Archive for the 'ನೋಟದಾಚೆಗಿನ ಬದುಕು.' Category

21
ಮಾರ್ಚ್
08

ಬಿಂಬಗಳು.

ಹಾವಿನಂತೆ ಹರಿದಾಡುವ ಇಕ್ಕಟ್ಟಾದ ರಸ್ತೆಗಳ ಇಕ್ಕೆಲಗಳಲ್ಲಿನ  ವಿದ್ಯುತ್ ಕಂಬಗಳು, ಮುಕ್ಕಾಗಿ ಪೂಜೆಯಿಲ್ಲದೆ ನಿಂತ ಮೂರ್ತಿಗಳಂತೆ, ತನ್ನ ಮೈತುಂಬೆಲ್ಲಾ  ಬಣ್ಣ ಬಣ್ಣದ ಬ್ಯಾನರ್ಗಳ ಪಳೆಯುಳಿಕೆಗಳಿಂದ,  ತುಂಡಾದ ಕೇಬಲ್ ತಂತಿಗಳಿಂದ, ಗತ ಕಾಲದ ಕಿಲುಬಿಡಿದ ತಗಡಿನ ಫ್ಯೂಜ್ ಪೆಟ್ಟಿಗಳಿಂದ, ಬಣ್ಣ ಮಾಸಿದ ಗಾಳಿಪಟದ ಬಾಲಾಂಗೊಸಿಯ ಬಟ್ಟೆ ತುಣುಕುಗಳಿಂದ  ಅಲಂಕರಿಸಿದ ಹಾಗೆ, ಬಿಸಿಲು ಮಳೆ ಗಾಳಿಯ ಬಡಿತಗೆ ಅಂಜದೆ  ನಿಂತಿವೆ. ಮೇಲ್ಬಾಗದ ಕಿಲುಬಿಡಿದ ಕಬ್ಬಿಣದ ಸರಳಿಗೆ ಉಂಗುರ ಪೊಣಿಸಿದಂತೆ ಇಟ್ಟ ಮೂರ್ನಾಲ್ಕು ಪಿಂಗಾಣಿಯ ದಿಮ್ಮೆಗಳು, ಮೂರ್ತಿಯ  ಮುಡಿಗೆರಿಸಿದ ಕಿರೀಟದಂತಿದವೆ.  ಅವುಗಳ ಮೇಲೆ ಮುಪ್ಪಾದ ಮುದುಕನಂತೆ ಬಾಗಿ ಹಾಯುವ ಅಲ್ಯೂಮಿಯಮ್ ತಂತಿಗಳು. ಒಂದನಿನ್ನೊಂದು ಮುತ್ತಿಕ್ಕದಂತೆ ಅಲ್ಲಲ್ಲಿ ತಂತಿಗಳಿಗೆ ಅಡ್ಡಲಾಗಿ ಸುತ್ತಿದ ಪ್ಲಾಸ್ಟಿಕ್ ಸರಳುಗಳು ರೈಲು ಕಂಬಿಗಳನ್ನ ನೆನಪಿಸುತಿದ್ದವು. ಪ್ರತಿ ಕಂಬಕೂ ಹತ್ತಾರು ಮನೆಗಳಿಂದ ಬಂದು ತಲುಪುತ್ತಿದ್ದ ವಿದ್ಯುತ್ ಪ್ರಸರಣ ಕಂಬಿಗಳು, ಅವೆಲ್ಲವುದರ ಗೊಜಲು ಬಿಂಬ ಮುಂಜಾನೆ ಮನೆಗಳ ಮುಂದೆ ಚುಕ್ಕಿಗಳ ನಡುವೆ ಸುಳಿದಾಡುವ ಸೊಟ್ಟ ರಂಗವಲ್ಲಿಯಂತಾಗಿತ್ತು. ಹೀಗೆ ರಸ್ತೆಯುದ್ದಕೂ ಎದ್ದು ನಿಂತಿದ್ದ  ಕಂಬಗಳು ಹೋಗಿ ಬರುವವರನ್ನ ತಡೆದು ನಿಧಾನಿಸುವ ಸಿಗ್ನಲ್ ದೀಪಗಳಾಗಿದ್ದವು. ರಸ್ತೆಯೊಳಕ್ಕೆ ಮುನ್ನುಗ್ಗುವ ಅವಸರವಿದ್ದಂತೆ ಸಾಲುಗಟ್ಟಿದ ವಠಾರಗಳು,  ಬೆಳಕನು ಕಾಣದ ಕಿಟಕಿಗಳ ಆನಿಕೊಂಡಿದ್ದ ಬಾಗಿಲುಗಳ ತೆರೆಗಳ ಹಿಂದೆ ಬದುಕು ಸಾಗಿತ್ತು.  ಇವೆಲ್ಲವನ್ನ ಹಾಯುತ್ತ ಹೋಗಿ ಬರುವ ವಾಹನಗಳ ನಡುವೆ ನುಸುಳಿಕೊಂಡು ಹೆಜ್ಜೆಹಾಕುವಾಗ, ನೆಸರನು ಕರಗಿ ಚಂದಿರನ ಬರುವಿಕೆಗಾಗಿ ಕಾದಿದ್ದಹಾಗಿತ್ತು ಬಾನು ಭೂವಿಯೆರಡು.

ಹಾದಿಯ ಇಕ್ಕೆಲದಲ್ಲಿ ಸಣ್ಣ ಡಬ್ಬಿಯಂತ ಚಹಾ ಅಂಗಡಿಗೆ ಅಂಟಿಕೊಂಡಿದ್ದ ಮಂದಿ. ಬೆಳಗಿನಿಂದ ದುಡಿದು ಮನೆಗೆ ಮರಳುವ ಮುನ್ನ ಒಂದು ಗುಟುಕು ಚಹಾ ಹೀರಿ, ಬೀಡಿಯ ಹೊಗೆಯಾಡಿಸಿ ಮರಳುವ ಕಾತರ ಹಲವು ಮುಖಗಳಲ್ಲಿ. ಮತ್ತೊಂದಷ್ಟು ಮಂದಿ ಬೆಳಗಿನಿಂದ ಕುಡಿದ ಚಹಾಗಳ ಲೆಕ್ಕವಿಲ್ಲ ಹೊಗೆಯಾಗಿಸಿದ ಬೀಡಿಗಳ ನೆನಪಿಲ್ಲ. ಅವರು ಮಾತಾಡದೆ ಇದ್ದ ವಿಷಯಗಳಿಲ್ಲ, ಮನೆಯ ಅಂಳದಿಂದ ಶುಋವಾಗುವ ವಿಷಯಗಳು ಸ್ಥಳಿಯ ಗೆರೆಗಳನ್ನ ದಾಟಿ, ಸರಕಾರ ರಾಜ್ಯ ಹೀಗೆ ಸಾಗಿದ್ದವು. ಸುತ್ತಲು ಆವರಿಸಿಕೊಳ್ಳುತ್ತಿದ್ದ ಕತ್ತಲ್ಲು, ಸಣ್ಣಗೆ ಕೊರೆವ ಮಾಗಿಯ ಚಳಿ ಉಣ್ಣೆಯ ಸ್ವೆಟರ್ನೊಳಗೆ ಕೈ ತುರುಕಿ ಬೆಚ್ಚಗಾಗಿಸುತ್ತ ಸಣ್ಣಗೆ ನಡುಗುತ್ತ, ದಾರಗಳಿಗೆ ಪೋಣಿಸಿದಂತೆ ತೂಗು ಬಿಟ್ಟಿದ್ದ ಹಲವಾರು ಭಾಷೆಯ ವೃತ್ತ ಪತ್ರಿಕೆ, ಮಾಸ ಪತ್ರಿಕೆಗಳತ್ತ ಮನಸ್ಸು ನೆಟ್ಟಿತು. ಒಂದರಮೇಲೊಂದು ಪೇರಿಸಿದ್ದ ಅವುಗಳ ಮುಖಪುಟ ಹಿಂಬದಿ ಕೊಂಚ ಇಣಿಕಿ ನೋಡುವ ತುಂಟ ಹುಡುಗಿಯ ಭಾವದಂತಿತ್ತು.  ಬಿರುಸಿನ ವ್ಯಾಪಾರದಲ್ಲಿ ಮಗ್ನನಾಗಿದ್ದ ಅಂಗಡಿಯವನಿಗೆ ಗಿರಾಕಿಗಳು ಕಿಂಗ್ ಅಂದ ಕೂಡಲೆ ಬಂಗಾರ ಬಣ್ಣದ ಸ್ಪುಟವಾದ ರಟ್ಟಿನ ಪೆಟ್ಟಿಗೆಯಲ್ಲಿ ಸಾಲು ಸಾಲಾಗಿ ಮಲಗಿದ್ದ ಶ್ವೇತ ಸುಂದರಿಯರ ಕೈ ಹಿಡಿದು ಕಳುಹಿಸುವನು, ಚಾ ಎಂದ ಕೂಡಲೆ ಪಂಪ್ ಸ್ಟೌವ್ ನ ಮಂದ ಜ್ವಾಲೆಗಳ ಮೇಲೆ ಕುದಿಯುತ್ತ ಘಮಗುಟ್ಟುವ ಚಹವನ್ನ ಬಸಿದು ಎತ್ತರಿಸಿ ಗಾಜಿನ ಲೋಟಕೆ ನೋರೆ ಬರುವ ಹಾಗೆ ಉಯ್ದು ಕೈಲಿಡುವನು.  ಪುಲ್ ಚಹಾ ಹಿಡಿದು ಪಕ್ಕದಲ್ಲೆ ರಸ್ತೆಗೆ ತಾಗಿದಂತಿದ್ದ ಕಲ್ಲು ಬೆಂಚಿನಲ್ಲಿ ಕೂತೆ, ಸುಡುವ ಚಾಹ ಲೋಟದಿಂದ ಅಂಗೈಗಳನ್ನ ಬೆಚ್ಚಗಾಗಿಸುತ ಒಂದೊಂದೆ ಗುಟುಕು ಹೀರಿ ಸುತ್ತಲ ಪರಿಸರವನ್ನ ನಿಲುಕುವಷ್ಟು ಗಮನಿಸುತ್ತಿದ್ದೆ. ಸಣ್ಣ ಗಾಡಿಗಳಲ್ಲಿ ಸೊಪ್ಪು ತರಕಾರಿ ಹರಡಿ ಮಾರುವವರು, ಅವರು ತಮ್ಮ ಗಿರಾಕಿಗಳೊಂದಿದೆಗೆ ವ್ಯವಹರಿಸುವ ಪರಿ. ಒಮ್ಮೆ ತಮಿಳು ಒಮ್ಮೆ ಹಿಂದಿ ಆಗಾಗ ಕೊಳ್ಳುವವರನ್ನು ಗಮನಿಸಿ ಬದಲಾಗುವ ಭಾಷೆ, ಮಾತಿನ ದಾಡಿ, ಏರಿಳಿತ ಕಾಣುವ ಬೆಲೆಗಳು. ಬದುಕ ಕಟ್ಟಿಕೊಳ್ಳಲು ಅವರ ಪ್ರತಿ ಕ್ಷಣಗಳ ಹೋರಾಟ ನಿರಂತರ ತೀರವ ತಟ್ಟುವ ಸಾಗರನ ಅಲೆಗಳಂತೆ ಸಾಗುತ್ತಲಿತ್ತು. ಇಂದು ಈ ನಗರ ಮೊದಲಿದ್ದ ಹಾಗೆ ಉಳಿದಿಲ್ಲ ದಿನೆ ದಿನೆ ಹೆಚ್ಚುತ್ತಿರುವ ದೊಡ್ಡ ಬಂಡವಾಳದಾರರ ಹಾವಳಿ, ಅವರು ಕೊಳ್ಳುವವರನ್ನು ಆಕರ್ಷಿಸುವ ಸಲುವಾಗಿ ರೂಪಿಸುವ ಮಾರಾಟದ ತಂತ್ರಗಳು.  ನೋಟಗಳ ಅರಸಿ ಸಾಗುತ್ತಿದ್ದ ಅಲೆಮಾರಿ ಮನಸ್ಸು ಹತ್ತಾರು ವಿಷಯಗಳನ್ನ ಕೌತುಕದಿಂದ ಹುಡುಕುತ್ತಲೆ ಇತ್ತು….. ಆದರೆ ಕೈಯಲ್ಲಿ ಹಿಡಿದಿದ್ದ  ಚಹ ಲೋಟ ಖಾಲಿ ಖಾಲಿ, ಇನ್ನೂ ಹುಡುಕುವ ಅರಿಯುವ ತವಕ ಇದ್ದೆ ಇತ್ತು.

Advertisements
11
ಫೆಬ್ರ
08

ಮಾಸುವ ಜೀವದ ಮಾಸದ ನೆನಪುಗಳು.

     ಸರಕಾರಿ ಆಸ್ಪತ್ರೆಯ ಬಿಳಿಯ ಗೋಡೆಗಳ ನಡುವೆ ಹೆಜ್ಜೆ ಹಾಕುತ್ತಾ, ಪರಿಪರಿಯಾಗಿ ತೆರೆದುಕೊಳ್ಯುತ್ತಿದ್ದ ಆರ್ಥ ದನಿಗಳ ಆಲಿಸುತ್ತಾ ಸಾಗಿದ್ದ ಕುಸುಮಳಿಗೆ ಬಾಗಿಲುಗಳಿಗೆ ತೂಗಿ ಬಿಟ್ಟಿದ್ದ ಬೋರ್ಡುಗಳು ಅರೆಬರೆಯಾಗಿ, ಒಣ ಮರದಲ್ಲಿ ಜೋತು ಬಿದ್ದ ಹಸಿಗಾಯಿಗಳಂತೆ ಗೋಚರಿಸುತ್ತಿದ್ದವು. ಮುಂದೆ ಸಾಗಿದವಳಿಗೆ ಕಣ್ಣಿಗೆ ಬಿದ್ದದ್ದು ಜನರಲ್ ವಾರ್ಡ್ ೨೬. ಯಾವ ವಾರ್ಡು ಅಂತ ಕೇಳೊದೆ ಮರ್ತೆನಲ್ಲ ಅಂತ ನೆನೆಪಾಗಿ, ತನ್ನ ಕಿಸೆಯಲ್ಲಿದ್ದ ಮೊಬೈಲ್ ನಿಂದ ವಸಂತನಿಗೆ ಕರೆಮಾಡಿದಾಗ ಬಂದ ಉತ್ತರ ಜನರಲ್ ವಾರ್ಡ್ ೨೬. ಎದುರಿಗೆ ಇದ್ದೆನಲ್ಲ ಈ ಹಾಳು ಆಸ್ಪತ್ರೆಯ ಪ್ರದಕ್ಷಿಣೆ ಹಾಕಿ ಹುಡುಕೊದು ತಪ್ತು, ಅನ್ನೊ ನಿಟ್ಟುಸಿರು ಒಂದೆಡೆ. ಅವನ ಮುಂದೆ ಹ್ಯಾಗೆ ನಿಲ್ಲೊದು ನಿಜವಾಗಲು ನಾನವನ್ನ ಗುರುತಿಸುತ್ತಿನಾ? ಅಥವಾ ಅವನು ನನ್ನನ್ನ ಗುರುತಿಸಿ ಮತ್ತದೆ ಶೈಲಿಯಲ್ಲಿ ಕುಮ್ಮಿ ಅನ್ನಬಹುದಾ? ಮನದ ಕುಲುಮೆಯಲಿ ಜ್ವಾಲೆಗಳ ಹಾಗೆ ರಾಚುತ್ತಿದ್ದ ಪ್ರಶ್ನೆಗಳು, ಅವಕ್ಕೆಲ್ಲ ಉತ್ತರ ಹುಡುಕುವ ತಾಳ್ಮೆ ಇಲ್ಲದಿದ್ದರು ಸುಮ್ಮನಾದರು ಇರುವುದು ಹೇಗೆ?

     ಬೆಳಗಿನ ಕತ್ತಲಿನಿಂದ ಶುರುವಾಗುವ ಕೆಲಸ,ಕಿರಿಕಿರಿ ಮುಂದೆನು ಅನ್ನುವ ಪ್ರಶ್ನೆಗಳು ಕರಗುವುದು ಮಧ್ಯರಾತ್ರಿಯ ಗಾಡ ನಿದ್ರೆಯಲ್ಲಿ. ಅದು ವಠಾರದ ಎಲ್ಲರೂ ನೆಮ್ಮದಿಯಿಂದ ನಿದ್ದೆ ಹೋದರೆ? ಪಕ್ಕದ ಮನೆ ಪಿಂಕಿ ಕಣ್ಣಿಗೆ ಯಾರು ಸಿಗದಿದ್ದರೆ ಮಾತ್ರ. ಪಿಂಕಿಯ ಒಂದು ಸದ್ದಿಗೆ ಬಿದಿಯುದ್ದಕ್ಕೂ ಸಾಲಾಗಿ ನಿಂತು ಸಾತ್ ಕೊಡುವ ಅವರ ಸಂಭಂದಿಕರು, ರಾತ್ರಿ ಪೂರ ಹಿಡಿ ಶಾಪ ಹಾಕುವ ವಠಾರದವರು. ಮತ್ತದೆ ಬೆಳಗ್ಗೆ ಎದ್ದೊಡನೆ ಎದ್ದು ನಿಲ್ಲುವ ಪ್ರಶ್ನೆ ಯಾವ ತಿಂಡಿ ಮಾಡೊದು ಉಪ್ಪಿಟ್ಟು ಬೇಗ ಕೆಲಸವಾಗುತ್ತೆ, ಅಯ್ಯೋ ನಮ್ಮ ಚೋಟು ಹಿಡಿಸೊಲ್ಲವಲ್ಲ ಅನ್ನೊ ಗುನುಗು. ಹೊಗಲಿ ಕಷ್ಟ ಆದ್ರು ಪರವಾಗಿಲ್ಲ ಚಪಾತಿ,ಚಟ್ನಿ, ಪಲ್ಯ ಎಲ್ಲ ಮಾಡಿದಾಯಿತು. ಇನ್ನೂ ಮಗನನ್ನ ತಯಾರಿ ಮಾಡೊ ಉಸಾಬರಿ, ಅವನು ಬಿಸಾಡಿದ ಪುಸಕ್ತಗಳ ಬ್ಯಾಗಿಗೆ ತುರುಕೊದರಿಂದ ಹಿದಿದು ಒಂದು ಸಾಕ್ಸು ಪಿಂಕಿ ಕಚ್ಚಿಕೊಂಡು ಹೊಯ್ತು ಅಂದಾಗ ಅದರ ಹಿಂದೆ ಓಡಿ ಬಿಡಿಸಿಕೊಂಡು ಬರೋದು. ಅಷ್ಟರಲ್ಲಿ ರಾಯರು ಶುಭ್ರವಾಗಿ ಸ್ನಾನ ಮಾಡಿ ಅಚ್ಚುಕಟ್ಟಾಗಿ ತಿಂಡಿ ತಿನ್ನುತಾ ಪತ್ರಿಕೆಯಲ್ಲಿ ಮುಳುಗಿರುತ್ತಾರೆ. ಎಲ್ಲರನ್ನ ಮನೆಯಿಂದ ಕಳಿಸಿದರೆ ಒಂದು ಯುದ್ದ ಮುಗಿಸಿದಷ್ಟು ನಿಟ್ಟುಸಿರು.

    ಬೆಳಗಿನ ರೌಂಡ್ ಮುಗಿಸಿ ಮಧ್ಯಾನದ ಕೆಲಸಗಳಿಗೆ ಅಣಿಯಾಗುತಿದ್ದಾಗ ಬಂದದ್ದು ವಸಂತನ ಕರೆ, ಕುಸುಮಳ ಒರಿಗೆಯವ,ಇಬ್ಬರು ಒಟ್ಟಿಗೆ ಓದಿಕೊಂಡವರು. ಏನೋ ಮಾರಾಯ ಒಂದು ಫೋನ್ ಮಾಡ್ಲಿಕ್ಕೆ ತಿಂಗಳು ಬೇಕಾಯ್ತ ನಿನ್ಗೆ, ಮದುವೆ ಆದೊರ್ದೆಲ್ಲ ಇದೆ ಕಥೆ ಇರ್ಬೇಕು. ಹೆಂಡತಿ ಪಕ್ಕಕ್ಕೆ ಬಂದ್ಲು ಅಂದರೆ ಪ್ರಪಂಚ ಪೂರ ಅವಳೊಬ್ಬಳೆ ಕಾಣೋದು ಅನ್ಸುತ್ತೆ. ಮತ್ತೆ ನಿನ್ನ ಹನಿಮೂನ್ ಜೋರಂತೆ, ನನ್ಗೆನು ತಂದಿದ್ದಿಯಾ ಸಿಮ್ಲಾ ಇಂದ. ಏನು ತಂದಿಲ್ಲ ಅಂದ್ರೆ ಗ್ಯಾರಂಟಿ ಶ್ಯಾಪ ಹಾಕ್ತಿನಿ, ನಿನ್ಗೆ ಗೊತ್ತಲ್ಲ ನನ್ನ ನಾಲ್ಗೆನಲ್ಲಿ ಮಚ್ಚೆ ಇರೋದು. ದೊಡ್ಡದೇನು ಆಗ್ಬೆಕಾಗಿಲ್ಲ ಒಂದು ಶಿಮ್ಲಾ ಮಫ್ಲರ್ ತಂದಿದ್ದರು ಬದ್ಕೊತ್ತಿಯ. ನೀನು ಶುದ್ಧ ವಡ್ಡ ಕಣೋ ಜಾನಕಿನ ಸರಿಯಾಗಿ ನೋಡ್ಕೊಂಡೆ ತಾನೆ, ಊರೆಲ್ಲ ಸುತ್ತಾಡಿಸಿಕೊಂಡು ಬಂದಿದ್ದಿಯಾ ಹ್ಯಾಗೆ, ಇಲ್ಲಾ ನಮ್ಮನ್ನೆಲ್ಲ ಕರ್ಕೊಂಡು ಹೊಗಿದ್ಯಲ್ಲಪ್ಪ ನಂದಿ ಬೆಟ್ಟ ತೋರ್ಸ್ತಿನಿ ಅಂತ ಚಿಕ್ಕಬಳ್ಳಪುರ ಮೇನ್ ರೋಡ್ ನಲ್ಲಿ ನಿಲ್ಲಿಸಿ ತೋರ್ಸಿ ಕರ್ಕೊಂಡು ಬಂದ್ಯಲ್ಲ ಹಾಗೇನಾದರೂ ಮಾಡಿದ್ಯಾ ಹ್ಯಾಗೆ. ಒಂದೆ ಸಮನೆ ರೇಗಿಸುತಿದ್ದವಳಿಗೆ ವಸಂತನಿಂದ ಉತ್ತರ ಬರದಿದ್ದಾಗ ಕಸಿವಿಸಿಯಾಗಿ. ಯಾಕೋ ಮಾರಾಯ ಏನಾಯ್ತೊ ಜಾನಕಿ ಏನಾದ್ರು ಅಂದ್ಲೆನೋ, ಪಾಪ ಕಣೋ ಅವಳಿಗೆ ಅಷ್ಟೋಂದು ತಿಳುವಳಿಕೆ ಇಲ್ಲ ನೀನೆ ಸರಿದೂಗಿಸಿಕೊಂಡು ಹೊಗೋದಲ್ವ. ಮೌನ ಮುರಿದ ವಸಂತ ಸಾಂಗ್ಲಿ ಎಂದು ತೋದಲಿದ. ಕುಸುಮಳಿಂದ ನಿರ್ಘಳ್ಳವಾಗಿ ಹರಿಯುತ್ತಿದ್ದ ಮಾತುಗಳ ಹತಾಟ್ಟನೆ ನಿಂತು ಶುದ್ಧ ಮೌನ ಆವರಿಸಿತು. ಸಾಂಗ್ಲಿ ಆಸ್ಪತ್ರೆನಲ್ಲಿದ್ದಾನಂತೆ, ನನ್ಗೆ ಇಲ್ಲಿಗೆ ಬಂದಾಗಲೆ ಗೊತ್ತಾದದ್ದು ಹೋಗಿ ಬಂದೆ, ನಿನೆಗೆ ತಿಳಿಸೋಣ ಅನ್ನಿಸಿತು, ಒಮ್ಮೆ ಹೋಗಿ ಬಾ ಅವನಿಗೂ ಸಮಾಧಾನವಗುತ್ತೆ.

    ಸಂಸಾರದ ಜಂಜಾಟಗಳಲ್ಲಿ ಕಳೆದು ಹೋಗಿದ್ದ ನೆನೆಪುಗಳು ಮತ್ತೆ ಆವರಿಸಿದಂತಾಗಿ, ಮತ್ತ್ಯಾವ ಕೆಲಸ ಮಾಡುವ ಉತ್ಸಾಹ ಇಲ್ಲವಾಗಿತ್ತು. ಮಧ್ಯಾನದ ಕೆಲಸಗಳನೆಲ್ಲ ಬದಿಗಿಟ್ಟು ಹೋಗಿಬರುವುದಾಗಿ ನಿಶ್ಚಯಿಸಿ ಹೊರಟವಳಿಗೆ ಬಸ್ಸಿಗಾಗಿ ಕಾಯುವ ತಾಳ್ಮೆಯು ಇರಲಿಲ್ಲ ಆ ಕಡೆಗೆ ಹೋರಡುವ ಆಟೋ ಹಿಡಿದಳು. ದಾರಿಯುದ್ದಕೂ ಸಾಂಗ್ಲಿ, ವಸಂತ, ಪರಮೇಶಿ, ಲಲಿತ ಹೀಗೆ ಎಲ್ಲರೂ ಗುಂಪು ಕಟ್ಟಿ ಸುತ್ತಿದ್ದ ಪಾರ್ಕುಗಳು, ಜಗಳವಾಡುವಷ್ಟು ಗಡುಸಾಗಿ ನಡೆಯುತಿದ್ದ ಚರ್ಚೆಗಳು, ಕೊನೆಯ ವರ್ಷ ನಮ್ಮ ತಂಡ ಆಡಿದ ನಾಟಕ, ಆದಕ್ಕೆ ದಿನಗಟ್ಟಲೆ ನಡೆಯುತ್ತಿದ್ದ ರಿರ್ಸೆಲ್ ಗಳು. ಒಮ್ಮೆಗೆ ಮನ್ಸಸ್ಸು ೬-೭ ವರ್ಷ ಚಿಕ್ಕದಾದಷ್ಟು ಅನುಭವ. ನೆನೆಪುಗಳ ನಡುವೆ ಮೈಮರೆತ ಕುಸುಮಳಿಗೆ ಆಟೋ ನಿಂತದ್ದು ಅರಿವಾಗಿ ಆಸ್ಪತ್ರೆ ಬಳಿಬಂದೆವೆಂದು ನೋಡಿದರೆ ಯುದ್ದಕ್ಕೆ ನಿಂತ ಸೈನಿಕರಂತೆ ಸಾಲು ಸಾಲಾಗಿ ನಿಂತಿದ್ದ ವಾಹನಗಳ ದಂಡು, ತನ್ನ ದಳಪತಿಯ ಆಗ್ನೆಗೆ ಕಾಯುತ್ತ ನಿಂತಂತೆ ಹಸಿರು ದೀಪವನ್ನರಸಿ ಕಾಯುತ್ತಿದ್ದರು. ಈ ಹಾಳು ಊರು ಯಾವತ್ತು ಉದ್ದಾರವಗುತ್ತೊ, ಇವತ್ತೆ ಆಗಬೇಕಾ ಇಷ್ಟೊಂದು ಜಾಮ್ ಮನದಲ್ಲೆ ಗೋಣಗುತ್ತಿದ್ದಳು.ಅಂತು ದಾರಿಯನ್ನ ಸವೆಸಿ ಆಸ್ಪತ್ರೆ ಮುಟ್ಟಿದಾಗ ಊಟದ ಸಮಯ.
(ಮುಂದುವರೆಯುವುದು….)

22
ಆಕ್ಟೋ
07

ಬದುಕೆಂಬ ಹಾಯಿ ದೋಣಿ.

ಕತ್ತಲು ಆವರಿಸಿಕೊಳ್ಳುತ್ತಿದ್ದ ಹೊಂಬಣ್ಣದ ಸಂಜೆಯಲಿ ಕಣ್ಣೊಳಗೆ ಸಾಗರನಷ್ಟು ಕನಸುಗಳ ಹೊತ್ತ ಜೀವ ಸಾಗುತ್ತಿದೆ, ಬದುಕೆಂಬ ಸಾಗರದಲ್ಲಿ ಹಾಯಿದೋಣಿಯಾಗಿ. ನಿನ್ನೆ ಕಂಡಿದ್ದ ಕನಸುಗಳು … ಇಂದು ಸಿಕ್ಕ ಉತ್ತರ… ನಾಳೆಯ ಪ್ರಶ್ನೆಗಳು, ಇವೆಲ್ಲವುದರ ಹೊರತಾಗಿ ಎಲ್ಲೊ ಒಂದು ಬೆಳಕಿನ ಕಿರಣ ಹುಡುಕುವ ಅವನ ಅಧಮ್ಯ ವಿಶ್ವಾಸ, ಅದಕ್ಕೆ “ನಂಬಿಕೆ” ಅನ್ನೊದು. ಇಡಿ ಜೀವಮಾನವೆಲ್ಲ ಕಳೆದ ಕೋಟಿ ಕೋಟಿ ಕ್ಷಣಗಳು ನಮ್ಮ ದಾಗಿರದಿದ್ದರು ಮುಂದಿನ ಕ್ಷಣ ಅಥವಾ ಅದರ ಮುಂದಿನದ್ದು ನಮ್ಮದಾಗಲಿದೆಯೆಂಬ ಉತ್ಕಟ ವಿಶ್ವಾಸ ಎಲ್ಲವನ್ನೂ ಮೀರಿ ದಾಟಿಸುತ್ತಿದೆ, ಅವನನ್ನು ಬದುಕಿನ ಹಾದಿಯಲ್ಲಿ…

“ನಂಬಿಕೆ ಎನ್ನುವ ಮೂರುವರೆ ಅಕ್ಷರದ ಪದಕ್ಕೆ ಇರುವ ಶಕ್ತಿ ಅಂತದ್ದು ಇಡಿ ಜೀವಮಾನವೆಲ್ಲ ಹಿಡಿದು ನಿಲ್ಲಿಸುವಂತದ್ದು” ಎಲ್ಲೊ ತಿರುವಿ ಹಾಕಿದ್ದ ಪುಟಗಳ ನೆನಪು ಅಸ್ಪಷ್ಟವಗಿತ್ತು. ಸುತ್ತಲು ಕವಿಯುತ್ತಿದ್ದ ಕತ್ತಲಲ್ಲಿ ನಿನ್ನೆಗಳು ಕರಗಿ ಇವತ್ತಿನ ವಿಶಾಲ ಹಾದಿ ತೆರೆದುಕೊಳ್ಳುತಿತ್ತು. ಬಿಟ್ಟು ಬಂದ ನಿನ್ನೆಗಳು ಇನ್ನೂ ಮನದಾಳದ ಮೂಲೆ ಮೂಲೆಯಲ್ಲಿ ಹಸಿರಾಗಿ ಉಳಿದಿದ್ದವು, ಅವುಗಳನು ಅಟ್ಟಿ ಹೊಸತನವ ತುಂಬಿಕೊಳ್ಳುವ ನಿತ್ಯ ಸಮರಗಳು ಸದಾ ಸಾಗಿದ್ದವು. ಗೆಲುವು ಸೋಲುಗಳ ಹಾದಿಯಲ್ಲಿ ನಲಿವು ನೋವುಗಳ ಉಂಡ ಬದುಕು ಪರಿಪಕ್ವವಾಗತೊಡಗಿತ್ತೆ??? ಮನದಾಳದಲ್ಲಿ ಏಳುವ ಪ್ರಶ್ನೆಗಳಿಗೆ ಆವರಿಸಿಕೊಳ್ಳುವ ತುಸು ಮೌನ, ಬದುಕು ಯಾವುದಕ್ಕು ನಿಲ್ಲದೆ ನಿನ್ನೆಗಳ ಬಿಟ್ಟು ಇಂದು ತನ್ನದಾಗಿಸುತ ನಾಳೆಗಳೆಡೆಗೆ ಸಾಗುತ್ತಿದೆ ಎನ್ನುವಂತಿತ್ತು. ವಿಶಾಲ ವಿಸ್ತಾರಗಳತ್ತ ಸಾಗುತ್ತ ಸುತ್ತಲ ಪ್ರತಿ ಜೀವಿಗಳನ್ನು ಗಮನಿಸುತ್ತ ಒಂದೊದು ಹೆಜ್ಜೆ ಸಾಗಿದಂತೆ ಬದುಕು ಹೊಸ ಹೊಸ ಅನುಭವಗಳ ಪುಟಗಳನ್ನ ತೆರೆದುಕೊಳ್ಳುತಿತ್ತು.

ಮನದಲ್ಲಿ ಭೊರ್ಗರೆಯುತ್ತಿದ್ದ ಅಲೆಗಳ ಹೊಡೆತಕ್ಕೆ ಸಿಕ್ಕಿದ್ದ ಅವನಿಗೆ ಸಾಗರನ ಅಲೆಗಳ ಪರಿವೇ ಇಲ್ಲದ ಮೂಖಹಕ್ಕಿಯಂತೆ ತೀರದುದ್ದಕ್ಕೂ ಸಾಗಿದ್ದ. ಹೊತ್ತು ಮುಳುಗುತ್ತಿದ್ದಂತೆ ಅಲೆಗಳ ರಭಸ ಹೆಚ್ಚಾಗಿ ಅವನು ಹಿಡಿದಿದ್ದ ಹಾದಿ ನೆನಪಾಗಿ, ಒಮ್ಮೆ ಹಿಂತಿರುಗಿದಾಗ ಅವನು ಬಹುದೂರ ಬಂದದ್ದು ಅರಿವಾಗಿ, ಹಿಂತಿರುಗಿದ. ಸಾಗರನ ಅಂಚಿನಲ್ಲೆ ಬದುಕ ಸಾಗಿಸುತ್ತಿದ್ದ ಬೆಸ್ತರ ಹತ್ತಾರು ಪುಟ್ಟ ಗುಡಿಸಿಲುಗಳು. ಒಣಗಲು ಹರಡಿದ್ದ ರಾಶಿ ರಾಶಿ ಮೀನುಗಳು, ಅಲ್ಲಿಂದ ಎಂದು ರಾಚುತಿದ್ದ ನಾರುವ ವಾಸನೆ. ಮರಳಿನ ಗುಡ್ಡೆ ಮಾಡಿಕೊಂಡು ಅಲೆಗಳೊಡನೆ ಕಾದಾಡುವ ಪರಿಯಲ್ಲಿ ಅಡುತಿದ್ದ ಮಕ್ಕಳು. ನಾಳಿನ ತಮ್ಮ ಸಮುದ್ರಯಾನಕ್ಕೆ ಸಿದ್ದವಾಗಲು ಬಲೆಗಳನ್ನು ಸಿದ್ದಮಾಡುತಿದ್ದ ಹತ್ತಾರು ಬೆಸ್ತರು ಅಲ್ಲಲಿ ಕಾಣುತಿದ್ದರು. ಮತ್ತಷ್ಟು ದೂರ ಸಾಗಿ ಬ್ರುಹದಾಕಾರದ ದೀಪದ ಕಂಬವನ್ನು ದಾಟಿ ಮನೆಯ ದಾರಿ ಹಿಡಿದಾಗ ಸುತ್ತಲು ಕತ್ತಲು ಆವರಿಸಿ ಏನು ಕಾಣದಂತಾಗಿತ್ತು. ದೂರದಿ ಸಣ್ಣಗೆ ಉರಿಯುತ್ತಿದ್ದ ದೀಪದ ಬೆಳಕು ಒಳಮನೆಯೆಲ್ಲ ಆವರಿಸಿತ್ತು. ಹತ್ತಿರವಾದಂತೆ ತನ್ನ ಶಕ್ತಿಯನೆಲ್ಲ ಒಂದುಗೂಡಿಸಿ ಒಲೆಯ ಮುಂದೆ ಕೂತು ಕೆಮ್ಮುತಿದ್ದ ಅಮ್ಮನ ಎದಿರಾಯ್ತು.

14
ಆಗಸ್ಟ್
07

ಅಸ್ಪಷ್ಟ ಚಿತ್ರಗಳ ಬೇಟೆ.

            ಬಿಮ್ಮೆನುತ ಸುಳಿದಾಡುವ ಗಾಳಿಗೆ ಮೈಯೊಡ್ಡಿ ನಿಂತು ದೂರ ದೂರದ ಅದೃಶ್ಯ ಅಸ್ಪಷ್ಟ ಚಿತ್ರಗಳನ್ನು ಹುಡುಕುತ್ತಿದ್ದಾಗ, ಸೂರ್ಯ ನೆತ್ತಿಯ ಮೇಲೆರಿ ಬಿಸಿಲು ಮಳೆ ಸುರಿಸುತ್ತಿದ್ದ ಧರೆಯ ತುಂಬೆಲ್ಲ. ತಣ್ಣನೆಯ ಗಾಳಿಗೆ ಹದವಾಗಿ ಬೆರೆತ ಸೂರ್ಯನ ರಶ್ಮಿ ಮೈಮನವೆಲ್ಲ ಬೆಚ್ಚಗಿರಿಸಿತ್ತು. ದೂರ ದೂರದ ಕನಸುಗಳ ಬೆನ್ನತ್ತಿ ಹೊರಟಿದ್ದೆ ದೇಹಮಾತ್ರ ಇಲ್ಲೆ …ಮನಸು ಎಲ್ಲೊ, ಗಾಳಿಯ ಬಡಿತಕ್ಕೆ ಹಾರುವ ಕೂದಲುಗಳು ತಾಳ ತಪ್ಪಿದ ರಾಗದಂತೆ ಭಾಸವಾಗುತ್ತಿದ್ದವು. ಸ್ವಲ್ಪ ಗಾಳಿ ಕಡಿಮೆಯಾದಂತೆ ಮತ್ತೆ ತನ್ನ ಸ್ಥಾನಕ್ಕೆ ಮರಳಲು ಪರಿತಪಿಸುತಿದ್ದವು, ಆಗಾಗ ತಲೆ ಮೇಲೆ ಕೈಯಾಡಿಸಿ ಸರಿಪಡಿಸಿಕೊಳ್ಳುತ್ತಿದ್ದೆ ನನಗರಿವಿಲ್ಲದಂತೆ.

         ಬಿಸಲ ರಭಸಕ್ಕೆ ಕಾದ ನೆಲ, ಮೇಲೇಳುವ ಧೂಳ ರಭಸದಿಂದ ಸಂಚರಿಸುವ ಯಮಗಾತ್ರದ ವಾಹನಗಳು, ಅವುಗಳ ಕರ್ಕಶ ಹಾರನ್ನುಗಳ ಆರ್ಭಟ ನನ್ನ ಬಡಿದೆಬ್ಬಿಸಲಾಗಲಿಲ್ಲ, ಇವೆಲ್ಲದುದರ ನಡುವೆ ಪ್ರಶಾಂತ ನಿಶ್ಯಬ್ಧ ನನ್ನನಾವರಿಸಿತ್ತು. ಮೌನ ತುಟಿಯಲ್ಲಿತ್ತಾದರು ಮನಸ್ಸು ಸಾವಿರ ಪ್ರಶ್ನೆ ಕೇಳುತ್ತಿತ್ತು. ಒಂದೊಂದು ಪ್ರಶ್ನೆಗಳ ಹುಡುಕಾಟದ ತವಕ ಕಣ್ಣಲ್ಲಿತ್ತು, ಅಸ್ಪಷ್ಟ ಚಿತ್ರಗಳು ಸ್ಪಶ್ಟವಾದಂತೆಲ್ಲ ಮತ್ತೆ ಬೆರೆಲ್ಲೊ ಕಣ್ಣು ಹರಿಯುತ್ತಿತ್ತು.

          ಹಲವು ವರುಷಗಳು ತಿರುಗಾಡಿದ್ದ ಜಾಗ, ಆದರು ಇಂದು ಹೊಸದಾಗಿ ಮೈನೆರೆದ ಮುಗ್ಧ ಹುಡುಗಿಯಂತೆ ಕಾಣುತ್ತಿದೆ. ಭಾರವಾದ ಸುತ್ತಿಗೆಯಿಂದ ಬಂಡೆಗಳನನ್ನ ಜಜ್ಜಿ ಜಲ್ಲಿ ಮಾಡುತಿದ್ದ ಒಂದಷ್ಟು ಜನ. ಹೆಣ್ಣು ಗಂಡುಗಳ ಬೇಧವಿಲ್ಲದೆ ಇಡೀ ದಿನ ಜಲ್ಲಿ ಮಾಡಿತ್ತಿದ್ದ ಒಡ್ಡರು. ಮೈ ಮುಖವೆಲ್ಲ ಬೂದಿ ಬಳಿದಂತೆ ಕಲ್ಲುಪುಡಿ, ಮೂಗಿಗೆ ಬಿಗಿದ ಹಳೆಯ ಸೀರೆಯ ತುಂಡು, ಕೈಗಳಿಗೆ ರಬ್ಬರಿನ ಸುತ್ತುಗಳು, ಬಿಡುವಿಲ್ಲದೆ ಸದ್ದುಮಾಡುವ ಸುತ್ತಿಗೆಗಳು. ಪಕ್ಕದಲ್ಲೆ ಜೋಳಿಗೆಯಲ್ಲಿ ಮಲಗಿ ನಗುವ ಕಂದನ ಕಿಲಕಿಲ ನಗು, ಕಲ್ಲು ಗುಡ್ಡೆಗಳ ಮೇಲೆ ಆಡುತ್ತಿರುವ ಮಕ್ಕಳು, ಮೈಮೇಲೆ ಅರೆ-ಬರೆ ಬಟ್ಟೆಯಾದರು ಅವರ ಖುಷಿಗೆ ಕೊರತೆಯಿಲ್ಲ, ಹಸಿದ ಮಕ್ಕಳಿಗೆ ಮೊಲೆ ಹಾಲುಣಿಸುತ್ತಿರುವ ತಾಯಂದಿರ ನಮ್ರತೆಯ ಮುಖಗಳು ಎಲ್ಲವೂ ಮಾಯ.

          ಈಗ ಅಲ್ಲಿ ದೊಡ್ಡದಾಗಿ ದನಿಮಾಡುತ್ತ, ಕಾರ್ಮೊಡದಂತೆ ಹೊಗೆಯನುಗುಳುವ ಕ್ರಷರ್ಗಳ ನಾದ ಕೇಳುತ್ತಿದೆ. ಪರ್ವತದಂತ ಜಲ್ಲಿ ಕಲ್ಲಿನ ರಾಶಿಯನ್ನು ಸಾಗಿಸಲು ನಿಂತ ಭಾರಿ ವಾಹನಗಳ ಸಾಲು. ಅಲ್ಲಲಿ ನಿಲ್ಲಿಸಿ ಟೀ, ಕಾಫೀಗಾಗಿ ಸಣ್ಣ ಡಬ್ಬಿಯಂತ ಅಂಗಡಿಯ ಮುಂದೆ ಕಲ್ಲುಹಾಸಿನ ಮೇಲೆ ಕೂತು ತನ್ನದೆ ಲೋಕದಲ್ಲಿ ತನ್ಮಯರಾಗಿ ಬೀಡಿ ಸೆದುತ್ತಿರುವ ಚಾಲಕರು. ಗಾಡಿಯಲ್ಲೆ ಉಳಿದು ಶುಚಿಮಾಡುತ್ತಿರುವ ಹದಿಹರೆಯದ ಕ್ಲೀನರ್ ಗಳು, ದಿನ ರಾತ್ರಿಯ ಪರಿವೆ ಇಲ್ಲದೆ ಟೀ-ಕಾಫೀ ಮಾಡಿ ನಿಂತಲ್ಲೆ ತೂಕಡಿಸುವ ಅಂಗಡಿಯವ. ಜಗವೆಲ್ಲ ಅವರವರ ಬದುಕಿನ ಕುದುರೆ ಬೆನ್ನತ್ತಿ ಸಾಗುವಾಗ ಕತ್ತಲಲ್ಲಿ ಸೋತು ಹಗಲಲ್ಲಿ ಮತ್ತೆ ಕತ್ತಲ ಹುಡುಕುತ್ತ ಸಾಗಿರುವ ಹತಭಾಗ್ಯ ಹೆಣ್ಣು ಮಕ್ಕಳು. ಅಂದು ಜಲ್ಲಿ ಒಡೆದು ಬದುಕುತ್ತಿದ್ದ ಜೀವಿಗಳಲ್ಲಿ ಕೆಲವರು ವಲಸೆ ಹೋದರು ಮತ್ತೆ ಹಲವರು ಇಲ್ಲೆ ಬದುಕು ಸಾಗಿಸಲು ಅನ್ಯ ದಾರಿ ಕಂಡರು.

22
ಮೇ
07

ದುಡಿಯುವ ಜನ ಎಲ್ಲೆ ಇದ್ದರು ಬದುಕಿಕೊಳ್ಳುತ್ತಾರೆ.

   ದುಡಿಯುವ ಜನ ಎಲ್ಲೆ ಇದ್ದರು ಬದುಕಿಕೊಳ್ಳುತ್ತಾರೆ, ಅವರನ್ನ ಬಂಜರು ಭೂಮಿಯಲ್ಲಿ ಬಿಟ್ಟರು …ಹುತ್ತು ಹದಮಾಡಿ ಫಸಲು ತೆಗೆಯುತ್ತಾರೆ. ಆ ಶಕ್ತಿ ಮತ್ತು ದುಡಿಯುವ ಚಲ … ಸಾದಿಸುವ ಹುಮ್ಮಸ್ಸು ಅವರಿಗೆದುರಾಗುವ ಅಡೆ ತಡೆಗಳನ್ನ ಮೆಟ್ಟಿ ನಿಲ್ಲುತ್ತೆ.

   ಬದುಕನ್ನು ಸಾಗಿಸಲು ವ್ಯವಸಾಯವನ್ನೆ ನಂಬಿದ್ದ ಕುಟುಂಬ ಕೃಷಿ ಭೂಮಿಗಾಗಿ  ಹುಡುಗಾಟದಲ್ಲಿದ್ದಾಗ ಸಿಕ್ಕಿದ್ದು ಸೀಗೆಹಳ್ಳಿಗೆ ಸೇರಿದಂತೆ ಇರುವ ಪಟ್ಟಣದ ವ್ಯಾಪಾರಿಯ ಜಮೀನು , ಕೊನೆಗು ಮಾತುಕತೆ ಕುದುರಿ ವರುಷದ ಗುತ್ತಿಗೆ ಆದಾರದ ಮೇಲೆ  ಜಮೀನು ಸಿಕ್ಕಾಯಿತು.  ಅದರಲ್ಲೆ ಒಂದು ಪುಟ್ಟ ಮಂಗಳೂರು ಹೆಂಚ್ಚಿನ ಮನೆ , ಹಿಂದೆ ಒಂದು ಒಸಾರ ದಂತ ಜಾಗ ಮುಂದೆ ಒಂದು ಮೂಲೆಯಲ್ಲಿ ಬಚ್ಚಲು ಮನೆಗೆಲ್ಲ ಸೇರಿ ಒಂದೆ ಬಾಗಿಲು. ಅವರು ಸಾಮಾನು ಸರಂಜು ತುಂಬಲು ಬಳಸುತ್ತಿದ್ದ ಮನೆ ಅದು. ಒಂದೊಂದು ಕಡೆ ಹೆಂಚುಗಳು ಓಡೆದಿವೆ ಮತ್ತೆ ಕೆಲವು ಮರಗಳಿಗೆ ಗೆದ್ದಲು ಹತ್ತಿದೆ.  ಬೇರೆ ಕಡೆ ಮನೆ ಮಾಡಿ ಅದಕ್ಕೆ ತಿಂಗಳ ಬಾಡಿಗೆ ಕಟ್ಟುವುದು ತಪ್ಪಿತಲ್ಲ ಅನ್ನುವ ಸಮಧಾನ ಎಲ್ಲರಿಗೂ, ಮುಳುಗುತ್ತಿದವನಿಗೆ ಹುಲ್ಲು ಕಡ್ಡಿಯ ಆಸೆಯ ಹಾಗಿತ್ತು ಪರಿಸ್ಥಿತಿ . ಮನೆಯಲ್ಲಿ ಇದ್ದದ್ದೆ ಮೂರು ಮತ್ತೊಂದು ಸಾಮಾನು ಎಲ್ಲವನ್ನು ಒಂದು ಮರದ ಗಾಡಿಯಲ್ಲಿ ಹೇರಿಕೊಂಡು ಒಂದೆ ಸಲಕ್ಕೆ ಸಾಗಿಸಿದ್ದು ಆಗಿದೆ, ಗೌರಮ್ಮನಿಗೆ ಒಂದೆ ಚಿಂತೆ ಅವರಿಗೆ ಸಿಕ್ಕ ಆ ಪುಟ್ಟಮನೆಯಲ್ಲಿ ಒಂದು ಹಜಾರದಂತ ಹೆಂಚಿನ ಒಸಾರ ಬಿಟ್ಟರೆ ಏನು ಇಲ್ಲ … ಅದರಲ್ಲೆ ಅಡುಗೆ ಮಾಡಬೇಕು, ಎಲ್ಲರೂ ಮಲಗ ಬೇಕು. ಕೊನೆಗೆ ಒಂದು ಗೋಣಿ ಪರದೆ ಹೊಲೆದು ಅಡುಗೆ ಮನೆ ಮಾಡಿಕೊಂಡಾಯಿತು, ಪಾತ್ರೆ ಪಗಡೆ ಇಡಲು ಗೊಡೆಗೆ ಮೊಳೆ ಹೊಡೆದು ಹಲಗೆ ಹಾಸಿದ್ದಾಯಿತು, ಅಮ್ಮನ ಮನಸಿಗು ಕೊಂಚ ನೆಮ್ಮದಿಯಾಯಿತು.             

   ಬೆಳಗ್ಗೆ ಎದ್ದೊಡನೆ ಶುರುವಾದವು ಹೊಲ ಹಸನು ಮಾಡುವ ಕೆಲಸಗಳು …. ಜಾಸ್ತಿ ಕಾಯುವ ಹಾಗಿಲ್ಲ ಬೇಗ ಕಟಾವಿಗೆ ಬರುವ ಬೆಳೆಗಳನ್ನ ಹಾಕಬೇಕು, ಇವರ ಜೀವನಕಲ್ಲದೆ ಹಣ ಬೇಕು ಮತ್ತೆ ಜಮೀನಿನವನಿಗೂ ಹಣ ಕಟ್ಟ ಬೇಕು. ಭೂಮಿಯನ್ನ ನೋಡಿದರೆ ಉಳುಮೆ ಕಂಡು ಶತಮಾನಗಳಾದ  ಪರಿಸ್ಥಿಯಲ್ಲಿದೆ. ಎಲ್ಲಿಂದ ಎಲ್ಲಿಗೆ ನೋಡಿದರು ನಿತ್ಯಹರಿದ್ವರ್ಣ ಕಾಡಿನ ಹಾಗೆ ಕಾಂಗ್ರೆಸ್ ಗಿಡಗಳೂ ಬೆಳೆದು ನಿಂತಿವೆ , ಅವುಗಳಿಂದ ಉದುರಿರುವ ಬೀಜ ಇನ್ನೂ ಎರಡು ಜನ್ಮಕ್ಕೆ ಆಗೊವಷ್ಟಿವೆ. ಅದರ ಜೋತೆ ಅಲ್ಲಲ್ಲಿ ಮುಳ್ಳಿನ ಪೋದೆಗಳು, ಗರಿಕೆ,ತುಂಗೆ ಹುಲ್ಲಂತು ನೆಲ ಕಾಣದ ಹಾಗೆ  ಆವರಿಕೊಂಡಿದೆ.ಕೆಲಸ ಶುಋವಾಗಿ  ದಿನದಿಂದ ದಿನಕ್ಕೆ ಜಮೀನು ಹಸನಾಗುತ್ತಾಹೊಯತು, ಬೇಳೆ ಹಾಕುವ ಹಂತಕ್ಕೆ ತರೊಷ್ಟರಲ್ಲಿ ಸಾಕು ಸಾಕಾಗಿ ಹೊಗಿತ್ತು ಮನೆಯವರಿಗೆಲ್ಲ. ಪುಣ್ಯಕ್ಕೆ ಅವರಿಗೆ ನೀರಿನ  ಕೊರತೆ ಇರಲಿಲ್ಲ ಇದ್ದ ಕೊಳ್ವೆ ಬಾವಿಯಲ್ಲಿ  ಯತ್ತೆಚ್ಚವಾಗಿ ನೀರಿತ್ತು. ಮದ್ಯ ಮದ್ಯದಲ್ಲಿ ಮೂರು – ನಾಲ್ಕು ವರ್ಷಗಳಷ್ಟು ವಯಸ್ಸಾದ ತೆಂಗಿನ ಮರಗಳು. ಆಷ್ಟಾಗಿ ಇನ್ನೂ ಚಾಚಿಕೊಂಡಿಲ್ಲವಾದ್ದರಿಂದ ಬೆಸಿಲು ನೇರವಾಗಿ ಬಿಳುತಿತ್ತು, ತರಕಾರಿ ಬೆಳೆಗಳಿಗೆ ಯೊಗ್ಯವಾದ ವಾತವರಣವಿತ್ತು.

   ಮನೆಯಲ್ಲಿದವರು ೫ ಜನ ವೆಂಕಪ್ಪ ,ಗೌರಮ್ಮ, ವೆಂಕಪ್ಪನ ಚಿಕ್ಕಪ್ಪ ಮತ್ತು ಮಕ್ಕಳಿಬ್ಬರು. ದೊಡ್ಡವನು ಸೀನು ೫ನೇ ಕ್ಲಾಸು, ಕಿರಿಯವಳು ರಂಜು ೧ ನೇ ಕ್ಲಾಸು. ಇಬ್ಬರು ೩ ಮೈಲಿ ನಡೆದು ಹೋಗಿ ಶಾಲೆ ತಲುಪಬಹುದು. ಇಲ್ಲಾ ಮುಕ್ಕಾಲು ಮೈಲಿ ನಡೆದರೆ ಸೀಗೆಹಳ್ಳಿ,  ಅಲ್ಲಿಂದ ಬಸ್ಸು ಹಿಡಿಯಬಹುದು.

ಮನೆಯ ಹಿರಿಯ ಜೀವ ಮಾರಪ್ಪನಿಗೆ ಮಕ್ಕಳಿಲ್ಲ … ಹೆಂಡತಿ ಸತ್ತು ಹತ್ತಾರು ವರ್ಷಗಳೆ ಆದವು, ತನ್ನ ಅಣ್ಣನ ಮಗ ವೆಂಕಪ್ಪನ , ಮೊಮ್ಮಕ್ಕಳನ್ನು ಕಂಡರೆ ಪ್ರೀತಿ ಅವನಿಗೆ . ಅವನ ವಯಸ್ಸಿಗೆ ಮೀರಿದ ಕೆಲಸಮಾಡುವ ಅಸಾದ್ಯ ಜೀವ, ಸೂಮಾರು ೭೫-೮೦ ವರ್ಷಗಳಾಗಿದ್ದರು ಗುದ್ದಲಿ ಹಿಡಿದು ನಿಂತರೆ …. ಸಂಜೆ ಆಗೊದೆ ಗೊತ್ತಾಗುತಿರಲಿಲ್ಲ, ಆ ಮನೆಯಲ್ಲಿ ಎಲ್ಲರೂ ಹಾಗೆ ಬೆಳೆದವರೆ. ಎಲ್ಲರಿಗೂ ವ್ಯವಸಾಯದ ಎಲ್ಲ ವಿದ್ಯೆಯು ಕರಗತವಾಗಿದೆ, ಆದರೆ ದುಡಿಯಲು ಸ್ವಂತ ಭೂಮಿಯಿಲ್ಲ…  ಹಣ ಬಲವಿಲ್ಲ ದುಡಿಯುವ ಶಕ್ತಿ ಇತ್ತು.

   ವೆಂಕಪ್ಪ ಓದಿದ್ದು ಎಂಟನೇ ಕ್ಲಾಸಾದರು ಪ್ರಪಂಚ ತಿರುಗಿದ ಅನುಭವ ಅವನಿಗೆ, ಬದುಕು ಅನ್ನುವುದು ಏನು ಅನ್ನೊದನ್ನ ಕಲಿಸಿತ್ತು, ಗೌರಮ್ಮ ಓದಿದವಳಲ್ಲವಾದರು ನಾಜುಕಾಗಿ ಸಂಸಾಸ ತೂಗಿಸಿಕೊಂಡು ಹೊಗುವಂತವಳು. ಗಂಡನನ್ನ ವಡವೆಗಾಗಿ ಮತ್ಯಾವುದಕ್ಕಾಗಲಿ ಪಿಡಿಸಿದವಳಲ್ಲ , ನಮಗೂ ಒಂದು ಕಾಲ ಬರುತ್ತೆ ನಾವು ಎಲ್ಲರಂತೆ ಚಂದಾಗಿ ಆಗ್ತೆವೆ ಅನ್ನೊ ಕನಸನ್ನ ಕಟ್ಟಿ ನೆಮ್ಮದಿಯಾಗಿದ್ದಾಳೆ. ಮಕ್ಕಳಿಬ್ಬರು ಓದಿನಲ್ಲಿ ಪರವಾಗಿಲ್ಲ, ಸಾದಾರಣ ಬುದ್ದಿವಂತರು, ಸೀನು ಓದುವುದರ ಜೊತೆ ತೋಟದ ಕೆಲಸದಲ್ಲು ಬಾಗಿಯಾಗ್ತಾನೆ.

   ರಂಜು ತುಂಬಾ ಚಿಕ್ಕವಳಾದರಿಂದ ಮನೆಯ ಪರಿಸ್ಥಿತಿ ಅವಳಿಗೆ ಅಷ್ಟಾಗಿ ತಿಳಿಯದು,ಆದರೆ ಇವನಿಗೆ ಎಲ್ಲದರ ಅರಿವಿದೆ. ಮೊದಲು ದೊಡ್ದಪ್ಪನ ಮನೆಯಲ್ಲಿ ಇದ್ದಾಗ ಅವರ ಪರಿಸ್ಥಿತಿ, ಅವರು ಅನುಭವಿಸಿದ ಅನುಮಾನ, ಮತ್ತೆ ಮಲ ಅತ್ತೆ ಅಮ್ಮನನ್ನ ನಡೆಸಿಕೊಂದ ರೀತಿ ಎಲ್ಲವೂ ಅವನ ಕಣ್ಣಿಗೆ ಕಟ್ಟಿದ ಹಾಗೆ ಇದೆ. ಮನೆಯವರೆಲ್ಲರು ದೊಡ್ಡಪ್ಪನ ಮನೆಯಿಂದ ಇದ್ದಕಿದ್ದಹಾಗೆ ಬರಿಗೈಲಿ ಹೊರ ಬಂದಾಗ ಎಲ್ಲರಿಗೂ ದಿಗ್ಭಾಂತಿಯಾಗಿತ್ತು. ಮುಂದಿನ ಗತಿಯೆನು , ಹೇಗೆ ಬದುಕೋದು …. ದೂಡಿಯುವ ಕೈಗಳಿವೆ ಆದರೆ ಕೆಲಸವಿಲ್ಲ ಅಂತ. ಆದರೆ ವೆಂಕಪ್ಪನ ಜೊತೆ ಇದ್ದ ಗೆಳೆಯರು ಎಂದು ಕೈಬಿಡಲಿಲ್ಲ, ಒಂದಷ್ಟು ಜನ ನಮ್ಮ ಮನೆಗೆ ಬಾ , ಇಲ್ಲೆ ಇದ್ದುಕೊ ಅಂದರು ಮತ್ತೆ ಕೆಲವರು ನಮ್ಮ ಹೊಲ ಸ್ವಲ್ಪ ಬಿಟ್ಟುಕೊಡ್ತೆವೆ ಇಲ್ಲಿಗೆ ಬಾ ಅಂತ ಕರೆದರು . ಕೊನೆಗೆ ಸ್ವಾಭಿಮಾನಿ ವೆಂಕಪ್ಪ ಯಾವುದನ್ನು ಒಪ್ಪದೆ ಕೊನೆಗೆ ಅವರ ನೆರವಿನಿಂದ ಈ ಭೂಮಿಯನ್ನ ಗುತ್ತಿಗೆಗೆ ಪಡೆದದ್ದಾಗಿತ್ತು.

   ಜೀವನ ಸಾಗಿಸಲು ಸಾಕಷ್ಟು ದುಡ್ಡಿಲ್ಲದಿದ್ದರು ಊಟ ಉಪಚಾರಕ್ಕೆ ಆಗುವಷ್ಟಾದರು ದುಡಿಯಲೇ ಬೆಕಿತ್ತು. ತೋಟದಲ್ಲಿ ನಾಟಿಯಾಗಿದ್ದ ಫಸಲು ಕಟಾವಿಗೆ ಬರಲು ಇನ್ನೂ ಒಂದುವರೆ ತಿಂಗಳಾದರು ಬೇಕು. ಬೇಳೆ ಚನ್ನಾಗಿ ಕೈಯಿಗೆ ಬಂದು , ಒಳ್ಳೆ ಬೆಲೆ ಸಿಕ್ಕರೆ ಎಲ್ಲ ಬವಣೆಗಳು ಸ್ವಲ್ಪಮಟ್ಟಿಗಾದರು ಸುದಾರಿಸುತ್ತದೆ ಅಂತ ಹಗಲು ರಾತ್ರಿ ಒಂದು ಮಾಡಿ ಮನೆಯವರೆಲ್ಲ ದುಡಿಯುತ್ತಿದ್ದರು. ಮನೆಯ ಪರಿಸ್ಥಿತಿ ಏನೇ ಇದ್ದರು ಬೆಳೆಯುವ ಮಕ್ಕಳನ ಚನ್ನಾಗಿ ಸಾಕಬೇಕು, ನಾವು ಉಪವಾಸ ವಿದ್ದರು ಅವರ ಹೊಟ್ಟೆ ತುಂಬಿಸ ಬೇಕು ಅಂತ ಗಂಡ- ಹೆಂಡತಿ ಹೆಣಗಾಡುತಿದ್ದರು. ಹಾಲು ಕೊಂಡರು ತಿಂಗಳಿಗೆ ಇಂತಿಷ್ಟು ಹಣ ಬೆಕಲ್ಲ ಎಲ್ಲಿಂದ ಬರುತ್ತೆ  ಅನ್ನುವ ಚಿಂತೆ. ಈ ಪರಿಸ್ಥಿತಿ ಅರಿತಿದ್ದ ಯಜಮಾನ್ ತಿಮ್ಮಯನರು ವೆಂಕಪ್ಪನನ್ನ ಬಹಳ ದಿನಗಳಿಂದ ಬಲ್ಲವರು. ಅಲ್ಲೆ ಸೀಗೆ ಹಳ್ಳಿಯಿಂದ ೪ ಮೈಲಿ ದೂರಕ್ಕೆ ಮಾದಾಪುರದ ಬಳಿ ಅವರ ದೊಡ್ಡ ತೋಟ, ಅಲ್ಲೆ ಮನೆ ಕಟ್ಟಿ ಕೊಂಡು ವಾಸವಿದ್ದಾರೆ. ಶ್ರೀಮಂತಿಕೆಯ ದರ್ಪ- ಅಹಂಕಾರ ಅವರ ವ್ಯಕ್ತಿತ್ವದಲ್ಲೆ ಸುಳಿದಿಲ್ಲ.  ವೆಂಕಪ್ಪನ ಶ್ರದ್ದೆ ಮತ್ತು ಕೆಲಸದ ಬಗ್ಗೆ ತೋರುವ ಕಾಳಜಿ ಯಿಂದ ಪ್ರಭಾವಿತವಾದವರು.  ವೆಂಕಪ್ಪನನ್ನ ಸೀಗೆಹಳ್ಳಿಯಲ್ಲಿ ಕಂಡು ನಾಳೆಯಿಂದ ನನ್ನ ಮನೆಗೆ ಬಂದು ಹಾಲು ತಗಂಡು ಹೋಗು ಒಳ್ಳೆ ಕರಾವಿದೆ, ನಿನ್ನ ಮನೆಯಲ್ಲಿ ಮಕ್ಕಳು ಮರಿ ಅವೆ ಕುಡಿತವೆ ಅಂದಾಗ ಅವರ ಮಾತನ್ನ ತೆಗೆದು ಹಾಕಲಾಗದೆ ಒಪ್ಪುಕೊಂಡಿದ್ದ.

   ಮನೆಯಲ್ಲಿದ್ದ ಸೈಕಲ್ ಹಿಡಿದು ದಿನ ಬೆಳಗ್ಗೆ ೫ ಮೈಲಿ ದೂರ ಸಾಗಿ ಹಾಲುತರುವುದು ಸೀನುವಿನ ದಿನಚರಿಯಾಯಿತು. ಮುಕ್ಕಾಲು ಮೈಲಿ ಮಣ್ಣಿನ ರಸ್ತೆಯಲ್ಲಿ ಸಾಗಿದರೆ ಸೀಗೆಹಳ್ಳಿ, ಅಲ್ಲಿಂದ ಡಾಂಬರು ರಸ್ತೆ.  ಕೀರಿದಾದ ಓಣಿಯಂತಿದ್ದ ರಸ್ತೆಯಲ್ಲಿ ಒಂದು ಲಾರಿನೋ ಬಸ್ಸೊ ಬಂದರೆ ಮುಗಿಯಿತು ಬಾಕಿಯವರೆಲ್ಲ ರಸ್ತೆಯ ಇಕ್ಕೆಲಗಳಲ್ಲಿ. ದಿನಾ ಒಂದು-ಒಂದುವರೆ ತಾಸು ಸೈಕಲ್ ತುಳಿಯಬೇಕು ಹಾಲು ತರಲು ಮತ್ತೆ ರಂಜು ಕರಕೊಂಡು ಶಾಲೆಗೆ ಹೋಗೊದು.

   ಹೊಲದಲ್ಲಿ ನಾಟಿಯಾಗಿದ್ದ ಬೆಳೆ ಬಂದಿತ್ತು ಹಾಗಾಗಿ ಅದನ್ನ ಮಾರುಕಟ್ಟೆಗೆ ಒಯ್ದು ಮಾರಿಕೊಂಡುಬರುವ ಕೆಲಸ ಅಪ್ಪನಿಗೆ ಬಿದ್ದಿತ್ತು. ಒಂದೊಂದು ದಿನ ಸೈಕಲ್ ಸಿಗುತ್ತಿರಲಿಲ್ಲ, ಆಗ ಸೀಗೆ ಹಳ್ಳಿತನಕ ನಡೆದು ಅಲ್ಲಿಂದ ಬಾಡಿಗೆಗೆ ಸೈಕಲ್ ಪಡೆದು ಹಾಲು ತರುವುದು ರೂಡಿ. ಒಂದು ಗಂಟೆಗೆ ೫೦ ಪೈಸೆ ಬಾಡಿಗೆ, ಬೇಗ ಹೋಗಿ ಬಂದರೆ ಹತ್ತು ಪೈಸೆಯಾದರು ಊಳಿಸಬಹುದೆಂದು ಸೀನು ಅವಸರದಲ್ಲಿ ತುಳಿದು ಬೇಗ  ತಲುಪುತಿದ್ದ, ಉಳಿಸಿದ ೧೦ ಪೈಸೆ ನಾಳಿನ ಬಾಡಿಗೆಗೆ ತೆಗೆದಿರಿಸುವುದು ಹೀಗೆ ಸಾಗಿತ್ತು . ಒಂದು ಬೆಳಗ್ಗೆ ಎಂದಿನಂತೆ ಎದ್ದು ಹಾಲುತರಲು ಹೊರಟಾಗ ಅಮ್ಮ ಸೈಕಲ್ ಬಾಡಿಗೆಗೆ ಕಾಸು ಕೋಡಲು ಹುಡುಕುತ್ತಿದ್ದಳು. ಅಡುಗೆ ಮನೆಯ ಡಬ್ಬ ಡಬ್ಬಗಲೆಲ್ಲ ತಡಕಾಡಿದ್ದಾಗಿದೆ ,ಹಾಗೆ ಪಾತ್ರೆಗಳ ಸಂದಿಗಳಲ್ಲಿ, ದೇವರ ಫೋಟೊ ಹಿಂದೆ, ಕೊನೆಗೂ ೫೦ ಪೈಸೆಯೂ ಸಿಗಲಿಲ್ಲ ಅವಳಿಗೆ…….

 
ಯಾವಾಗ ಬರೆದದ್ದು.

ಈ ತಿಂಗಳ ಪಂಚಾಂಗ.

ಜುಲೈ 2018
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
« ಡಿಸೆ    
 1
2345678
9101112131415
16171819202122
23242526272829
3031  

p

Powered by eSnips.com
Advertisements