪ್ಯಾಟೆನಾಗೆ, ಈ ತಪ್ಲೆ ಇಷ್ಟೆ ಬಾಳೊದು … ಇಲ್ಲ ಅಂದ್ರೆ ಬೀಡಿ ಇನ್ಯಾರತ್ರನಾದ್ರು ತಗತ್ತಿವಿ ಅಂತ ಅವನನ್ನ ಒಪ್ಪಿಸೋದು. ಸಾಬಯ್ಯ ಗೀಟಕಿಲ್ಲ ಬುದ್ದಿ ಅಸ್ಲು ಹೊಂಟೊಯ್ಯ್ತದೆ ನಿಮ್ದು ದೊಡ್ದ ಮನ್ಸು ಮಾಡಿ ಕೈ ಎತ್ತಿ ಕೋಟ್ಟು ಬುಡಿ ಅಂತ ಒಪ್ಪಿಸೋನು ….. ಕೊನೆಗು ವ್ಯಾಪಾರ ಮುಗಿದು ಅಮ್ಮನ ಮುಕದಲ್ಲಿ ಒಂದು ಹೊಳಪು …. ಯಾರ್ಯಾರು ಮುಟ್ಟವರೊ ಚನ್ನಾಗಿ ಹುಣಸೆ ಹಣ್ಣಾಕಿ ತೊಳಿಬೇಕು ಎಲ್ಲಿ ಇಡೊದು ಇವ್ನ ಅನ್ನೊ ಚಿಂತೆ ಬೇರೆ. ಅಮ್ಮ ಅಪ್ಪಂಗೆ ಕಾಣದಂಗೆ ತೆಂಗಿನಕಾಯಿ, ತರಕಾರಿ ಅವನಿಗೆ ಕೊಟ್ಟು, ನಮ್ಮನೆಯೊರಿಗೆ ಕಾಣದಂಗೆ ಮಡಿಕ್ಕೊ ಅಂತ ಹೇಳೊದು. ಮತ್ತೆ ಬರೊವಾಗ ಅಗಲ ತಳದ ಪಾತ್ರೆ, ಚಿತ್ರ ಇರೊ ತಟ್ಟೆ ತಗಂಡು ಬಾ ಅಂತ, ಅವ್ಳು ಯಾರಾದ್ರು ಮನೆಯಲ್ಲಿ ನೋಡಿದ್ದ ಪಾತ್ರೆಗಳ ವರ್ಣನೆಮಾಡಿ ಅವನಿಗೆ ಮನವರಿಕೆ ಮಾಡ್ಸೊದು. ಅವ್ನು ಹೇ ತತ್ತಿನಿ ಬೀಡಿ ನೋಡಿ ಮಾಲ್ ಹೇಂಗಿರುತ್ತೆ ಅಂತ ಬರವಸೆ ಕೋಡೊನು.

    ಮಧ್ಯಾನದ ಬಿಸಿಲಲ್ಲಿ ಬಂದು, ಸೈಕಲ್ ಮರಕ್ಕೆ ಒರಗಿಸಿ ಒಂದಷ್ಟೊತ್ತು ಕಾಲ ಕಳೆದು ಊರಿನ ಕಡೆ ವ್ಯಾಪಾರಕ್ಕೆ ಹೋಗೊದು ಅವನ ರೂಡಿ. ಜಾಸ್ತಿ ಹಳೆ ಸಾಮಾನು ಇದ್ರೆ ನಮ್ಮನೆ ಹತ್ರ ಇಟ್ಟು ಮತ್ತೆ ತೊಗೊಂಡು ಹೋಗೊನು.ಎದುರಿಗೆ ಸಿಕ್ಕಿ ಏನು ಸಾಬ್ರೆ ವ್ಯಾಪಾರ ಹೆಂಗೈತೆ ಅಂತ್ರೆ ಸಾಕು, ಹೇ ಹೊಸ ಪಾತ್ರೆನಾಗೆ ಏನು ಗಿಟ್ಟಕಿಲ್ಲ ಸಿಲ್ವಾರ ,ಇಸ್ಟಿಲ್ ಸಿಕ್ಕಾಪಟ್ಟೆ ಜಾಸ್ತಿ ಬುದ್ದಿ. ಏನೊ ಹಳೆ ಸಾಮಾನ್ ನಾಗೆ ಒಂದಷ್ಟು ಗೀಟುತ್ತೆ ಅಂತ ಶುರುಮಾಡಿ ಅವನ ವ್ಯಾಪಾರದ ಕಷ್ಟ ನಷ್ಟಗಳನೆಲ್ಲ ಹೇಳ್ಕೊತಿದ್ದ.

    ಇವತ್ತಿಗೂ ಅವನ ಶ್ರಮ- ಸೌಮ್ಯತೆ ನನ್ನನ್ನ ಆವರಿಸಿ ಕೊಂಡಿದೆ, ಇಂದಿಗೂ ಕಂಡರೆ ಅಷ್ಟೆ ಪ್ರೀತಿ, ಗೌರವದಿಂದ ಕಾಣುವ ಜೀವಿ. ಯಾವಾಗಲೊಮ್ಮೆ ಊರಿನಲ್ಲೊ ಅಥವಾ ಮನೆಯಲ್ಲೊ ಕಾಣಿಸಿಕೊಂಡಾಗ ವಿನಮ್ರದಿಂದ ಮಾತಾಡಿಸಲು ಮನಸ್ಸು ಮೊದಲು ಗೊಳ್ಳುತ್ತದೆ…. ಇದೆ ಇರ ಬೇಕು …. ತುಡಿತ ಅಥವ ಒಂದು ಒಳ್ಳೆಯ ಭಾವನೆ ಅನ್ನುವುದು. ಎಲ್ಲೊ ಇದ್ದು ಹೇಗೊ ಇದ್ದು ಕೂಡ ಮನಸ್ಸಿಗೆ ತುಂಬಾ ಹತ್ತಿರವಾಗಿರುತ್ತಾರೆ. ಅವರಿಗೆ ನಾವು ಏನು ಆಗ ಬೇಕಾಗಿಲ್ಲ …. ನಮಗೆ ಅವರು ಕೂಡ.
ಯಾವಾಗ ಬರೆದದ್ದು.

ಈ ತಿಂಗಳ ಪಂಚಾಂಗ.

ಜುಲೈ 2018
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
« ಡಿಸೆ    
 1
2345678
9101112131415
16171819202122
23242526272829
3031  

p

Powered by eSnips.com
Advertisements