Archive Page 2

12
ಮೇ
08

ನನ್ನಮ್ಮ.

ಮೊನ್ನೆ ಚುಣಾವಣೆಯಂದು ಸೊಂಟದ ಮೇಲೆ ಕೈ ಹಾಕೊಂಡು ಮತ ಹಾಕಲು ಸಾಲುಗಟ್ಟಿ ನಿಂತಿದ್ದೆ, ನನ್ನ ಮುಂದಿನ ಸರದಿಯಲ್ಲಿ ಅಮ್ಮ. ಹೆಸರು ಗುರುತಿನ ಚೀಟಿ ಪರೀಕ್ಷಿಸಿದ ಅಧಿಕಾರಿ ಕೆಂಪು ಬಣ್ಣದ ಹಾಳೆಯ ಮೇಲೆ ಚೌಕದಲ್ಲಿ ಅಡಗಿದ್ದ ಸಂಖ್ಯೆಯೊಂದಕ್ಕೆ ಸೊನ್ನೆ ಸುತ್ತಿ ಗುರುತಿಸಿಕೊಳ್ಳುತ್ತ ಅಮ್ಮನನ್ನ ಮುಂದಿನ ಅಧಿಕಾರಿಯತ್ತ ಕಳುಹಿಸಿದ. ಅಮ್ಮನ ಹೆಸರಿದ್ದ ಹಾಳೆಯನ್ನ ಹುಡುಕಿದ ಅವನು ಸಹಿಮಾಡುವ ಜಾಗವನ್ನ ತೋರಿಸುತ್ತಿದ್ದ, ಹಿಂದೆ ನಿಂತ ನಾನು ಗುರುತಿನ ಚೀಟಿಯನ್ನ ತೋರಿಸುತ್ತಿದ್ದೆ, ಸೌಟು ಹಿಡಿದು ತನ್ನ ಅಡುಗೆಯ ಮನೆಯನ್ನ ಆಳುತಿದ್ದ ಅಮ್ಮ ಅಪರೂಪಕ್ಕೆ ಪೆನ್ನು ಹಿಡಿದಿದ್ದಳು. ತಾನು ಕಲಿತ ಅಕ್ಷರಗಳನ್ನೆಲ್ಲ ಜೋಡಿಸಿ ತನ್ನ ಹೆಸರು ಬರೆಯುತ್ತಿದ್ದಳು, ಹಿಂದೆ ಕುತೂಹಲದಿಂದ ಗಮನಿಸುತ್ತಿದ್ದ ನನಗೆ ಆದ ಖುಷಿ ಅಷ್ಟಿಷ್ಟಲ್ಲ. ನನಗೂ ಸರಿಯಾಗಿ ನೆನಪಿಲ್ಲ ಎಳೆಂಟು ವರ್ಷಗಳ ಹಿಂದಿನ ಮಾತು, ಪುಟ್ಟ ಮಗುವಿಗೆ ಅಕ್ಷರಗಳನ್ನ ತಿದ್ದಿಸುವ ಪರಿಯಲ್ಲಿ, ಅಮ್ಮನ್ನ ಕೈಯಲ್ಲಿ ಪೆನ್ನು ಹಿಡಿಸಿ ಅವಳಿಗೆ ಬ್ರಹ್ಮಾಂಡದಂತಿದ್ದ ಅಕ್ಷರಗಳನ್ನ ತಿದ್ದಿಸಿದ್ದು. ಪಕ್ಕದಲ್ಲಿ ಕುಳಿತು ಅದರ ಮೇಲ್ವಿಚಾರಣೆ ವಹಿಸಿದ್ದ ತಂಗಿ, ಅಮ್ಮ ತಿದ್ದುವೆಕೆಯಲ್ಲಿ ತಪ್ಪು ಮಾಡಿದಾಗ ನನ್ನ ಬಳಿ ಅದನ್ನೆಲ್ಲ ಒಪ್ಪಿಸುತ್ತಾ, ಅಮ್ಮ ಒಂದೊಂದು ಸಾರಿ ತಿದ್ದಿದಾಗಲು ತಾನೆ ಹೊಸ ಹೊಸ ಅಕ್ಷರಗಳನ್ನ ಕಲಿತಷ್ಟು ಸಂಭ್ರಮಿಸಿದ್ದಳು.

ತನ್ನ ಅಡುಗೆ ಮನೆಯ ರಾಜ್ಯಭಾರವನ್ನ ಬದಿಗಿಟ್ಟು ಸಮರೋಪಾದಿಯಲ್ಲಿ ಅಕ್ಷರಾಭ್ಯಾಸದಲ್ಲಿ ತೋಡಗಿದ್ದ ಅಮ್ಮನನ್ನ ಕುತೂಹಲದಿಂದ ಗಮನಿಸುತ್ತಿದ್ದ ಅಪ್ಪ, ನಿಮ್ಮಮ್ಮ ಮುಂದಿನ ವರ್ಷ ಕಾಲೇಜ್ ಸೇರ್ಕೊತಾಳಾ ಕೇಳೊ ಎಂದು ರೇಗಿಸಿದ್ದಕ್ಕೆ, ನಿಮ್ಮಪ್ಪನಿಗೆ ಅವಾಗಲೆ ಹೆದರಿಕೆ ಶುರುವಾಗಿರೊ ಹಾಗಿದೆ, ಎಲ್ಲಿ ನಾನೇ ಅಡುಗೆ ಮಾಡ್ಬೇಕಾಗುತ್ತೊ ಅಂತ ಕಣೋ ಎನ್ನುತ್ತ ಅಪ್ಪನ್ನನ್ನ ಬೆಚ್ಚಿಸಿದ್ದಳು. ಮತ್ತೆ ಅಮ್ಮ ಎಷ್ಟು ಕಲಿತಳು? ಏನು ಕಥೆ? ಅನ್ನೊ ಬಗ್ಗೆ ಗಮನಿಸಿರಲಿಲ್ಲ ಅಥವಾ ಅಂತ ಸಂದರ್ಭಗಳು ಬಂದಿರಲಿಲ್ಲ ಅನ್ನಬಹುದು, ಅದರೂ ಅಮ್ಮ ನಾಲ್ಕು ಅಕ್ಷರದ ಅವಳ ಹೆಸರನ್ನು ಬರೆಯುವ ಬ್ರಹ್ಮವಿದ್ಯೆ ಕಲಿತು ಅದನ್ನ ಪ್ರಯೋಗಿಸಿದ್ದನ್ನು ಕಂಡು ಉಬ್ಬಿಹೋದದಂತು ನಿಜ…. 🙂

Advertisements
06
ಮೇ
08

ಮುಸ್ಸಂಜೆಯ ಮಂದ ಬೆಳಕಿನಲ್ಲಿ ಗಝಲ್ಗಳ ಘಮ ಘಮ.

ಆಗ ತಾನೆ ತಿಣುಕಾಡಿ ಪಿ ಯು ಸಿ ಮುಗಿಸಿ ಡಿಪ್ಲಮೊ ಸೇರಿದ್ದೆ, ಯೋಗ ಕ್ಲಾಸಿನಲ್ಲಿ ಆಗಾಗ ಕೇಳಲು ಸಿಗುತ್ತಿದ್ದ ಭಜನ್ಗಳಿಂದ ತುಂಬಾ ಪ್ರಭಾವಿತನಾಗಿದ್ದೆ, ಯಾರು ಹಾಡಿರಬಹುದು? ಯಾವ ಆಲ್ಬಮ್? ಅಂತೆಲ್ಲಾ ಸಾಕಷ್ಟು ಕುತೂಹಲವಿದ್ದರು, ಅವರಲ್ಲಿ ಕೇಳಿ ತಿಳಿಯಬಹುದೆಂಬ ಸಾಮಾನ್ಯ ಸಂಗತಿ ಆಗ ತಿಳಿಯಲಿಲ್ಲ. ನಂತರ ದಿನಗಳಲ್ಲಿ ತಿಳಿದದ್ದು ಆ ಭಜನ್ಗಳು ಜಗಜೀತ್ ಸಿಂಗ್ ಅವರು ಹಾಡಿರುವ “ಮಾ” ಎಂಬ ಧ್ವನಿ ಸುರಳಿಯಲ್ಲಿದೆ ಎಂದು. ಈ ಸಂಗ್ರಹದಲ್ಲಿ ಅದ್ಬುತವಾದ ಎಂಟು ಭಜನ್ಗಳಿವೆ ಅದರಲ್ಲಿ “ಆನಂದ ಮಯೀ” ಎಂಥವರನ್ನು ಮಂತ್ರಮುಗ್ಧರನ್ನಾಗಿಸದೆ ಇರದು. ಹೀಗೆ ನನಗೆ ಪರಿಚಿತವಾದವರೆ ಗಝಲ್ ಕ್ಷೇತ್ರದ ದಿಗ್ಗಜ ಜಗಜೀತ್ ಸಿಂಗರು.

ಮೊನ್ನೆ ಮುಸ್ಸಂಜೆಯ ಮಂದ ಬೆಳಕಿನಲಿ ನನ್ನ ಹೊಸ mp3 ಪ್ಲೇಯರ್ ನಲ್ಲಿ ಒಂದಷ್ಟು ಗಝಲ್ಗಳನ್ನ ತುಂಬಿಕೊಂಡು ಕೇಳುತಿದ್ದರೆ ಮನವೆಲ್ಲ ಬೆಚ್ಚಗಿತ್ತು. ಅದರಲ್ಲು ಸಿಲ್ಸಿಲೆ ಮತ್ತು ಸಹೇರ್ ಸಂಗ್ರಹಗಳನ್ನ ಕೇಳೊವಾಗಿನ ಮಜವೇ ಬೇರೆ. ಮನದ ಭಾವನೆಗಳನ್ನ ಕೆಲವೆ ಪದಗಳಲ್ಲಿ ಕಟ್ಟಿಕೊಡಬಲ್ಲ ಗಝಲ್ಗಳನ್ನ ಅತ್ಯಂತ ಶ್ರೀಮಂತ ಸಾಹಿತ್ಯ ಪ್ರಕಾರ ಅನ್ನಬಹುದು. ಸಾಮಾನ್ಯವಾಗಿ ಗಝಲ್ಗಳು ದುಗುಡ ದುಮ್ಮಾನುಗಳ ನಡುವೆಯೆ ಹೆಚ್ಚು ಸುಳಿದಾಡುತ್ತವೆ ಅನ್ನುವ ಅಪವಾದವು ಇದೆ, ಗಝಲ್ಗಳನ್ನ ಮುದ ನೀಡುವ ಸಂಗೀತದೊಂದಿಗೆ ಕೇಳಿ ಆನಂದಿಸುವ ಮನವು ಪ್ರಫುಲ್ಲವಾದದೆ ಇರದು. ನಾವು ಕಾವ್ಯ ಭಾಷೆಯಲ್ಲಿ ಸಂಸ್ಕೃತದ ಪದಗಳನ್ನ ಹೇಗೆ ಬಳಸುತ್ತಿವೊ ಹಾಗೆ ಹಿಂದಿಯ ಜೊತೆ ಉರ್ದುವಿನ ಪದಗಳ ಬಳಕೆ ಈ ಗಝಲ್ಗಳಲ್ಲಿ ಕಾಣಬಹುದು. ಉದಾಹರಣೆಗೆ “ಕೂದಲು” ಅನ್ನುವ ಬದಲು “ಕೇಶರಾಶಿ” ಎಂದು ಬಳಸುವಹಾಗೆ, ಅಲ್ಲಿ “ಬಾಲ್” ಅನ್ನೊ ಬದಲು “ಜ್ಯೂಲ್ಫೆ” ಅಂತ ಬಳಸುತ್ತಾರೆ.

ನನ್ನನ್ನ ಕಾಡಿದ ಮತ್ತೊಂದು ಭಜನ್ ಶೃತಿ ಸಡೊಲಿಕರ್ ಅವರ ಕಂಠದಲ್ಲಿ “ಆರತಿ ಕೀಜೆ ಶೈಲಸುತಾ ಕೀ”, ನಿಮಗೂ ಹಿಡಿಸ ಬಹುದು.

25
ಏಪ್ರಿಲ್
08

ಚುಣಾವಣೆ ಎಂಬ ಅಖಾಡದ ಹೊಸ್ತಿಲಲ್ಲಿ.

ಈ ಬಾರಿ ಬೇಸಿಗೆಯ ಜಳಪಿನ ಜೊತೆಗೆ ಕಾವೇರಿದ ಸಂಗತಿಗಳು ಹಲವಾರು. ಮುಗಿಲು ಮುಟ್ಟಿದ ದಿನಸಿ ಹಣ್ಣು ತರಕಾರಿಗಳ ಬೆಲೆಗಳು ನಮ್ಮ ಮನೆಗಳ ತಿಂಗಳ ಬಜೆಟ್ಟಿನ ಚೌಕಟ್ಟನ್ನು ದಾಟಿ ಸಾಮಾನ್ಯ ಜನರ ಜೀವನದಲ್ಲಿ ಏರುಪೇರು ಮಾಡಿರೋದಂತು ನಿಜ. ಕಡು ಬಿಸಿಲು ಕಣ್ಣು ಬಿಚ್ಚಿ ಎಲ್ಲೆಡೆ ಆವರಿಸಿಕೊಳ್ಳುವ ರಥಸಪ್ತಮಿಯ ಹೊತ್ತಿಗೆ ಮೋಡ ಕಟ್ಟಿ ಗುಡುಗು ಮಿಂಚಿನೊಂದಿಗೆ ಧರೆಗಿಳಿದ ಅಕಾಲಿಕ ಮಳೆರಾಯ ನಗರವಾಸಿಗಳಿಗೆ ಒಂದಷ್ಟು ತಂಪನೆರೆದನಾದರೂ, ಅತ್ತ ಕೃಷಿಕನ ಹಗಲು ರಾತ್ರಿಗಳ ಪರಿಶ್ರಮದಿಂದ ನಳನಳಿಸುತ್ತಿದ್ದ ಬೆಳೆಗಳು ನೀರು ಪಾಲಾದದ್ದು ಮತ್ತೊಂದು ದುರಂತ. ಉತ್ತರ ಕರ್ನಾಟಕದ ಕಡೆ ದ್ರಾಕ್ಷಿ, ಬೆಣಸಿನಕಾಯಿ ಇತ್ತ ದಕ್ಷಿಣದಲ್ಲಿ ಮಾವು ಮತ್ತು ಒಕ್ಕಣೆಯ ದವಸ ದಾನ್ಯಗಳು ನೆಲೆಕಚ್ಚಿದವು. ಇದೆಲ್ಲದರ ನಡುವೆ ಮತ್ತೊಮ್ಮೆ “ಚಿಕನ್ ಗುನ್ಯ” ಜ್ವರ ಮತ್ತೆ ಘಟ್ಟ ಪ್ರದೇಶಗಳಲ್ಲಿ ಕಾಣಿಸಿಕೊಂಡಿರುವ ಸುದ್ದಿ ಬಂದಿದೆ. ಕಳೆದ ವರ್ಷ ಗ್ರಾಮೀಣರ ಬದುಕನ್ನು ಹಿಂಡಿ ಹಿಪ್ಪೆ ಮಾಡಿದ್ದ “ಚಿಕನ್ ಗುನ್ಯ” ಮತ್ತೆ ಎಲ್ಲರ ನಿದ್ದೆ ಕೆಡಿಸುವ ಹೊಸ್ತಿಲಲ್ಲಿದೆ. ಮೊನ್ನೆ ಪತ್ರಿಕೆಗಳಲ್ಲಿ ಬಂದ ಸುದ್ದಿಯ ಪ್ರಕಾರ ಸುಳ್ಯದ ಸುತ್ತಮುತ್ತಲಿನ ಐದು ಜನರಿಗೆ “ಚಿಕನ್ ಗುನ್ಯ” ಬಂದಿರುವುದು ಖಾತರಿಯಾಗಿದೆ.

ಯಾಕೊ ಗೊತ್ತಿಲ್ಲ ಈ ಬಾರಿಯ ಚುಣಾವಣೆಯ ಬಗ್ಗೆ ನನ್ಗೆ ಅಷ್ಟು ಒಲವಿಲ್ಲ, ನನ್ನೊಬ್ಬನ ಪರಿಸ್ಥಿತಿಯೊ ಅಥವ ಇನ್ನೂ ಹಲವರದ್ದೊ ಗೊತ್ತಿಲ್ಲ. ಮೊದಲಾದರೆ ಯಾರು ಗೆಲ್ಲ ಬಹುದು? ಮತ್ತೇನು ಹೊಸ ಹೊಸ ಕೆಲಗಳನ್ನು ಮಾಡಿಯಾರು? ಎಂಬ ಕುತೂಹಲವಾದರು ಇರುತ್ತಿತ್ತು. ಈ ಬಾರಿಯೂ ಯಾವ ಪಕ್ಷಕ್ಕೂ ಪೂರ್ಣ ಬೆಂಬಲ ಬರುವ ನಿರೀಕ್ಷೆ ಅವರಿಗೂ ಇಲ್ಲ, ನನಗಂತು ಮೊದಲೆ ಇಲ್ಲ. ಮತ್ತೆ ಅದೆ ಹುಲಿ ಕುರಿಯಾಟ, ರೆಸಾರ್ಟು ರಾಜಕಾರಣ, ಇವತ್ತು ಒಬ್ಬರ ಮೇಲೊಬ್ಬರು ಕತ್ತಿ ಮಸೆಯುತ್ತಿರುವವರು ನಾಳೆ ಪಕ್ಕನ ಕುರ್ಚಿಯಲ್ಲಿ ಕೂತು ಕಾಸು ಮಾಡುತ್ತಾರೆ. ಒಟ್ಟಿನಲ್ಲಿ ಗೌಡರ ಲೆಕ್ಕಾಚಾರ ಈ ಬಾರಿಯು ಸಾಗುವ ಲಕ್ಷಣಗಳೇ ಹೆಚ್ಚು. ಈ ಪರಿಸ್ಥಿಯ ನಡುವೆಯು ನಮ್ಮ ರವಿ ಕೃಷ್ಣಾ ರೆಡ್ಡಿಯಂತ ಸಾಫ್ಟ್ ವೇರ್ ಜೀವಿ ಅಮೇರಿಕಾದಿಂದ ನೇರ ಚುನಾವಣಾ ಅಖಾಡಕ್ಕೆ ದುಮುಕಿರುವುದು ಒಳ್ಳೆಯ ನಿರ್ಧಾರ, ಅವರಿಗೆ ಈ ಕೆಲಸದಲ್ಲಿ ಯಶಸ್ಸು ಸಿಗಲಿ. ಚುನಾವಣೆ ಸಮಯದಲ್ಲಿ ಮಾತ್ರ ಸಿಕ್ಕ ಸಿಕ್ಕವರಿಗೆ ಕೈಮುಗಿಯುತ್ತ ಪ್ರೀತಿ ವಿಶ್ವಾಸದ ಧಾರೆಯೆರೆಯುತ್ತಾ ಕಾಣಿಸಿಕೊಳ್ಳೊ ಜಿಡ್ಡುಗಟ್ಟಿದ ನಮ್ಮ ತಾತನ ಕಾಲದ ಪಳಯುಳಿಕೆಗಳು, ಆಗ ತಾನೆ ಜೈಲಿನಿಂದ ನೇರ ಚುನಾವಣಾ ಅಖಾಡಕ್ಕೆ ಇಳಿದು ರಾರಾಜಿಸುವ ಮಂದಿ, ಹಣ ಹೆಂಡ ತೋಳ್ಬಲವನ್ನೆ ಗೆಲ್ಲುವ ಕುದುರೆಯಾಗಿಸಿಕೊಂಡವರೆ ಸಾಮಾನ್ಯವಾಗಿ ಇರುತ್ತಿದ್ದರು. ಈ ಬಾರಿ ಚುಣಾವಣೆಗೆಯಲ್ಲಿ ಹೊಸ ತಳಿಗಳ ಜನ ಕೂಡ ಅಖಾಡಕ್ಕೆ ಇಳಿದಿದ್ದಾರೆ, ಅದರಲ್ಲಿ ಪ್ರಮುಖರು ಗಣಿಯ ಧಣಿಗಳು, ರಿಯಲ್ ಎಸ್ಟೇಟ್ ದೊರೆಗಳು, ಕೊನೆಗೆ ಕೆಲಸ ಮಾಡೊ ಮನಸ್ಸಿರೊ ಒಂದು ಮುಖವಾದರು ಕಾಣಿಸಿದರೆ ಸಾಕು. ಏನೇ ಆದರು ನಾನಂತು ಮೇ ೧೦ನೇ ತಾರೀಕು ನನ್ನ ಓಟು ಹಾಕೊದಂತು ಗ್ಯಾರಂಟಿ…. 🙂 ನೀವು ಬರ್ತಿರಾ ತಾನೆ?

“ಈ ಸಲವಾದರು ಒಂದು ಪಕ್ಷಕ್ಕೆ ಪೂರ್ಣ ಬೆಂಬಲ ಸಿಗಲಿ, ಸೂತ್ರದ ಗೊಂಬೆಯ ಪಾಡು ನಮ್ಮ ಸರ್ಕಾರಕ್ಕೆ ಬೇಡ.”

14
ಏಪ್ರಿಲ್
08

ಪಾಕಕ್ರಾಂತಿ ಮತ್ತು ತೇಜಸ್ವಿ.

ನಮ್ಮ ಹುಡುಗ ಶ್ರೀನಿಧಿ ಕಸ್ತೂರಿ ವಾಹಿನಿಯ ಪಾಲಾದ ಮೇಲೆ, ಅವನಿಂದ ಬರುತ್ತಿದ್ದ ಮೆಸೇಜುಗಳೆಲ್ಲ ಬ್ರೇಕಿಂಗ್ ನ್ಯೂಸುಗಳೆ. ಕುಮಾರಣ್ಣನ ರಾಜಿನಾಮೆ, ಯಡ್ಡಿಯ ಪ್ರಮಾಣವಚನ, ಗೌಡರ ಗದ್ದಲ ಹೀಗೆ ಸಾಗಿತ್ತು ಮೆಸೇಜುಗಳ ಹಾವಳಿ. ಮೊನ್ನೆ ಶುಕ್ರವಾರ ಮೊಬೈಲ್ ಸುದ್ದಿ ಪೆಟ್ಟಿಗೆಯಲ್ಲಿ ಬಂದು ಕುಳಿತಿದ್ದ ಸುದ್ದಿ ಓದಿ ಅರೆ ತೇಜಸ್ವಿ ಹೊಸ ಪುಸ್ತಕ ಬಂದಿದೆ ಅಂಕಿತದಲ್ಲಿ ತೊಗೊಂಡೆ ಎಂದು ಬರೆದಿದ್ದ. ಎಲಾ ಎಲಾ ಅಂದವನೆ ಫೋನಾಯಿಸಿದೆ ಆ ಕಡೆಯಿಂದ ಶ್ರೀ ಮಸ್ತ್ ಇದೆ ಮಗಾ, ಸಂಜೆ ಅಂಕಿತ ಕಡೆ ಆಫೀಸಿಂದ ಬರ್ತಾ ಹೊಗಿದ್ದೆ, ಪುಸ್ತಕ ಕಾಣಸ್ತು ಎತ್ತಾಕ್ಕೊಂಡು ಬಂದೆ ಎಂದು ನಕ್ಕ, ಕೊನೆಗೆ ದಿನಚರಿ ವಿಚಾರಿಸಿ ಮತ್ತೆ ಸಿಗುವ ಜೈ ಎಂದು ಫೋನಿಟ್ಟಾಯಿತು. ಸುದ್ದಿ ತಿಳಿದು ತಲೆಗೆ ಹುಳ ಬಿಟ್ಟ ಹಾಗೆ ಆದದ್ದು ದಿಟ, ಸುಮ್ಮನೆ ಇರುವುದಾರು ಹೇಗೆ? ಶನಿವಾರ ಬೆಳಗ್ಗೆಯೇ ಸಪ್ನಗೆ ನುಗ್ಗಿ “ಪಾಕಕ್ರಾಂತಿ ಮತ್ತು ಇತರ ಕಥೆಗಳು” ತಂದಾಗಿತ್ತು. ಆದರೆ ಓದಲಿಕ್ಕೆ ಸಮಸ ಸಿಗಲಿಲ್ಲ, ಕೊನೆಗೆ ಭಾನುವಾರ ಪಾಕಕ್ರಾಂತಿಗೆ ಮಂಗಳ ಹಾಡಿದ್ದಾಯಿತು.

ಈ ಪುಸ್ತಕದಲ್ಲಿನ ಕಥೆಗಳು ಈ ಮೊದಲು ಲಂಕೇಶ್ ಪತ್ರಿಕೆ, ತುಷಾರ, ಸುಧಾ, ವಿಕ್ರಾಂತ ಕರ್ನಾಟಕ, ಪ್ರಜಾವಾಣಿ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪಾಕ ಕ್ರಾಂತಿ ಎಂದಿನ ತೇಜಸ್ವಿಯವರ ಲವಲವಿಕೆಯ ಬರಹದಂತೆ ಒಮ್ಮೆ ನವಿರು ಹಾಸ್ಯ ಮತ್ತೊಮ್ಮೆ ಗಂಭಿರ ವಿಚಾರಗಳನ್ನು ಹೇಳುತ್ತಾ ಸಾಗುತ್ತೆ. ಮೊದಲನೆ ಕಥೆ ಪಾಕಕ್ರಾಂತಿ ಅಡುಗೆ ಮನೆಯಿಂದ ಶುರುವಾಗಿ ಕಲೆ, ವಿಜ್ಞಾನ, ಭಯೋತ್ಪಾದನೆ ಹೀಗೆ ಹಲವಾರು ವಿಷಯಗಳತ್ತ ಓದುಗನನ್ನ ಕರೆದೊಯ್ಯುತ್ತಾ ಪಾಕಕ್ರಾಂತಿಯ ಹಲವಾರು ಮಜಲುಗಳನ್ನ ನವಿರಾಗಿ ನಿರೂಪಿಸುತ್ತೆ.

ಪಾಕ ಕ್ರಾಂತಿ.

ಕೆಲವೆಲ್ಲಾ ಮನುಷ್ಯನಿಗೆ ಅನುಭಸಿದ ಮೇಲೆ ಅರ್ಥವಾಗುವುದು. ಮತ್ತೊಬ್ಬರು ಹೇಳಿದರೆ ತಲೆಗೆ ಹೊಗುವುದೇ ಇಲ್ಲ. ಉದಾಹರಣೆಗೆ ನನ್ನ ಶ್ರೀಮತಿ ಊರಿಗೆ ಹೋಗುತ್ತ ಅಡಿಗೆಮನೆ ಬಗ್ಗೆ ಕೆಲವು ಸೂಚನೆಗಳನ್ನು ಕೊಟ್ಟಳು. ಯಾವ್ಯಾವ ಡಬ್ಬದಲಿ ಏನೇನಿದೆ. ಸಾರಿನ ಪುಡಿ ಎಲ್ಲಿದೆ, ಸಾಸಿವೆ ಎಲ್ಲಿದೆ, ಮೆಣಸಿನಕಾಯಿ ಎಲ್ಲಿಟ್ಟಿದ್ದೇನೆ ಇತ್ಯಾದಿ. ಇದರ ಜೊತೆದೆ ಅಡುಗೆಮನೆ ಚೊಕ್ಕಟವಾಗಿ ಇಡುವ ಅಗತ್ಯವನ್ನೂ ಒತ್ತಿ ಹೇಳುದಳು. ನನಗೆ ಇದರಿಂದ ಸ್ವಲ್ಪ ರೇಗಿತು. ನಾನು ಒಳಗೊಳಗೇ ಹೆಂಗಸರು ತಾವು ಇಲ್ಲದಿದ್ದರೆ ಪ್ರಪಂಚದ ಗಂಡಸರೆಲ್ಲಾ ಊಟವಿಲ್ಲದೆ ಸತ್ತೇ ಹೋಗುತ್ತಾರೆಂದು ತಿಳಿದಿದ್ದಾರೆ. ಬೇಳೆ ಬೇಯಿಸಿ ಅದಕೊಂದಷ್ಟು ಉಪ್ಪೂ ಖಾರ ಹಾಕಿ ಸಾರು ಮಾಡಿ, ಅನ್ನ ಬೇಯಿಸಿಕೊಂಡು ತಿನ್ನೂವಷ್ಟೂ ನಮ್ಗೆ ಚೈತನ್ಯ ಇಲ್ಲವೆ? ಅಡಿಗೆ ಮನೆ ಚೊಕ್ಕಟವಾಗಿಡಬೇಕೆನ್ನುವುದು ಅದೇನು ಅಷ್ಟೊಂದು ಮುಖ್ಯವೆ? ” ಅಡುಗೆಮನೆ ಆಪರೇಶನ್ ಥಿಯೇಟರೆ? ಏಕೆಂದರೆ ಅಡುಗೆಮನೆಯ ಕಸ, ಧೂಳು ಇತ್ಯಾದಿಗಳು ತಿನ್ನುವ ಆಹಾರದೊಳಗೆ ಬೀಳದಂತೆ ನೋಡಿಕೊಂಡರೆ ಸಾಕು. ಬೇಕಾದಷ್ಟಾಯ್ತು” ಎಂದು ಗೊಣಗಿಕೊಂಡರೂ ಊರಿಗೆ ಹೊರಟವಳ ಹತ್ತಿರ ಮತ್ತೆ ಯಾಕೆ ಕ್ಯಾತೆ ತೆಗೆದು ಜಗಳವಾಡುವುದು, ಇವಳು ಹೇಳುವುದನ್ನೆಲ್ಲಾ ಹೇಳಿ ಮುಗಿಸಲಿ ಎಂದು “ಹು ಹು” ಎಂದೆ. ಅಡಿಗೆ ಪಾತ್ರೆಗಳನ್ನು ದಿನಾ ತೊಳೆಯುವುದರ ಬಗ್ಗೆಯೂ ನನ್ನದೇ ಆದ ಕೆಲವು ಅಭಿಪ್ರಾಯಗಳಿದ್ದವು. ಅಡಿಗೆ ಪಾತ್ರೆಗಳ ಹೊರಭಾಗಗಳನ್ನು ದಿನಾ ತೊಳೆಯುವುದು ಅನವಶ್ಯಕ ಎಂದೇ ನನ್ನ ಅಭಿಮತ. ಮತ್ತೆ ಒಲೆಯ ಮೇಲಿಟ್ಟು ತಳವೆಲ್ಲಾ ಮಸಿ ಹಿಡಿಯುವ ಈ ಪಾತ್ರೆಗಳ ಹೊರಭಾಗ ಕ್ಲಿನಾಗಿದ್ದರೆಷ್ಟು! ಬಿಟ್ಟರೆಷ್ಟು! ಅಡಿಗೆಯ ರುಚಿಗೂ ಪಾತ್ರೆಗಳ ಹೊರ ಭಾಗ ತಳತಳ ಹೊಳೆಯುವುದಕ್ಕೂ ಏನಾದರೂ ಸಂಭಂದವಿದೆಯ? ಹೆಲ್ತ್ ಇನ್ಸ್ ಪೆಕ್ಟರ್ ಏನಾದರೂ ನಮ್ಮ ಅಡುಗೆಮನೆ ಒಳಗೆ ಬಂದು ಇವನೆಲ್ಲಾ ಚೆಕ್ ಮಾಡಿ ಸರ್ಟಿಫಿಕೇಟ್ ಕೊಡುತ್ತಾನ? ಕೆಲವು ಪದಾರ್ಥಗಳನ್ನು ದಿನಾ ಮಾಡುವುದೂ ಸಹ ಅನವಶ್ಯಕವೆಂದೇ ನನ್ನ ಅಭಿಪ್ರಾಯ. ಉದಾಹರಣೆಗೆ ತಿಳಿಸಾರು ಇತ್ಯಾದಿ ಯಾಕೆ ದಿನಾ ಬೆಳಿಗ್ಗೆ ಎದ್ದು ಖಾರ ಕಡೆದು ಒಗ್ಗರಣೆ ಕೊಟ್ಟು ಮಾಡುತ್ತಾ ಇರಬೇಕು. ನಾಲ್ಕಾರು ದಿನಕ್ಕೆ ಆಗುವಷ್ಟು ಒಮ್ಮೆಗೇ ಮಾಡಿಟ್ಟು ಕುದಿಸಿ ಇಡಬಹುದಲ್ಲಾ? ಹೇಗೆ ನನಗೆ ಕೆಲವು ಅಮೋಘವಾದ ಅಭಿಪ್ರಾಯಗಳಿವೆ. ಆದರೆ ಯಾವ ಹೆಂಗಸರ ಹತ್ತಿರ ಇದನ್ನು ಹೇಳಿದರೂ ಅವರು ನನ್ನ ಅಭಿಪ್ರಾಯಗಳನ್ನು ಸ್ತ್ರೀ ಸ್ವಾತಂತ್ರ್ಯದ ಹಲವು ವಿದಾನಗಳೆಂದು ಪರಿಗಣಿಸದೆ ಬೆಚ್ಚಿಬಿದ್ದು, ಇಷ್ಟೋಂದು ಅನಾಗರೀಕ ಅಭಿರುಚಿ ಇರುವ ಮನುಷ್ಯನನ್ನು ಉತ್ತಮ ಕತೆಗಾರನೆಂದು ಕರೆಯುತ್ತೇವಲ್ಲ ಎಂದು ಆಶ್ಚರ್ಯಪಡುತ್ತಾರೆ. ಆದುದರಿಂದಲೇ ಅಡುಗೆಮನೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ಮಾಡಬೇಕೆಂದ ಯೋಚಿಸಿದ್ದ ನನ್ನ ಚಿಂತನೆ ಹೆಂಗಸರ ಬಳಿ ಹೇಳುವುದನ್ನು ನಿಲ್ಲಿಸಿದೆ. ಗಂಡಸರಿಗೆ ಹೇಳಿದರೋ, ತಮ್ಮ ಮನೆ ಹೆಂಗಸರಿಗೆ ವಿರಾಮ ಬಿಡುವು ಹೆಚ್ಚು ದೊರಕಿಸುವ ನನ್ನ ಯೋಜನೆಗಳ ಬಗ್ಗೆ ಯಾವ ಆಸಕ್ತಿಯನ್ನೂ ತೋರಿಸಲಿಲ್ಲ.

ಹೀಗೆ ಸಾಗುತ್ತೆ ತೇಜಸ್ವಿಯವರ ಪಾಕಕ್ರಾಂತಿ…

ಪಾಕಕ್ರಾಂತಿಯ ಬಗ್ಗೆ ಶ್ರೀನಿಧಿ ಏನು ಹೇಳುತ್ತಾನೆ ನೋಡಿ.

12
ಏಪ್ರಿಲ್
08

ಪುಟ್ಟ ಪಾದದ ಗುರುತು.

ಸಂಬಳ ಸಿಕ್ಕ ತಿಂಗಳ ಮೊದಲ ವಾರದಲ್ಲಿ ಒಂದಷ್ಟು ಪುಸ್ತಕಗಳನ್ನ ಕೊಳ್ಳುವುದು ಕಳೆದ ಐದಾರು ತಿಂಗಳಿಂದ ಆಚರಿಸಿಕೊಂಡು ಬಂದ ರೂಢಿ. ಕಳೆದ ತಿಂಗಳ ಮೊವತ್ತನೆ ತಾರೀಕೆ ಸಂಬಳ, ಗರಿ ಗರಿಯ ನೋಟುಗಳು ಜೇಬಿನಲ್ಲಿ ನಳನಳಿಸುತ್ತಿದ್ದವು. ಮತ್ತೆ ಮನಸ್ಸು ಹೇಗೆ ನಿಂತಾತು, ಕುಡುಕ ಸಾರಾಯಿ ಅಂಗಡಿ ಕಂಡೊಡನೆ ಲೋಕವ ಮರೆವಂತೆ ಮನೆಯ ಪಕ್ಕದಲ್ಲೆ ಇರುವ ಸಪ್ನ ಬುಕ್ ಹೌಸ್ ಕೈ ಬೀಸಿ ಕರೆದಿತ್ತು. ನೇರ ಮೂರನೆ ಮಹಡಿಯ ಪುಸ್ತಕಗಳಲ್ಲಿ ಕಳೆದು ಹೋಗಲು ಸಮಯ ಹಿಡಿಯಲಿಲ್ಲ, ಅರ್ಧ ಮುಕ್ಕಾಲು ಗಂಟೆ ಪೇರಿಸಿಟ್ಟ ಪುಸ್ತಕಗಳಲಿ ಚಂದದ ಶಿರ್ಷಿಕೆಯವನ್ನು ತೆಗೆದು ಮುಖಪುಟ ಗಮನಿಸಿ ಲೇಖಕ ಯಾರು? ಯಾರು ಮುನ್ನುಡಿ ಬರೆದಿದ್ದಾರೆ? ಅಂತೆಲ್ಲ ಗಮನಿಸಿ ಮತ್ತೆ ಅದೆ ಜಾಗದಲ್ಲಿ ಇಡುವುದು. ಮೊದಲೆ ಇಂಥ ಪುಸ್ತಕ ಕೋಳ್ಳಬೇಕು ಎಂದು ನಿರ್ಧರಿಸಿದ್ದರೆ ಕೆಲಸ ಸುಲಭ, ಆದರೆ ನಾನು ಸಾಮಾನ್ಯವಾಗಿ ಅಲ್ಲಿ ಹೋಗಿ ನೋಡಿ ಕೊಂಡವೆ ಹೆಚ್ಚು.

ಈ ಬಾರಿ ಹೊದಾಗ ಮೊದಲು ಕಣ್ಣಿಗೆ ಬಿದ್ದದು ಎಸ್ ಎಲ್ ಭೈರಪ್ಪನವರ “ದಾಟು”, ದಾಟು ಈ ಮೊದಲೆ ಓದಿದ್ದರಿಂದ ಹೊಸ ಪುಸ್ತಕದ ಹುಡುಕಾಟದಲ್ಲಿದ್ದಾಗ ಸಿಕ್ಕಿದ್ದು ಕುವೆಂಪು ಅವರ “ಮಲೆಗಳಲ್ಲಿ ಮದು ಮಗಳು”, ಮಲೆನಾಡ ಬದುಕಿನ ಬಗ್ಗೆ ತಿಳಿಯುವ ಕುತೂಹದಿಂದ ಅದನ್ನೆತ್ತಿಟ್ಟುಕೊಂಡೆ. ಮಧ್ಯದ ದೊಡ್ಡ ಸಾಲಿನಲ್ಲಿ ಪೇರಿಸಿಟ್ಟಿದ್ದ ಕಥಾ ಸಂಕಲನಗಳಲ್ಲಿ ಕೈಯಾಡಿಸಿ ಛಂದ ಪುಸ್ತಕ ಪ್ರಕಾಶನದ “ಪುಟ್ಟ ಪಾದದ ಗುರುತು” ಸಿಕ್ಕಿತು ಲೇಖಕಿಯ ಹೆಸರು ಅಪರಿಚಿತವಾಗೆ ಇತ್ತು ಸುನಂದ ಪ್ರಕಾಶ ಕಡಮೆ, ಮುನ್ನುಡಿಯಲ್ಲಿ ಜಯಂತ ಕಾಯ್ಕಿಯವರ ಮೊಹಕ ಸಾಲುಗಳು, ಕೇವಲ ೪೦ ರೂಗಳ ಚಂದದ ಮುಖಪುಟದ ಪುಸ್ತಕವನ್ನ ಕೊಳ್ಳದೆ ಇರುವುದಾದರು ಹೇಗೆ?

“ಪುಟ್ಟ ಪಾದದ ಗುರುತು” ಸುನಂದ ಪ್ರಕಾಶ ಕಡಮೆ ಅವರ ಚೊಚ್ಚಲ ಪುಸ್ತಕ ಮತ್ತು ಮೊದಲ ಕಥಾ ಸಂಕಲ ಕೂಡ, ನನಗೆ ತಿಳಿದ ಮಟ್ಟಿಗೆ. ಕೃತಿ ಮೊದಲನೆಯದಾದರು ಬರಹದ ಹಂದರ ಆಳವಾಗಿದೆ, ಬದುಕಿನ ಸೂಕ್ಷ್ಮ ವಿವರಳನ್ನ ಓಳಗೊಂಡ ಕಥೆಗಳು ನಮ್ಮ ಸುತ್ತ ಮುತ್ತ ಜರುಗುತ್ತಿರುವ ಅನುಭವವನ್ನ ಓದುಗನಲ್ಲಿ ಮೂಡಿಸುತ್ತವೆ. ಒಬ್ಬ ಆಪ್ತ ಮಿತ್ರನೊಡನೆ ಸರಾಗವಾಗಿ ಎಗ್ಗಿಲ್ಲದೆ ಮಾತನಾಡು ಪರಿಯಲ್ಲಿ ಕಥೆಗಳ ಹರಿವು ಕೊನೆಯ ತನಕ ತಣಿಸುವುದು. ಒಟ್ಟು ಹತ್ತು ಕಥೆಗಳಿದ್ದು, ಕೆಲವು ಕಥೆಗಳು ಈ ಮೊದಲು ವಿಜಯ ಕರ್ನಾಟಕ, ಉದಯವಾಣಿ ಇನ್ನು ಹಲವಾರು ಪತ್ರಿಕೆಗಳ ಕಥಾ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಕೃತಿಗಳೆ.

ಜಯಂತ ಕಾಯ್ಕಿಣಿಯವರ ಮುನ್ನುಡಿಯ ಸಾಲುಗಳು ಹೀಗೆ ಸಾಗುತ್ತವೆ…

ಸುನಂದಾರ ಸುಟಿಯಾದ ಕತೆಗಳು ರಭಸದಿಂದ ಹುಸಿದು ಹೋಗುತ್ತಿರುವ ಇಂದಿನ ನಮ್ಮ ಎಳೆ ಬಿಡಾರಗಳ ಸಾಂಸಾರಿಕ ಲಯವನ್ನು ಮತ್ತು ಅದನ್ನು ಪುಟ್ಟ ಸರಳ ಸಹಜ ದೈನಿಕದ ಎಳೆಗಳ ಮೂಲಕ ಮತ್ತೆ ಕಟ್ಟಲು ಯತ್ನಿಸುವ ಇಂದಿನ ಹೊಸ ತಾಯಿಯ ನಿತ್ಯದ ಸ್ಪೂರ್ತಿಯಲ್ಲು ಆಶ್ಚರ್ಯ ಹುಟ್ಟಿಸುವಂಥ ಪಕ್ವತೆಯಲ್ಲಿ ಮೃದುವಾಗಿ ಚಿತ್ರಿಸುತ್ತಿವೆ. ಆಳವಾದ ತಾಯ್ತನ ಮತ್ತು ಹದಿಹರೆಯದ ಕಣ್ಣಿನ ಫಳಫಳ ಚೈತನ್ಯ ಇವುಗಳ ಅಪರೂಪದ ಸಂಗಮದಲ್ಲಿ ಅಪಸ್ವರವಿಲ್ಲದೆ ಅರಳಿರುವ ಸುನಂದಾರ ಪ್ರಾಮಾಣಿಕ ಕತೆಗಳು ನಮ್ಮ ಬದುಕಿನ ಗುಣವನ್ನು ಆಪ್ತವಾಗಿ ಹೆಚ್ಚಿಸುತ್ತವೆ. 

-ಜಯಂತ ಕಾಯ್ಕಿಣಿ

ಗುಬ್ಬಿ ಗೂಡು

ಶ್ವಾಪುರದ ಜಾಧವ ಬಿಲ್ಡಿಂಗಿನ ದತ್ತೂ ಮಾಮನ ಮನೆಯಿಂದ ಹೊರಬಿದ್ದ ಸಂದೀಪ, ಎಸ್ಕೆ ಕಾಂಪ್ಲೆಕ್ಸ್ ಬಳಿ ಸಿಬಿಟಿ ಬಸ್ಸು ಹತ್ತಿ, ಕೋರ್ಟಿನ ಸರ್ಕಲ್ಲಿನಲ್ಲಿಳಿದಾಗ ಆಗಲೇ ಬೆಳಗಿನ ಒಂಬತ್ತೂವರೆ. ಪುಷ್ಪಾ ಮಾಮಿ ಚಹ ಕುಡಿಯಲು ಕೂತಾಗ ನಮ್ಮ ಪ್ರೀತಿಯ ಮೊದಲ ಹುಟ್ಟುಹಬ್ಬಕ್ಕೆ ನಿನ್ನ ಅಪ್ಪ ತೆಗೆಸಿಕೊಟ್ಟದ್ದಿದು ಎಂದು ಇಡ್ಲಿಪಾತ್ರೆ ತೋರಿಸುತ್ತ ಅಕ್ಕರೆಯಿಂದ ಒಂದೆರಡು ಇಡ್ಲಿ ಹೆಚ್ಚೇ ಬಡಿಸಿದ್ದು ಬಸ್ಸು ಹತ್ತಿದ ಕೂಡಲೇ ತೂಕಡಿಕೆ ತಂದುಬಿಟ್ಟಿತ್ತು. ದುರ್ಗದ ಬೈಲಿನಲ್ಲಿ ಪ್ರೀತಿ ಫೈನಾನ್ಸ್ ನಡೆಸುತ್ತ ಸದಾ ಸಫಾರಿ ಡ್ರೆಸ್ಸನ್ನೇ ತೊಡುತ್ತಿದ್ದ ದತ್ತೂ ಮಾಮ ಆಫೀಸಿಗೆ ತೆರಳುತ್ತಿ. ಮುಂದೆ ಓದಿ…

21
ಮಾರ್ಚ್
08

ಬಿಂಬಗಳು.

ಹಾವಿನಂತೆ ಹರಿದಾಡುವ ಇಕ್ಕಟ್ಟಾದ ರಸ್ತೆಗಳ ಇಕ್ಕೆಲಗಳಲ್ಲಿನ  ವಿದ್ಯುತ್ ಕಂಬಗಳು, ಮುಕ್ಕಾಗಿ ಪೂಜೆಯಿಲ್ಲದೆ ನಿಂತ ಮೂರ್ತಿಗಳಂತೆ, ತನ್ನ ಮೈತುಂಬೆಲ್ಲಾ  ಬಣ್ಣ ಬಣ್ಣದ ಬ್ಯಾನರ್ಗಳ ಪಳೆಯುಳಿಕೆಗಳಿಂದ,  ತುಂಡಾದ ಕೇಬಲ್ ತಂತಿಗಳಿಂದ, ಗತ ಕಾಲದ ಕಿಲುಬಿಡಿದ ತಗಡಿನ ಫ್ಯೂಜ್ ಪೆಟ್ಟಿಗಳಿಂದ, ಬಣ್ಣ ಮಾಸಿದ ಗಾಳಿಪಟದ ಬಾಲಾಂಗೊಸಿಯ ಬಟ್ಟೆ ತುಣುಕುಗಳಿಂದ  ಅಲಂಕರಿಸಿದ ಹಾಗೆ, ಬಿಸಿಲು ಮಳೆ ಗಾಳಿಯ ಬಡಿತಗೆ ಅಂಜದೆ  ನಿಂತಿವೆ. ಮೇಲ್ಬಾಗದ ಕಿಲುಬಿಡಿದ ಕಬ್ಬಿಣದ ಸರಳಿಗೆ ಉಂಗುರ ಪೊಣಿಸಿದಂತೆ ಇಟ್ಟ ಮೂರ್ನಾಲ್ಕು ಪಿಂಗಾಣಿಯ ದಿಮ್ಮೆಗಳು, ಮೂರ್ತಿಯ  ಮುಡಿಗೆರಿಸಿದ ಕಿರೀಟದಂತಿದವೆ.  ಅವುಗಳ ಮೇಲೆ ಮುಪ್ಪಾದ ಮುದುಕನಂತೆ ಬಾಗಿ ಹಾಯುವ ಅಲ್ಯೂಮಿಯಮ್ ತಂತಿಗಳು. ಒಂದನಿನ್ನೊಂದು ಮುತ್ತಿಕ್ಕದಂತೆ ಅಲ್ಲಲ್ಲಿ ತಂತಿಗಳಿಗೆ ಅಡ್ಡಲಾಗಿ ಸುತ್ತಿದ ಪ್ಲಾಸ್ಟಿಕ್ ಸರಳುಗಳು ರೈಲು ಕಂಬಿಗಳನ್ನ ನೆನಪಿಸುತಿದ್ದವು. ಪ್ರತಿ ಕಂಬಕೂ ಹತ್ತಾರು ಮನೆಗಳಿಂದ ಬಂದು ತಲುಪುತ್ತಿದ್ದ ವಿದ್ಯುತ್ ಪ್ರಸರಣ ಕಂಬಿಗಳು, ಅವೆಲ್ಲವುದರ ಗೊಜಲು ಬಿಂಬ ಮುಂಜಾನೆ ಮನೆಗಳ ಮುಂದೆ ಚುಕ್ಕಿಗಳ ನಡುವೆ ಸುಳಿದಾಡುವ ಸೊಟ್ಟ ರಂಗವಲ್ಲಿಯಂತಾಗಿತ್ತು. ಹೀಗೆ ರಸ್ತೆಯುದ್ದಕೂ ಎದ್ದು ನಿಂತಿದ್ದ  ಕಂಬಗಳು ಹೋಗಿ ಬರುವವರನ್ನ ತಡೆದು ನಿಧಾನಿಸುವ ಸಿಗ್ನಲ್ ದೀಪಗಳಾಗಿದ್ದವು. ರಸ್ತೆಯೊಳಕ್ಕೆ ಮುನ್ನುಗ್ಗುವ ಅವಸರವಿದ್ದಂತೆ ಸಾಲುಗಟ್ಟಿದ ವಠಾರಗಳು,  ಬೆಳಕನು ಕಾಣದ ಕಿಟಕಿಗಳ ಆನಿಕೊಂಡಿದ್ದ ಬಾಗಿಲುಗಳ ತೆರೆಗಳ ಹಿಂದೆ ಬದುಕು ಸಾಗಿತ್ತು.  ಇವೆಲ್ಲವನ್ನ ಹಾಯುತ್ತ ಹೋಗಿ ಬರುವ ವಾಹನಗಳ ನಡುವೆ ನುಸುಳಿಕೊಂಡು ಹೆಜ್ಜೆಹಾಕುವಾಗ, ನೆಸರನು ಕರಗಿ ಚಂದಿರನ ಬರುವಿಕೆಗಾಗಿ ಕಾದಿದ್ದಹಾಗಿತ್ತು ಬಾನು ಭೂವಿಯೆರಡು.

ಹಾದಿಯ ಇಕ್ಕೆಲದಲ್ಲಿ ಸಣ್ಣ ಡಬ್ಬಿಯಂತ ಚಹಾ ಅಂಗಡಿಗೆ ಅಂಟಿಕೊಂಡಿದ್ದ ಮಂದಿ. ಬೆಳಗಿನಿಂದ ದುಡಿದು ಮನೆಗೆ ಮರಳುವ ಮುನ್ನ ಒಂದು ಗುಟುಕು ಚಹಾ ಹೀರಿ, ಬೀಡಿಯ ಹೊಗೆಯಾಡಿಸಿ ಮರಳುವ ಕಾತರ ಹಲವು ಮುಖಗಳಲ್ಲಿ. ಮತ್ತೊಂದಷ್ಟು ಮಂದಿ ಬೆಳಗಿನಿಂದ ಕುಡಿದ ಚಹಾಗಳ ಲೆಕ್ಕವಿಲ್ಲ ಹೊಗೆಯಾಗಿಸಿದ ಬೀಡಿಗಳ ನೆನಪಿಲ್ಲ. ಅವರು ಮಾತಾಡದೆ ಇದ್ದ ವಿಷಯಗಳಿಲ್ಲ, ಮನೆಯ ಅಂಳದಿಂದ ಶುಋವಾಗುವ ವಿಷಯಗಳು ಸ್ಥಳಿಯ ಗೆರೆಗಳನ್ನ ದಾಟಿ, ಸರಕಾರ ರಾಜ್ಯ ಹೀಗೆ ಸಾಗಿದ್ದವು. ಸುತ್ತಲು ಆವರಿಸಿಕೊಳ್ಳುತ್ತಿದ್ದ ಕತ್ತಲ್ಲು, ಸಣ್ಣಗೆ ಕೊರೆವ ಮಾಗಿಯ ಚಳಿ ಉಣ್ಣೆಯ ಸ್ವೆಟರ್ನೊಳಗೆ ಕೈ ತುರುಕಿ ಬೆಚ್ಚಗಾಗಿಸುತ್ತ ಸಣ್ಣಗೆ ನಡುಗುತ್ತ, ದಾರಗಳಿಗೆ ಪೋಣಿಸಿದಂತೆ ತೂಗು ಬಿಟ್ಟಿದ್ದ ಹಲವಾರು ಭಾಷೆಯ ವೃತ್ತ ಪತ್ರಿಕೆ, ಮಾಸ ಪತ್ರಿಕೆಗಳತ್ತ ಮನಸ್ಸು ನೆಟ್ಟಿತು. ಒಂದರಮೇಲೊಂದು ಪೇರಿಸಿದ್ದ ಅವುಗಳ ಮುಖಪುಟ ಹಿಂಬದಿ ಕೊಂಚ ಇಣಿಕಿ ನೋಡುವ ತುಂಟ ಹುಡುಗಿಯ ಭಾವದಂತಿತ್ತು.  ಬಿರುಸಿನ ವ್ಯಾಪಾರದಲ್ಲಿ ಮಗ್ನನಾಗಿದ್ದ ಅಂಗಡಿಯವನಿಗೆ ಗಿರಾಕಿಗಳು ಕಿಂಗ್ ಅಂದ ಕೂಡಲೆ ಬಂಗಾರ ಬಣ್ಣದ ಸ್ಪುಟವಾದ ರಟ್ಟಿನ ಪೆಟ್ಟಿಗೆಯಲ್ಲಿ ಸಾಲು ಸಾಲಾಗಿ ಮಲಗಿದ್ದ ಶ್ವೇತ ಸುಂದರಿಯರ ಕೈ ಹಿಡಿದು ಕಳುಹಿಸುವನು, ಚಾ ಎಂದ ಕೂಡಲೆ ಪಂಪ್ ಸ್ಟೌವ್ ನ ಮಂದ ಜ್ವಾಲೆಗಳ ಮೇಲೆ ಕುದಿಯುತ್ತ ಘಮಗುಟ್ಟುವ ಚಹವನ್ನ ಬಸಿದು ಎತ್ತರಿಸಿ ಗಾಜಿನ ಲೋಟಕೆ ನೋರೆ ಬರುವ ಹಾಗೆ ಉಯ್ದು ಕೈಲಿಡುವನು.  ಪುಲ್ ಚಹಾ ಹಿಡಿದು ಪಕ್ಕದಲ್ಲೆ ರಸ್ತೆಗೆ ತಾಗಿದಂತಿದ್ದ ಕಲ್ಲು ಬೆಂಚಿನಲ್ಲಿ ಕೂತೆ, ಸುಡುವ ಚಾಹ ಲೋಟದಿಂದ ಅಂಗೈಗಳನ್ನ ಬೆಚ್ಚಗಾಗಿಸುತ ಒಂದೊಂದೆ ಗುಟುಕು ಹೀರಿ ಸುತ್ತಲ ಪರಿಸರವನ್ನ ನಿಲುಕುವಷ್ಟು ಗಮನಿಸುತ್ತಿದ್ದೆ. ಸಣ್ಣ ಗಾಡಿಗಳಲ್ಲಿ ಸೊಪ್ಪು ತರಕಾರಿ ಹರಡಿ ಮಾರುವವರು, ಅವರು ತಮ್ಮ ಗಿರಾಕಿಗಳೊಂದಿದೆಗೆ ವ್ಯವಹರಿಸುವ ಪರಿ. ಒಮ್ಮೆ ತಮಿಳು ಒಮ್ಮೆ ಹಿಂದಿ ಆಗಾಗ ಕೊಳ್ಳುವವರನ್ನು ಗಮನಿಸಿ ಬದಲಾಗುವ ಭಾಷೆ, ಮಾತಿನ ದಾಡಿ, ಏರಿಳಿತ ಕಾಣುವ ಬೆಲೆಗಳು. ಬದುಕ ಕಟ್ಟಿಕೊಳ್ಳಲು ಅವರ ಪ್ರತಿ ಕ್ಷಣಗಳ ಹೋರಾಟ ನಿರಂತರ ತೀರವ ತಟ್ಟುವ ಸಾಗರನ ಅಲೆಗಳಂತೆ ಸಾಗುತ್ತಲಿತ್ತು. ಇಂದು ಈ ನಗರ ಮೊದಲಿದ್ದ ಹಾಗೆ ಉಳಿದಿಲ್ಲ ದಿನೆ ದಿನೆ ಹೆಚ್ಚುತ್ತಿರುವ ದೊಡ್ಡ ಬಂಡವಾಳದಾರರ ಹಾವಳಿ, ಅವರು ಕೊಳ್ಳುವವರನ್ನು ಆಕರ್ಷಿಸುವ ಸಲುವಾಗಿ ರೂಪಿಸುವ ಮಾರಾಟದ ತಂತ್ರಗಳು.  ನೋಟಗಳ ಅರಸಿ ಸಾಗುತ್ತಿದ್ದ ಅಲೆಮಾರಿ ಮನಸ್ಸು ಹತ್ತಾರು ವಿಷಯಗಳನ್ನ ಕೌತುಕದಿಂದ ಹುಡುಕುತ್ತಲೆ ಇತ್ತು….. ಆದರೆ ಕೈಯಲ್ಲಿ ಹಿಡಿದಿದ್ದ  ಚಹ ಲೋಟ ಖಾಲಿ ಖಾಲಿ, ಇನ್ನೂ ಹುಡುಕುವ ಅರಿಯುವ ತವಕ ಇದ್ದೆ ಇತ್ತು.

18
ಮಾರ್ಚ್
08

‘ಟೈ’ ಎಂಬ ಕುತ್ತಿಗೆಗೆ ಸುತ್ತುವ ರಹಸ್ಯ ಗಂಟಿನ ಸುತ್ತ.

ಡಿಗ್ರಿ ಗಿಟ್ಟಿಸುವ ಸಲುವಾಗಿ ಓದೊದನ್ನ ಬಿಟ್ಟು ಸುಮಾರು ಎರಡು ಮುಕ್ಕಾಲು ವರ್ಷಗಳೆ ಕಳೆದು ಹೋದವೆನೊ, ಕಲಿತ ಕಾಲೇಜಿಗೆ ಗುಡ್ ಬೈ ಹೇಳಿ ಕೆಲಸ ಹುಡುಕಿಕೊಂಡು ಈ ಮಹಾನಗರಕ್ಕೆ ಬಂದದ್ದು ಆಯ್ತು. ಐದಾರು ಜನ ಒಟ್ಟಿಗೆ ಕಲಿತವರು ಇಲ್ಲೂ ಕೂಡ ಒಂದೆ ನೆಲೆಯಲ್ಲಿ ಬದುಕುತಿದ್ದಿವಿ, ಬೆಳಗ್ಗೆ ಮಬ್ಬು ಕತ್ತಲೆಯಿಂದಲೆ ಶುಋವಾಗುವ ನಮ್ಮ ಓಟ ಎಲ್ಲ ದಿಕ್ಕುಗಳೆಡೆಗೂ ಸಾಗುತ್ತೆ. ಒಬ್ಬ ಕೇಂಗೆರಿಯಾದರೆ ಮತ್ತೊಬ್ಬ ಎಲೆಕ್ಟ್ರಾನಿಕ್ ಸಿಟಿ ಹೀಗೆ ಸಾಗುತ್ತೆ ಒಬ್ಬೊಬ್ಬರ ದಾರಿ, ಮತ್ತೆ ರಾತ್ರಿ ಕತ್ತಲಲ್ಲಿ ಒಟ್ಟಾಗುವ “ನಮ್ಮ ಸಂಸಾರ ಆನಂದ ಸಾಗರ”.

ಮೊನ್ನೆ ನಮ್ಮನೆಲಿ ಹಬ್ಬದ ವಾತವರಣ ನಮ್ಮ ಹುಡ್ಗ ಪ್ರೀತಿಶ ಇನ್ಪೊಸಿಸ್ ನಲ್ಲಿ ನೌಕರಿ ಗಿಟ್ಟಿಸಿದ್ದ, ಕಂಪನಿ ಕಳ್ಸಿದ್ದ ಹತ್ತಾರು ಪುಟಗಳ ಕಾಲ್ ಲೆಟರ್ ನಲ್ಲಿ ಒಂದೆರಡು ಪುಟ ಹೇಗೆ ಬರ್ಬೆಕು ಯಾವತ್ತು ಯಾವತರಹದ ಬಟ್ಟೆ ತೊಡ್ಬೆಕು ಅಂತೆಲ್ಲ ಮಾರುದ್ದ ಕಂಡಿಷನ್ ಹಾಕಿದ್ರು. ನಮ್ಮ ಸಮಸ್ಯೆ ಶುಋವಾಗಿದ್ದು ವಾರಕ್ಕೆರಡು ದಿನ ಟೈ ಸುತ್ತಿಕೊಂಡು ಹೋಗಬೇಕಾದ ವಿಚಾರ ತಿಳಿದಾಗ. ನಮ್ಮ ಐದು ಮಂದಿಗೂ ಜೀವಮಾನದಲ್ಲಿ ಟೈ ಕಟ್ಟಿಕೊಂಡ ನೆನಪಿಲ್ಲ ಅಭ್ಯಾಸವು ಇಲ್ಲ. ನಾವು ಕೆಲಸ ಮಾಡೊ ಕಂಪನಿಯವರು ಪಾಪ ಯಾವತ್ತು ನಮ್ಮನ್ನ ಹೀಗೆ ಬಟ್ಟೆ ಹಾಕಂಡು ಬನ್ನಿ ಅಂದವರಲ್ಲ. ನನ್ನ ತಂಗಿ ಪ್ರಾಥಮಿಕ ಶಾಲೆಗೆ ಹೋಗೊವಾಗ ಟೈ ಕಟ್ಟಿಕೊಳ್ಳುತಿದ್ದ ನೆನೆಪು, ಆದ್ರೆ ಅಲ್ಲಿ ಗಂಟು ಹಾಕೊ ಪ್ರಮೇಯವಿರಲಿಲ್ಲ. ಅಂಗಿಯ ಕಾಲರ್ ಸುತ್ತ ಸಿದ್ದಮಾಡಿಟ್ಟ ಟೈನ ದಾರ ಕಟ್ಟಿಕೊಂಡರಾಗಿತ್ತು. ಫಾರ್ಮಲ್ ಬಟ್ಟೆ ಧರಿಸಿದರೆ ಇಸ್ತ್ರಿ ಮಾಡ್ಬೆಕಾಗುತ್ತೆ ಅಂತ ಜೀಂನ್ಸ್ ಟೀ ಶರ್ಟ್ ಧರಿಸಿ ಕಾಲ ಕಳೆಯೊ ಪೈಕಿ ನಾವು. ಅಬ್ಬ!!! ಒಂದು ಜೀನ್ಸ್ ಇದ್ರೆ ಸಾಕು ಎಷ್ಟು ಬಾರಿ ಬೇಕಾದ್ರು ಓಗಿದೆ ಹಾಕ್ಕೊಬೊದು…. ಕೊಳೆಯಾದ್ರೆ ಅದೂ ಒಂಥರಾ ಫ್ಯಾಷನ್ 🙂 .

ಕೊನೆಗೆ ಬೆಂಗಳೂರಿನ ಮಿತ್ರ ವೃಂದದಲ್ಲಿ ನಮ್ಮ ಸಮಸ್ಯೆಯನ್ನ ಹೇಳಿಕೊಂಡಾಗ ನಕ್ಕವರೇ ಹೆಚ್ಚು, ಆಲ್ಲ ಮಾರಾಯರ ಎಲ್ಲಾ ಮಲ್ಟಿನಾಷನಲ್ ಕಂಪನಿಗಳಲ್ಲಿ ಕೆಲಸ ಮಾಡ್ತಿರಾ, ಒಂದು ಟೈ ಗಂಟು ಹಾಕ್ಲಿಕ್ಕೆ ಬರ್ಲಿಲ್ಲಾ ಅಂದ್ರೆ ನೀವು ಓದಿದ್ದೆಲ್ಲ ವೇಸ್ಟು, ಅಂತ ನಮ್ಮ ಡಿಗ್ರಿಗೆಲ್ಲ ಬೆಂಕಿ ಇಟ್ರು 🙂 . ನಮ್ಮ ಕಾರ್ಮೆಂಟ್ ಸ್ಕೂಲಿನಲ್ಲೆ ಇದೆಲ್ಲ ಕಲಿಸಿದ್ದಾರೆ ಗೊತ್ತಾ ಅಂದಾಗ ನೆನಪಾದದ್ದು ನಮ್ಮ ಸರಕಾರಿ ಶಾಲೆ. ಕೆಲಸಕ್ಕೆ ಬಾರದನ್ನೆಲ್ಲ ಮಾಡ್ತಿವಿ ಈ ಗಂಟು ಹಾಕೋದು ಕಣ್ಣುಕಟ್ಟಿನ ವಿದ್ಯೆನಾ ಅಂತ ಒಮ್ಮೆ ನೆಟ್ ನಲ್ಲಿ ಗಾಳ ಹಾಕಿ ಅಂದ ಕಾಲದಲ್ಲಿ ಗೆಳೆಯ ಕಳುಹಿಸಿದ್ದ ಒಂದು ಮೈಲ್ ಹಿಡಿದಾಯಿತು ಅದರಲ್ಲಿ ಸಚಿತ್ರವಾಗಿ ಹೇಗೆ ಗಂಟು ಹಾಕೋದು, ಯಾವ ಯಾವ ತರಹದಲ್ಲಿ ವಿಭಿನ್ನವಾದ ಗಂಟುಗಳನ್ನ ಹಾಕಬಹುದು ಎಂತೆಲ್ಲ ಇತ್ತು. ಕೊನೆಗೆ ನಾಲ್ಕಾರು ಬಾರಿ ವಿಚಿತ್ರ ಗಂಟುಗಳನ್ನ ಹಾಕಿ ಕೊನೆಗೆ ರಹಸ್ಯ ಗಂಟನ್ನು ಬೇದಿಸುವ ಹೊತ್ತಿಗೆ ಅಂದು ರಾತ್ರಿ ೧೨ ಆಗಿತ್ತು.

ಮೊನ್ನೆ ರಾತ್ರಿ ಆಫೀಸಿನಿಂದ ವಾಪಸ್ಸಾದ ಪ್ರೀತಿಶನ ಮುಖದಲ್ಲಿ ಒಂದು ಕಳೆ ಇತ್ತು, ಏನ್ಲಾ ಎಂತ ಸಮಾಚಾರ ಎಂದಾಗ ಇವತ್ತಿಂದ ಟೈಗೆ ಗುಡ್ ಬೈ ಇನ್ನು ಜೂನ್ ವರೆಗೆ ಆರಾಮು, ಇಷ್ಟಗಲ ನಕ್ಕ.

“ನಮ್ಮವರು ಯಾಕೇ ಹೀಗೆ ಪಾಶ್ಚಿಮಾತ್ಯ ರೀತಿ ರಿವಾಜುಗಳನ್ನ ಅನುಸರಿಸುತ್ತಾರೊ ಆ ದೇವರೆ ಬಲ್ಲ, ಅವರ ಹವಾಮಾನಕ್ಕೆ ಕೋಟು ಟೈ ಒಗ್ಗೂತ್ತೆ. ನಮ್ಮ ಬೆಂಗಳೂರಿನ ಎಪ್ರಿಲ್ ಮೇ ತಿಂಗಳ ಆ ಸುಡುವ ಬಿಸಿಲಿನಲ್ಲಿ ಸೂಟ್ ಹಾಕಂಡು ಟೈ ಸುತ್ಕಂಡು ಡೈರಕ್ಟ್ ಮೇಲಕ್ಕೆ ಹೋಗ್ಬೆಕು ಅಷ್ಟೆ”.

ನಮ್ಮ ಹಾಗೆ ನೀವು ಈ ಗಂಟಿನ ರಹಸ್ಯ ತಿಳಿಬೇಕೆ ಇಲ್ಲಿ ಕ್ಲಿಕ್ಕಿಸಿ….

http://fungags.blogspot.com/2008/03/tie-problem-solved.html
http://forums.bollyent.com/tie-problem-solved-t-20860.html

 
ಯಾವಾಗ ಬರೆದದ್ದು.

ಈ ತಿಂಗಳ ಪಂಚಾಂಗ.

ಜುಲೈ 2018
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
« ಡಿಸೆ    
 1
2345678
9101112131415
16171819202122
23242526272829
3031  

p

Powered by eSnips.com
Advertisements